ಮಕ್ಕಳ ಭವಿಷ್ಯ ಬಂಗಾರವಾಗಿಸಲು ಪ್ರತೀ ಪೋಷಕರು ಕಾಳಜಿ ವಹಿಸಬೇಕು: ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ

Update: 2019-01-15 18:32 GMT

ಮಂಡ್ಯ,ಜ.15: ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಿ, ವ್ಯಕ್ತಿತ್ವ ರೂಪಿಸಿ ಅವರ ಭವಿಷ್ಯವನ್ನು ಬಂಗಾರಗೊಳಿಸುವ ನಿಟ್ಟಿನಲ್ಲಿ ಪ್ರತಿಯೊಂದು ಪೋಷಕರೂ ಕಾಳಜಿ ವಹಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಕೆ.ಟಿ. ಶ್ರೀಕಂಠೇಗೌಡ ಸಲಹೆ ನೀಡಿದರು. 

ನಗರದ ಕಲಾಮಂದಿರದಲ್ಲಿ ನಡೆದ ಮಹರ್ಷಿ ಸೆಂಟ್ರಲ್ ಸ್ಕೂಲ್‍ನ 2018-19ನೇ ಸಾಲಿನ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಗತ್ತು ಇಂದು ನಾಗಾಲೋಟದಲ್ಲಿ ಓಡುತ್ತಿದೆ. ಸ್ಪರ್ಧಾತ್ಮಕ ಯುಗದಲ್ಲಿ ಬದುಕುತ್ತಿದ್ದೇವೆ. ಇಡೀ ಜಗತ್ತು ಅತ್ಯಂತ ಹತ್ತಿರಕ್ಕೆ ಬಂದಿದೆ. ನಮ್ಮಲ್ಲಿ ಆಗಿರುವ ಕ್ರಾಂತಿಕಾರಿ ಜಾಗತಿಕ ಬದಲಾವಣೆಯಿಂದ ಇಡೀ ಜಗತ್ತಿನಲ್ಲಿ ಎಲ್ಲಿ ಬೇಕಾದರೂ ಹೋಗಿ ಉನ್ನತ ಸ್ಥಾನವನ್ನು ಅಲಂಕರಿಸುವಂತಹ ವಾತಾವರ ಇದೆ. ಇದನ್ನು ಸರಿಯಾದ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳುವುದು ಅಗತ್ಯ ಎಂದು ಹೇಳಿದರು. 

ಜಗತ್ತಿನಲ್ಲೇ ಆಯಕಟ್ಟಿನ ಸ್ಪರ್ಧೆ ಎನ್ನುವುದಿದ್ದಲ್ಲಿ ಮೊದಲನೇ ಸ್ಥಾನದಲ್ಲಿ ಜಪಾನ್, ಎರಡನೇ ಸ್ಥಾನದಲ್ಲಿ ಚೀನಾ ಹಾಗೂ 3ನೇ ಸ್ಥಾನದಲ್ಲಿ ಭಾರತವಿದ್ದು, ನಂತರದ ಸ್ಥಾನಗಳಲ್ಲಿ ಇಂಗ್ಲೆಂಡ್, ಅಮೆರಿಕಾ, ಜರ್ಮನ್, ಆಸ್ಟ್ರೇಲಿಯಾ ಇತರೆ ರಾಷ್ಟಗಳು ನಿಲ್ಲುತ್ತವೆ. ಜಗತ್ತಿನಲ್ಲಿರುವ ಆಯಕಟ್ಟಿನ ಸ್ಥಾನಗಳನ್ನು ಅಲಂಕರಿಸಬೇಕು ಎಂಬ ಆಸೆ, ಆಕಾಂಕ್ಷೆ ಹಳ್ಳಿಯಲ್ಲಿ ಹುಟ್ಟಿದ ಎಷ್ಟೋ ಮಂದಿ ಕನಸು ಕಂಡು ಅದನ್ನು ಸಾಕಾರಗೊಳಿಸಿರುವುದು ನಮ್ಮ ಕಣ್ಮುಂದೆ ಇದೆ ಎಂದು ಉದಾಹರಣೆ ಸಮೇತ ವಿವರಿಸಿದರು. 

ಇಂತಹ ಆಯಕಟ್ಟಿನ ಹುದ್ದೆಗಳ ಮೇಲೆ ಕಣ್ಣಿಟ್ಟಿರುವುದು ಭಾರತವಷ್ಟೇ ಅಲ್ಲ. ಬೇರೆ ದೇಶದವರೂ ಇದ್ದಾರೆ. ಹಳ್ಳಿಯಿಂದ ಹೋಗಿ ಅಮೆರಿಕಾ, ಆಸ್ಟ್ರೇಲಿಯಾ, ಇಂಗ್ಲೆಂಡ್‍ನಲ್ಲಿ ಆಯಕಟ್ಟಿನ ಸ್ಥಾನಗಳನ್ನು ಅಲಂಕರಿಸುವುದು ಸುಲಭದ ಮಾತೇನೂ ಅಲ್ಲ ಎಂದು ಹೇಳಿದರು. 

ಎತ್ತರದ ಕನಸುಗಳನ್ನು ಕಾಣಬೇಕು. ಅದು ಎಲ್ಲವನ್ನೂ ಸಾಧಿಸಲು ಪೂರಕ ವಾತಾವರಣ ನಿರ್ಮಾಣ ಮಾಡುತ್ತದೆ. ಸಣ್ಣ ಹಳ್ಳಿಯಿಂದ ಹೆಣ್ಣಮಗಳೊಬ್ಬಳು ಆಂಧ್ರದಲ್ಲಿ ಉನ್ನತ ಸ್ಥಾನವನ್ನು ಅಲಂಕರಿಸಿ ಒಳ್ಳೆಯ ವ್ಯಕ್ತಿತ್ವ ರೂಪಿಸಿಕೊಂಡಿದ್ದಾಳೆ ಎಂದು ತಿಳಿಸಿದರು. 

ಪೋಷಕರು ಒಳ್ಳೆಯ ಶಿಕ್ಷಣ ನೀಡಲು ಪರಿಶ್ರಮ ವಹಿಸುತ್ತಾರೆ. ಅದೇ ರೀತಿ ಮಕ್ಕಳೂ ಸಹ ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಕಠಿಣ ಶ್ರಮ ವಹಿಸಬೇಕು. ಸವಾಲಾಗಿ ಸ್ವೀಕಾರ ಮಾಡಿ ಬಹಳ ಎತ್ತರದ ಸ್ಥಾನಕ್ಕೆ ಹೋದಲ್ಲಿ ಪೋಷಕರು, ಶಿಕ್ಷಕರು ಶಾಲೆಯವರಿಗೂ ಸಮಾಧಾನ ಆಗುತ್ತೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. 

ಸಂಸ್ಥೆಯ ಅಧ್ಯಕ್ಷ ಡಾ.ಎಚ್. ಕೃಷ್ಣ ಮಾತನಾಡಿ, ಅಜ್ಞಾನದಿಂದ ಸುಜ್ಞಾನದೆಡೆಗೆ ಕೊಂಡೊಯ್ಯುವುದೇ ಶಿಕ್ಷಣ. ಸಾರ್ವತ್ರಿಕ ಶಿಕ್ಷಣದ ಉದ್ದೇಶವೂ ಇದೇ ಆಗಿದೆ. ಮಕ್ಕಳನ್ನು ಸತ್ಪ್ರಜೆಗಳನ್ನಾಗಿ ಮಾಡಿ ದೃಢವಾದ ಸಮಾಜ ನಿರ್ಮಾಣ ಮಾಡುವುದು ಮೂಲ ಉದ್ದೇಶವಾಗಿದೆ ಎಂದು ಹೇಳಿದರು. ಈಗಿನ ಕಾಲದಲ್ಲಿ ಕೇವಲ ಅಂಕ ಗಳಿಸುವುದಕ್ಕೆ ಮಾತ್ರ ಸೀಮಿತಗೊಳಿಸಲಾಗಿದೆ. ಅದು ಅನಿವಾರ್ಯ ಕೂಡ. ಹಿಂದೆಲ್ಲಾ ಶೇ. 60 ರಿಂದ 70ರಷ್ಟು ಅಂಕ ಗಳಿಸಿದ್ದರೆ ಸಾಕಾಗುತ್ತಿತ್ತು. ಈಗ ನೂರಕ್ಕೆ 98 ಗಳಿಸಿದರೂ ಸಾಲದು, ನೂರಕ್ಕೆ ನೂರು ಅಂಕಗಳನ್ನೂ ಪಡೆಯಬೇಕು. ಈ ನಿಟ್ಟಿನಲ್ಲಿ ಮಕ್ಕಳನ್ನು ಪ್ರೇರೇಪಿಸಲಾಗುತ್ತದೆ ಎಂದರು. 

ಇದರೊಂದಿಗೆ ಆತ್ಮಸ್ಥೈರ್ಯ ತುಂಬುವಂತಹ ಕೆಲಸವೂ ಆಗಬೇಕು. ಸಮಸ್ಯೆಗಳನ್ನು ಎದುರಿಸಿ ಮೌಲ್ಯವಂತರನ್ನಾಗಿ ಮಾಡುವಂತಹುದು ಪೋಷಕರ ಆದ್ಯ ಕರ್ತವ್ಯ. ಮಕ್ಕಳನ್ನು ಅಂಕವೀರರನ್ನಾಗಿಸುವ ಜೊತೆಗೆ ಅವರಲ್ಲಿ ಹುದುಗಿರುವ ಪ್ರತಿಭೆಗಳು ವಿಕಸಿಸಲು ಪೂರಕ ವಾತಾವರಣ ನಿರ್ಮಿಸಬೇಕು ಎಂದರಲ್ಲದೆ, ಮೌಲ್ಯವಂತ ಶಿಕ್ಷಣ ನೀಡುವುದು ಮಹರ್ಷಿ ವಾಲ್ಮೀಕಿ ಶಾಲೆಯ ಉದ್ದೇಶವೂ ಆಗಿದೆ ಎಂದು ತಿಳಿಸಿದರು. 

ಕಾರ್ಯಕ್ರಮವನ್ನು ಬೆಂಗಳೂರಿನ ಹಿಪ್ರೋ ಕ್ಯಾಂಪಸ್ ಲರ್ನಿಂಗ್ ಸೆಂಟರ್ ನ ಮುಖ್ಯಸ್ಥೆ ಸಾ.ರಾ. ಮಿಶ್ರಾ ಉದ್ಘಾಟಿಸಿದರು. ಸಂಸ್ಥೆಯ ಕಾರ್ಯದರ್ಶಿ ಡಾ. ಪಾವನ ಕೃಷ್ಣ, ಪ್ರಾಂಶುಪಾಲ ಸುಭರ್ಣ, ಉಪ ಪ್ರಾಂಶುಪಾಲ ಪಂಚಲಿಂಗು ಸಮಾರಂಭದಲ್ಲಿ ಭಾಗವಹಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News