ಪೌರತ್ವ ಮಸೂದೆ: ಅಸ್ಸಾಂ ಬಿಜೆಪಿಯಲ್ಲಿ ಬಿರುಗಾಳಿ

Update: 2019-01-17 03:40 GMT

ಗುವಾಹತಿ, ಜ.17: ಹಲವು ಎನ್‌ಡಿಎ ಘಟಕ ಪಕ್ಷಗಳ ನಿರ್ಗಮನಕ್ಕೆ ಕಾರಣವಾದ ಪೌರತ್ವ (ತಿದ್ದುಪಡಿ) ಮಸೂದೆ ಇದೀಗ ಅಸ್ಸಾಂ ಬಿಜೆಪಿಯಲ್ಲಿ ಭಿನ್ನಮತದ ಬಿರುಗಾಳಿಗೆ ಕಾರಣವಾಗಿದೆ. ಮಸೂದೆ ವಿರುದ್ಧ ಮತ್ತೆ ಇಬ್ಬರು ಬಿಜೆಪಿ ಶಾಸಕರು ಬಹಿರಂಗವಾಗಿ ವಿರೋಧ ವ್ಯಕ್ತಪಡಿಸಿರುವುದು ಬಿಜೆಪಿಗೆ ನುಂಗಲಾರದ ತುತ್ತಾಗಿದೆ.

"ವಿದೇಶಿಯರು ಎಂದೂ ವಿದೇಶೀಯರೇ. ಧರ್ಮವನ್ನು ಮಾನದಂಡವಾಗಿಟ್ಟುಕೊಂಡು ವಿದೇಶೀಯರಿಗೆ ಪೌರತ್ವ ನೀಡುವುದು ಸರಿಯಲ್ಲ. ಈ ಮಸೂದೆಯನ್ನು ನಾವು ಒಪ್ಪುವುದಿಲ್ಲ" ಎಂದು ಬಿಹ್‌ಪುರಿಯಾ ಬಿಜೆಪಿ ಶಾಸಕ ದೇಬಾನಂದ ಹಝಾರಿಕಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಸೂದೆ ವಿರೋಧಿಸುವವರು ಪದೇಪದೇ ಹೇಳುವಂತೆ ಯಾವುದೇ ಧರ್ಮದವರಾದರೂ ವಲಸಿಗರಿಗೆ ಪೌರತ್ವ ನೀಡುವುದು ಸರಿಯಲ್ಲ ಎಂದು ಪ್ರತಿಪಾದಿಸಿದರು. "ಅಕ್ರಮ ವಲಸಿಗರನ್ನು ಪತ್ತೆ ಮಾಡಲು ರಾಷ್ಟ್ರೀಯ ನಾಗರಿಕ ನೋಂದಣಿಯನ್ನು ಪರಿಷ್ಕರಿಸಬೇಕು. ಆದರೆ ಈ ಮಸೂದೆ ಅದಕ್ಕೆ ಅವಕಾಶ ನೀಡುವುದಿಲ್ಲ" ಎಂದು ಅಭಿಪ್ರಾಯಪಟ್ಟಿದ್ದಾರೆ.

ದಿಸ್‌ಪುರ ಕ್ಷೇತ್ರವನ್ನು ಪ್ರತಿನಿಧಿಸುವ ಬಿಜೆಪಿ ಶಾಸಕ ಅತುಲ್ ಬೋರಾ ಕೂಡಾ ತಾವು ಮಸೂದೆಯನ್ನು ವಿರೋಧಿಸುವುದಾಗಿ ಹೇಳಿಕೆ ನೀಡಿದ್ದಾರೆ. "ಪೌರತ್ವ (ತಿದ್ದುಪಡಿ) ಮಸೂದೆಗೆ ಕುರಿತ ನನ್ನ ನಿಲುವು ಸ್ಪಷ್ಟ. ನನ್ನ ಪಕ್ಷ ಈ ಬಗ್ಗೆ ಭಿನ್ನ ನಿಲುವು ಹೊಂದಿರಬಹುದು. ಆದರೆ ನಾನು ನನ್ನತನ ಉಳಿಸಿಕೊಳ್ಳುತ್ತೇನೆ. ನಮ್ಮ ಮುಖ್ಯಮಂತ್ರಿ ಮೇಘಾಲಯ ಸರ್ಕಾರದ ನಿಲುವಿನಿಂದ ಪ್ರೇರಣೆ ಪಡೆದುಕೊಳ್ಳಬೇಕು" ಎಂದು ಬೋರಾ ಸಲಹೆ ಮಾಡಿದ್ದಾರೆ.

ಮೇಘಾಲಯ ಈ ಮಸೂದೆ ವಿರುದ್ಧ ನಿರ್ಣಯ ಆಂಗೀಕರಿಸಿದ ಮೊಟ್ಟಮೊದಲ ಈಶಾನ್ಯ ರಾಜ್ಯವಾಗಿದೆ. ಬಾಂಗ್ಲಾದೇಶ, ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನಗಳ ಧಾರ್ಮಿಕ ಅಲ್ಪಸಂಖ್ಯಾತರಿಗೆ ಭಾರತದ ಪೌರತ್ವ ನೀಡಲು ಈ ಮಸೂದೆ ಅವಕಾಶ ಮಾಡಿಕೊಡುತ್ತದೆ.

ಈ ಮಸೂದೆ, ಸ್ಥಳೀಯ ಜನತೆಗೆ ಐಡೆಂಟಿಟಿ, ಭೂಮಿ ಹಾಗೂ ಮಾತೃಭೂಮಿಯನ್ನು ರಕ್ಷಿಸುತ್ತೇವೆ ಎಂಬ ಕೇಸರಿ ಪಕ್ಷದ ಭರವಸೆಗೆ ವಿರುದ್ಧವಾದದ್ದು ಎಂದು ಈ ಮೊದಲೇ ಬೋರಾ ಹೇಳಿಕೆ ನೀಡಿದ್ದರು. ಈ ವಾರದ ಆರಂಭದಲ್ಲಿ ಬಿಜೆಪಿಯ ಲೋಹೋವಾಲ್ ಶಾಸಕ ರಿತುಪರ್ಣ ಬೌರಹ್ ಹಾಗೂ ಸೂತಿಯಾ ಶಾಸಕಿ ಪದ್ಮಾ ಹಝಾರಿಕಾ ಕೂಡಾ ಮಸೂದೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News