ಸಿಗದ ಪರಿಹಾರ: ಕೊಡಗು ಮಳೆಹಾನಿ ಸಂತ್ರಸ್ತ ಆತ್ಮಹತ್ಯೆಗೆ ಶರಣು

Update: 2019-01-16 11:42 GMT

ಮಡಿಕೇರಿ, ಜ.16: ಕಳೆದ ಆಗಸ್ಟ್ ನಲ್ಲಿ ಸುರಿದ ಧಾರಾಕಾರ ಮಳೆಗೆ ಕೃಷಿ ಭೂಮಿ ಮತ್ತು ವಾಸದ ಮನೆ ಕಳೆದುಕೊಂಡು ಬೀದಿ ಪಾಲಾಗಿರುವ ಸಂತ್ರಸ್ತರಲ್ಲಿ ಇನ್ನೂ ಕೂಡ ದು:ಖ ಮಡುಗಟ್ಟಿದೆ. ಮುಂದೆ ಏನು ಮಾಡಬೇಕು, ಹೇಗೆ ಬದುಕಬೇಕು ಎಂದು ಚಿಂತಿತರಾಗಿರುವವರು ಮಾನಸಿಕವಾಗಿ ದಿನದಿಂದ ದಿನಕ್ಕೆ ಕುಗ್ಗಿ ಹೋಗುತ್ತಿದ್ದಾರೆ.

ಜಮೀನು ಮತ್ತು ಮನೆ ಕಳೆದುಕೊಂಡು ಬೀದಿ ಪಾಲಾಗಿದ್ದ ವ್ಯಕ್ತಿಯೋರ್ವರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜೋಡುಪಾಲ ಗ್ರಾಮದಲ್ಲಿ ನಡೆದಿದೆ. ಎನ್.ಬಿ.ಚರಣ್(38) ಎಂಬವರೇ ವಿಷ ಸೇವಿಸಿ ಸಾವಿಗೆ ಶರಣಾದವರು. ಸರಕಾರದಿಂದ ಸಕಾಲದಲ್ಲಿ ಪುನರ್ವಸತಿ ವ್ಯವಸ್ಥೆ ಆಗುತ್ತಿಲ್ಲ ಎಂಬ ನೋವಿನಿಂದ ಚರಣ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬದ ಸದಸ್ಯರು ಆರೋಪಿಸಿದ್ದಾರೆ.

ಜ.10 ರಂದು ವಿಷ ಸೇವಿಸಿ ಅಸ್ವಸ್ಥರಾಗಿದ್ದ ಚರಣ್ ಅವರನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಜ.11ರಂದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಜ.12 ರಂದು ಮೃತಪಟ್ಟಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಈ ಕುರಿತು ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚರಣ್ ಅವರಿಗೆ 2ನೇ ಮೊಣ್ಣಂಗೇರಿ ಗ್ರಾಮದಲ್ಲಿ 5 ಎಕರೆ ಜಮೀನಿದ್ದು, ಪ್ರವಾಹ ಮತ್ತು ಭೂ ಕುಸಿತದಿಂದ ಬಹುತೇಕ ಕೊಚ್ಚಿ ಹೋಗಿತ್ತು. ಜೋಡುಪಾಲದಲ್ಲಿ ಇದ್ದ ಮನೆಯೂ ಪ್ರವಾಹದಲ್ಲಿ ಕಳೆದು ಹೋಗಿತ್ತು. ಇದರಿಂದ ಬೀದಿ ಪಾಲಾಗಿದ್ದ ಚರಣ್ ತೋಟದ ಅಭಿವೃದ್ಧಿಗೆ ಮಾಡಿದ್ದ ಬ್ಯಾಂಕ್ ಮತ್ತು ಕೈ ಸಾಲದ ಮೊತ್ತ 3 ಲಕ್ಷ ರೂ. ತೀರಿಸುವುದು ಹೇಗೆ ಎಂಬ ಚಿಂತೆಯಲ್ಲಿದ್ದರು ಎಂದು ಹೇಳಲಾಗಿದೆ.

ಹೃದ್ರೋಗಿ ತಾಯಿ ಶೀಲಾವತಿ ಅವರ ತಿಂಗಳ ಚಿಕಿತ್ಸಾ ವೆಚ್ಚ ಸುಮಾರು 3 ಸಾವಿರ ರೂ. ಹೊಂದಿಸಲು ಕೂಡ ಕಷ್ಟಪಡುತ್ತಿದ್ದ ಚರಣ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

"ಸರ್ಕಾರದಿಂದ ಇನ್ನೂ ಮನೆ ಸಿಕ್ಕಿಲ್ಲ ಎಂದು ನಮ್ಮ ಅಣ್ಣ ತುಂಬಾ ಬೇಸರದಲ್ಲಿದ್ದ. ವಾಸವಿದ್ದ ಮನೆ, ಬದುಕಿಗೆ ಆಸರೆಯಾಗಿದ್ದ ತೋಟ ನಾಶವಾಗಿ ಮಾಡಿದ ಸಾಲ ತೀರಿಸುವ ವಿಷಯದಲ್ಲಿ ಕುಗ್ಗಿಹೋಗಿದ್ದ. ಇದೇ ವಿಷಯ ನಮ್ಮ ಬಳಿ ಹೇಳಿಕೊಂಡು ದುಃಖಿಸುತ್ತಿದ್ದ. ಇದೀಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ” ಎಂದು ಚರಣ್ ಸಹೋದರ ಯತೀಶ್ ಎನ್.ಬಿ. ಬೇಸರ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News