ಕೇರಳಕ್ಕೆ ಅಕ್ರಮ ಬಂದೂಕು ತೋಟಾ ಮಾರಾಟ: ಮಡಿಕೇರಿಯಲ್ಲಿ ಮೂವರ ಬಂಧನ

Update: 2019-01-15 18:39 GMT

ಮಡಿಕೇರಿ, ಜ.15: ಬಂದೂಕು ತೋಟಾಗಳನ್ನು ಕೇರಳ ಮೂಲದ ವ್ಯಕ್ತಿಗೆ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಮಡಿಕೇರಿ ಮೂಲದ ಇಬ್ಬರು ಹಾಗೂ ಕೇರಳ ಮೂಲದ ಓರ್ವನನ್ನು ಮಡಿಕೇರಿ ಪ್ರವಾಸಿ ಮಂದಿರದ ಬಳಿ ಬಂಧಿಸುವಲ್ಲಿ ಜಿಲ್ಲಾ ಅಪರಾಧ ಪತ್ತೆ ದಳ ಯಶಸ್ವಿಯಾಗಿದೆ.

ಮಡಿಕೇರಿಯ ಬಂದೂಕು ಅಂಗಡಿಗಳಿಂದ ಬಂದೂಕು ತೋಟಾಗಳನ್ನು ಖರೀದಿಸಿ ಹೆಚ್ಚಿನ ಬೆಲೆಗೆ ಕೇರಳ ಮೂಲದ ವ್ಯಕ್ತಿಗೆ ಮಾರಾಟ ಮಾಡುತ್ತಿರುವ ಬಗ್ಗೆ ದೊರೆತ ಮಾಹಿತಿ ಹಿನ್ನೆಲೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಪನ್ನೇಕರ್ ಅವರ ಮಾರ್ಗದರ್ಶನದಲ್ಲಿ ಕಾರ್ಯಾರಚಣೆ ನಡೆಸಿದ ಪೊಲೀಸರು ಮೂವರನ್ನು ಬಂಧಿಸಿದರು.

ಅರ್ವತೊಕ್ಲು ಗ್ರಾಮದ ಪುತ್ತರೀರ ಪೂವಯ್ಯ, ಕೋಳುಮಾಡನ ಸಿ.ಸೂರಿ ಹಾಗೂ ಕೇರಳದ ಮುಳ್ಳಗೊಲ್ಲಿ ಪಂಚಾಯತ್ ಪಡಚರ ಗ್ರಾಮದ ಪ್ರಾನ್ಸಿಸ್ ಎಂಬವರನ್ನು ಬಂಧಿಸಲಾಗಿದೆ. ಆರೋಪಿಗಳಿಂದ ವಿವಿಧ ಕಂಪೆನಿಯ ಸುಮಾರು 263 ಬಂದೂಕು ತೋಟಾಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರ್ಯಾಚರಣೆಯಲ್ಲಿ ಅಪರಾಧ ಪತ್ತೆ ದಳದ ಪೊಲೀಸ ನಿರೀಕ್ಷಕರು ಎಂ. ಮಹೇಶ್, ಸಿಬ್ಬಂದಿಗಳಾದ ವಿ.ಜಿ.ವೆಂಕಟೇಶ್, ಬಿ.ಎಲ್.ಯೊಗೇಶ್ ಕುಮಾರ್, ಕೆ.ಆರ್.ವಸಂತ ಹಾಗೂ ಎಂ.ಎನ್.ನಿರಂಜನ್ ಪಾಲ್ಗೊಂಡಿದ್ದರು.

ಪೊಲೀಸರ ಕರ್ತವ್ಯ ಪ್ರಜ್ಞೆಯನ್ನು ಮೆಚ್ಚಿ ಎಸ್‍ಪಿ ಡಾ.ಸುಮನ್ ಅವರು ನಗದು ಬಹುಮಾನ ಘೋಷಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News