ಮಂಗನ ಕಾಯಿಲೆ ಲಕ್ಷಣ: ಸಾಗರದ ಒಂಬತ್ತು ಮಂದಿ ಆಸ್ಪತ್ರೆಗೆ ದಾಖಲು

Update: 2019-01-16 12:10 GMT

ಶಿವಮೊಗ್ಗ, ಜ.16: ಜಿಲ್ಲೆಯ ಸಾಗರ ತಾಲೂಕಿನ ಅರಲಗೋಡು ಗ್ರಾಮದಲ್ಲಿ ಮಂಗನಕಾಯಿಲೆಯ ಹಾವಳಿ ಮುಂದುವರಿದಿದೆ. ಸಂಕ್ರಾಂತಿ ಹಬ್ಬವಾದ ಮಂಗಳವಾರದಂದು 9 ಜನರಲ್ಲಿ ಕೆ.ಎಫ್.ಡಿ ರೋಗ ಲಕ್ಷಣಗಳು ಕಂಡುಬಂದಿದ್ದು, ಇವರನ್ನು ಉಡುಪಿ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಂಗಳವಾರವೇ ಏಳು ಜನರನ್ನು ಮಣಿಪಾಲ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಬುಧವಾರ ಇಬ್ಬರನ್ನು ದಾಖಲಿಸಲಾಗಿದೆ. ಇತ್ತೀಚೆಗೆ ಮಂಗನಕಾಯಿಲೆಗೆ ಬಲಿಯಾಗಿದ್ದ ಯುವತಿ ಶ್ವೇತ ಜೈನ್ ರವರ ತಂದೆ ದೇವರಾಜ್ ಜೈನ್ ಕೂಡ ಜ್ವರದಿಂದ ಬಳಲುತ್ತಿದ್ದು, ಅವರನ್ನು ಕೂಡ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸ್ಥಳೀಯ ಆರೋಗ್ಯ ಇಲಾಖೆ ಮೂಲಗಳು ಮಾಹಿತಿ ನೀಡಿದೆ.

ಅರಲಗೋಡು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಂಗಳವಾರ ಒಟ್ಟಾರೆ 19 ಜನರ ಆರೋಗ್ಯ ಪರೀಕ್ಷೆಗೊಳಪಡಿಸಲಾಗಿದೆ. ಇದರಲ್ಲಿ 12 ಜನರ ರಕ್ತದ ಮಾದರಿ ಸಂಗ್ರಹಿಸಿ ಪ್ರಯೋಗಾಲಯದ ಪರೀಕ್ಷೆಗೆ ರವಾನಿಸಲಾಗಿದೆ. ಈ ನಡುವೆ ಅರಳಗೋಡು ಗ್ರಾಮದಲ್ಲಿ ಮಂಗಳವಾರ ಕೂಡ ಮೃತಪಟ್ಟ ಮಂಗದ ಶವ ಪತ್ತೆಯಾಗಿದೆ. ಅರಣ್ಯ ಇಲಾಖೆ ಮಾಹಿತಿ ಅನುಸಾರ ಇಲ್ಲಿಯವರೆಗೂ ಈ ಭಾಗದಲ್ಲಿ ಪತ್ತೆ ಹಚ್ಚಲಾಗಿರುವ ಮೃತ ಮಂಗಗಳ ಸಂಖ್ಯೆ ಸುಮಾರು 35 ಎಂದು ತಿಳಿದುಬಂದಿದೆ.

ಕಳೇಬರ ಪತ್ತೆ: ಹೊಸಂತೆ ಹಿರೇಬಿಲಗುಂಜಿ ವ್ಯಾಪ್ತಿಯಲ್ಲಿ ಮಂಗವೊಂದು ಟೊಂಗೆಯ ಮೇಲೆ ಅಸ್ವಸ್ಥ ಸ್ಥಿತಿಯಲ್ಲಿ ಕುಳಿತುಕೊಂಡಿದೆ. ಈ ಕುರಿತಂತೆ ಸ್ಥಳೀಯ ನಿವಾಸಿಗಳು ಆರೋಗ್ಯ ಇಲಾಖೆಯ ಗಮನಕ್ಕೆ ತಂದಿದ್ದಾರೆ. ಹೊಸನಗರ ತಾಲೂಕು ಹರತಾಳು ಗ್ರಾಮದಲ್ಲಿಯೂ ಮಂಗದ ಕಳೇಬರ ಪತ್ತೆಯಾಗಿದೆ.

ಹರಸಾಹಸ: ಇನ್ನೊಂದೆಡೆ ಅರಲಗೋಡು ಭಾಗದ ಹಲವೆಡೆ ಮಂಗಗಳು ಮರಗಳ ಮೇಲ್ಭಾಗದಲ್ಲಿಯೇ ಮೃತಪಟ್ಟಿವೆ. ಮರಗಳಲ್ಲಿ ಮೃತಪಟ್ಟಿರುವ ಮಂಗಗಳ ಕಳೇಬರವನ್ನು ಕೆಳಗಿಳಿಸಿ, ದಹಿಸುವುದು ಅರಣ್ಯ ಇಲಾಖೆ ಹಾಗೂ ಆರೋಗ್ಯ ಇಲಾಖೆಗಳಿಗೆ ದೊಡ್ಡ ಸಾಹಸವಾಗಿ ಪರಿಣಮಿಸಿದೆ.

ಜಾಗೃತಿ ಅಭಿಯಾನ: ಭಾರೀ ದೊಡ್ಡ ಪ್ರಮಾಣದಲ್ಲಿ ಮಂಗನಕಾಯಿಲೆ ಕಾಣಿಸಿಕೊಂಡಿರುವ ಸಾಗರ ತಾಲೂಕಿನ ಅರಲಗೋಡು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ನೌಕರರ ಸಂಘದ ಸಹಯೋಗದಲ್ಲಿ ಮಂಗನಕಾಯಿಲೆ ಮುಕ್ತ ಮಲೆನಾಡು ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News