ಪ್ರಧಾನಿ ಮೋದಿಗೆ ರಾಜಕೀಯ ಅಭದ್ರತೆ ಕಾಡುತ್ತಿದೆ: ಕಾಂಗ್ರೆಸ್ ಮುಖಂಡ ಎಂ.ಸಿ.ನಾಣಯ್ಯ

Update: 2019-01-15 18:36 GMT

ಮಡಿಕೇರಿ, ಜ.15: ಪ್ರಧಾನಿ ಮೋದಿಗೆ ರಾಜಕೀಯ ಅಭದ್ರತೆ ಕಾಡುತ್ತಿರುವುದರಿಂದಾಗಿಯೇ ಕರ್ನಾಟಕದಲ್ಲಿ ಬಿಜೆಪಿ ಬೇರೆ ಪಕ್ಷಗಳ ಶಾಸಕರನ್ನು ಸೆಳೆಯುವ ಕುತಂತ್ರ ರೂಪಿಸಿದೆ. ಈ ಷಡ್ಯಂತ್ರದ ಹಿಂದೆ ಮೋದಿ ಕೈವಾಡವಿದೆ ಎಂದು ಕಾಂಗ್ರೆಸ್ ನ ಹಿರಿಯ ಮುಖಂಡ ಎಂ.ಸಿ.ನಾಣಯ್ಯ ಆರೋಪಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಂ.ಸಿ.ನಾಣಯ್ಯ, ಗೋರೆಗಾಂವ್ ನಲ್ಲಿ ಬಿಜೆಪಿ ಶಾಸಕರನ್ನು ಸೆರೆಮನೆಯಲ್ಲಿಟ್ಟಂತೆ ಕೂಡಿಟ್ಟಿರುವ ವಿದ್ಯಮಾನಗಳು, ಬೇರೆ ಪಕ್ಷಗಳಿಂದ ಶಾಸಕರನ್ನು ಖರೀದಿಸುತ್ತಿರುವ ಬೆಳವಣಿಗೆಗಳು ಪ್ರಧಾನಿಗೆ ತಿಳಿದಿಲ್ಲವೇ. ಈ ಎಲ್ಲಾ ರಾಜಕೀಯ ಪ್ರಧಾನಿಗೆ ಸ್ಪಷ್ಟವಾಗಿ ತಿಳಿದಿದ್ದರೂ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿರಿಸಿಕೊಂಡು ದಕ್ಷಿಣ ಭಾರತದಲ್ಲಿ ತನ್ನ ವರ್ಚಸ್ಸು ಕಾಪಾಡಲು ಕರ್ನಾಟಕದ ಸಮ್ಮಿಶ್ರ ಸರಕಾರದ ಅತಂತ್ರಕ್ಕೆ ಮೋದಿ ಸಂಚು ರೂಪಿಸಿದ್ದಾರೆ. ಮುಂದಿನ ಚುನಾವಣೆಯ ನಂತರ ತಾನು ಪ್ರಧಾನ ಮಂತ್ರಿಯಾಗಲಾರೆನೋ ಎಂಬ ಅಭದ್ರತೆಯಿಂದ ನಲುಗಿರುವ ಮೋದಿ ಕರ್ನಾಟಕದಲ್ಲಿ ಸಮ್ಮಿಶ್ರ ಸರ್ಕಾರವನ್ನು ಅತಂತ್ರಗೊಳಿಸಲು ಮುಂದಾಗಿದ್ದಾರೆ ಎಂದು ದೂರಿದರು.

ಕೇವಲ 6 ತಿಂಗಳು ಕಳೆದಿರುವ ರಾಜ್ಯದ ಸಮ್ಮಿಶ್ರ ಸರಕಾರವನ್ನು ಅಭದ್ರಗೊಳಿಸುವ ತಂತ್ರಗಾರಿಕೆಯಿಂದಾಗಿ ತಾನು ವಿಶ್ವನಾಯಕರಲ್ಲೊಬ್ಬ ಎಂದು ನಂಬಿರುವ ಮೋದಿಯ ವರ್ಚಸ್ಸು ಜಗತ್ತಿನಾದ್ಯಂತ ಕುಗ್ಗಲಿದೆ. ಪ್ರಜಾಪ್ರಭುತ್ತದ ಆಶಯಗಳನ್ನೇ ಪ್ರಧಾನಿಯಾದವರು ಈ ರೀತಿ ಅತಂತ್ರಗೊಳಿಸುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದ ನಾಣಯ್ಯ, ವಂಶಪಾರಂಪರ್ಯ ರಾಜಕೀಯ ಎಂದು ಕಾಂಗ್ರೆಸ್ಸಿಗರನ್ನು ಟೀಕಿಸುತ್ತಿದ್ದ ಮೋದಿ ಇದೀಗ ಸರ್ವಾಧಿಕಾರದ ರಾಜಕಾರಣ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು. 

ಅಧಿಕಾರಕ್ಕೆ ಬಂದ 1 ತಿಂಗಳಲ್ಲಿಯೇ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ರೈತರ 7 ಸಾವಿರ ಕೋಟಿ ಸಾಲಮನ್ನಾ ಮಾಡಿದಾಗ ಮೌನವಾಗಿದ್ದ ಮೋದಿ ಕರ್ನಾಟಕದಲ್ಲಿ ಸಾಲಮನ್ನಾವಾದಾಗ ಅದನ್ನು ಲಾಲಿಪಾಪ್ ಎಂದು ಕರೆದರು. ಹಾಗಿದ್ದರೆ ಉತ್ತರ ಪ್ರದೇಶದಲ್ಲಿನ ಸಾಲಮನ್ನಾ ಬಗ್ಗೆ ಮೋದಿ ಲಾಲಿ ಪಾಪ್ ಎಂದು ಹೇಳಬಹುದೇ ಎಂದು ಎಂ.ಸಿ.ನಾಣಯ್ಯ ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News