​ಅವಿಶ್ವಾಸ ನಿರ್ಣಯದಿಂದ ಬ್ರಿಟನ್ ಪ್ರಧಾನಿ ಪಾರು

Update: 2019-01-17 04:08 GMT

ಲಂಡನ್, ಜ.17: ಬ್ರಿಟನ್ ಸಂಸತ್ತಿನಲ್ಲಿ ಬ್ರೆಕ್ಸಿಟ್ ಒಪ್ಪಂದಕ್ಕೆ ಸೋಲು ಉಂಟಾಗಿ ಅವಮಾನಕ್ಕೀಡಾಗಿದ್ದ ಪ್ರಧಾನಿ ತೆರೇಸಾ ಮೇ, ಬುಧವಾರ ಸಂಜೆ ಅವಿಶ್ವಾಸ ನಿರ್ಣಯದಲ್ಲಿ ಬಚಾವ್ ಆಗಿದ್ದಾರೆ. ಪಕ್ಷದ ಚೌಕಟ್ಟಿನಲ್ಲಿ ನಡೆದ ಮತದಾನದಲ್ಲಿ ತೆರೇಸಾ ಪರ 325 ಮತಗಳು ಚಲಾವಣೆಯಾದರೆ, ವಿರುದ್ಧ 302 ಮತಗಳು ಬಿದ್ದವು. ಬ್ರೆಕ್ಸಿಟ್ ಯೋಜನೆಗೆ ಸೋಲು ಉಂಟಾದ ಹಿನ್ನೆಲೆಯಲ್ಲಿ ಬ್ರಿಟನ್ ಯೂರೋಪಿಯನ್ ಯೂನಿಯನ್‌ನಿಂದ ನಿರ್ಗಮಿಸುವುದು ಹಾಗೂ ಆಕೆಯ ನಾಯಕತ್ವದ ಮೇಲೆ ದಟ್ಟ ಅನುಮಾನಗಳು ಕಾಡಿದ್ದವು.

ಸಾಮಾನ್ಯವಾಗಿ ಒಂದು ದಿನ ಹಿಂದೆಯಷ್ಟೇ ದೊಡ್ಡ ಅಂತರದಲ್ಲಿ ಅಂದರೆ 432-202 ಅಂತರದಿಂದ ಸರ್ಕಾರದ ಅತಿದೊಡ್ಡ ಕಾಯ್ದೆಯ ಬಗೆಗಿನ ಮತದಾನದಲ್ಲಿ ಸೋತ ಬ್ರಿಟಿಷ್ ಸರ್ಕಾರದ ಮುಖ್ಯಸ್ಥರು ರಾಜೀನಾಮೆ ನೀಡಬೇಕಾಗುತ್ತದೆ. ಆದರೆ ಇದು ವಿಶೇಷ ಸಂದರ್ಭವಾಗಿದ್ದು, ಅವಿಶ್ವಾಸ ನಿರ್ಣಯದಲ್ಲಿ ಪ್ರಧಾನಿ ಬಚಾವ್ ಆಗಿ ಅಚ್ಚರಿ ಮೂಡಿಸಿದ್ದಾರೆ.

"ಪ್ರಧಾನಿಯಾಗಿ ಮೇ ಮುಂದುವರಿಯುತ್ತಿರುವುದು ನಿಜಕ್ಕೂ ಅಚ್ಚರಿಯ ವಿಚಾರ" ಎಂದು ಲಿವರ್‌ಪೂಲ್ ವಿವಿ ರಾಜ್ಯಶಾಸ್ತ್ರ ಪ್ರೊಫೆಸರ್ ಜೋನಾಥನ್ ತೋಂಗ್ ಹೇಳಿದ್ದಾರೆ. "ಕೇವಲ ಸೋಲಿನ ಅಂತರ ಮಾತ್ರವಲ್ಲ; ಜತೆಗೆ ಇದು ಅತ್ಯುತ್ತಮ ಹಾಗೂ ಏಕೈಕ ಒಪ್ಪಂದ ಎಂದು ಅವರು ನಮ್ಮ ಬಳಿ ಹೇಳಿಕೊಂಡಿದ್ದರು. ಆದ್ದರಿಂದ ಹೇಗೆ ಮನವೊಲಿಸುತ್ತಾರೆ ಎನ್ನುವುದು ಆಂತರಿಕ ವಿಚಾರ" ಎಂದು ಅವರು ವಿವರಿಸಿದ್ದಾರೆ.

ಸೋಮವಾರ ಸಂಸತ್ತಿಗೆ ಮರಳುವ ಮೇ, ಸಂಸದರ ಎದುರು 28 ಸದಸ್ಯರ ಯೂನಿಯನ್‌ನಿಂದ ಹೊರಬರುವ ಪ್ಲಾನ್ ಬಿ ಪ್ರಸ್ತುಪಡಿಸಬೇಕಿದೆ. ಇಷ್ಟಾಗಿಯೂ, ಬ್ರಿಟನ್ ಯೂರೋಪಿಯನ್ ಬ್ಲಾಕ್‌ನಿಂದ ಹೇಗೆ ಹೊರಬರುತ್ತದೆ ಎಂಬ ಬಗ್ಗೆ ಇನ್ನೂ ಭಿನ್ನಾಭಿಪ್ರಾಯಗಳು ಉಳಿದುಕೊಂಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News