ಮೈತ್ರಿ ಸರಕಾರಕ್ಕೆ ಯಾವುದೇ ಸಮಸ್ಯೆ ಇಲ್ಲ: ಮುಖ್ಯಮಂತ್ರಿ ಕುಮಾರಸ್ವಾಮಿ

Update: 2019-01-16 12:14 GMT

ಬೆಂಗಳೂರು, ಜ. 16: ರಾಜ್ಯದಲ್ಲಿನ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದಲ್ಲಿ ಯಾವುದೇ ಸಮಸ್ಯೆ ಇಲ್ಲ. ನಾನಂತೂ ಶಾಂತವಾಗಿಯೇ ಇದ್ದೇನೆ. ನಾನು ಕೂಲ್ ಆಗಿದ್ದೀನಿ ಅಂದ ಮೇಲೆ ಏನಾಗ್ತಿದೆ ಎಂದು ನೀವೇ ಅರ್ಥ ಮಾಡಿಕೊಳ್ಳಿ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರನ್ನು ಯಾವುದೇ ರೆಸಾರ್ಟ್‌ಗೆ ಶಿಫ್ಟ್ ಮಾಡುವುದಿಲ್ಲ. ಅದರ ಅಗತ್ಯವೂ ನಮಗೆ ಇಲ್ಲ. ಮೈತ್ರಿ ಸರಕಾರ ಸುಭದ್ರವಾಗಿದೆ. ಆದರೆ, ಸುದ್ಧಿವಾಹಿನಿಗಳು ಸರಕಾರ ಬೀಳುತ್ತದೆ ಎಂದು ಹೇಳುತ್ತಿವೆ ಎಂದು ದೂರಿದರು.

ಅತೃಪ್ತ ಶಾಸಕರು ನಿಮಗೆ ಸಿಗದೆ ಇರಬಹುದು. ಆದರೆ, ಮಾಜಿ ಸಚಿವ ರಮೇಶ್ ಜಾರಕಿಹೊಳಿ, ನಾಗೇಂದ್ರ ಸೇರಿದಂತೆ ಎಲ್ಲರೂ ನನ್ನ ಸಂಪರ್ಕದಲ್ಲಿದ್ದಾರೆ. ಮೂರು ದಿನಗಳಿಂದ ಎಲ್ಲರ ಜೊತೆ ನಾನು ಮಾತಾನಾಡಿದ್ದೇನೆ ಎಂದ ಕುಮಾರಸ್ವಾಮಿ, ಜೆಡಿಎಸ್‌ನಿಂದ ಆಪರೇಷನ್ ಮಾಡುವ ಅವಶ್ಯಕತೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ಎಐಸಿಸಿ ಪ್ರಧಾನ ಕಾರ್ಯದರ್ಶಿ, ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಅವರು ಬೆಂಗಳೂರಿನಲ್ಲೆ ವಾಸ್ತವ್ಯ ಹೂಡಿದ್ದು, ಸಭೆ ನಡೆಸಿದ್ದಾರೆ. ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸೇರಿದಂತೆ ಇನ್ನಿತರ ನಾಯಕರಿಂದ ಮಾಹಿತಿ ಸಂಗ್ರಹಿಸಿದ್ದಾರೆಂದು ಕುಮಾರಸ್ವಾಮಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News