''ಪಾಕಿಸ್ತಾನ್ ಝಿಂದಾಬಾದ್ ಹೇಳಿದ್ದರೆನ್ನಲಾದ ವಿಡಿಯೋದಲ್ಲಿದ್ದವರು ಎಬಿವಿಪಿಯವರು''

Update: 2019-01-17 05:26 GMT

ಹೊಸದಿಲ್ಲಿ, ಜ.17: ''ಜೆಎನ್‌ಯು ಕ್ಯಾಂಪಸ್ಸಿನಲ್ಲಿ 2016ರ ಫೆಬ್ರವರಿ 9ರಂದು ಆಯೋಜಿಸಲಾಗಿದ್ದ ಸಭೆಯ ಸಂದರ್ಭ ‘ಪಾಕಿಸ್ತಾನ್ ಜಿಂದಾಬಾದ್’ ಎಂಬ ಘೋಷಣೆಗಳನ್ನು ಕೂಗಿದ್ದರೆನ್ನಲಾದ ಸುದ್ದಿ ವಾಹಿನಿಯೊಂದು ಪ್ರಸಾರ ಮಾಡಿದ ವಿಡಿಯೋ ತುಣುಕಿನಲ್ಲಿದ್ದವರು ಎಬಿವಿಪಿ ಸದಸ್ಯರು ಯಾ ಬೆಂಬಲಿಗರಾಗಿದ್ದರು'' ಎಂದು ಎಬಿವಿಪಿ ಪದಾಧಿಕಾರಿಗಳಾಗಿದ್ದ ಇಬ್ಬರು ಮಾಜಿ ಜೆಎನ್‌ಯು ವಿದ್ಯಾರ್ಥಿಗಳು ಬಹಿರಂಗಪಡಿಸಿದ್ದಾರೆ.

''ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದ ದಲಿತ ಸಂಶೋಧಕ ರೋಹಿತ್ ವೇಮುಲಾ ಆತ್ಮಹತ್ಯೆ ಪ್ರಕರಣದಿಂದ ಗಮನ ಬೇರೆಡೆ ಸೆಳೆಯಲೆಂದೇ ಜೆಎನ್‌ಯು ಕ್ಯಾಂಪಸ್ಸಿನಲ್ಲಿ ಆಯೋಜಿಸಲಾಗಿದ್ದ ಈ ಸಭೆಯ ಸಂದರ್ಭ ವಿವಾದ ಸೃಷ್ಟಿಸಲು ‘ಯೋಜನೆ’ ಹೂಡಲಾಗಿತ್ತು'' ಎಂದು ಬುಧವಾರ ಸುದ್ದಿಗಾರರ ಜತೆ ಮಾತನಾಡಿದ ಜೆಎನ್‌ಯು ಎಬಿವಿಪಿ ಘಟಕದ ಮಾಜಿ ಉಪಾಧ್ಯಕ್ಷ ಜತಿನ್ ಗೊರಯ್ಯ ಹಾಗೂ ಮಾಜಿ ಪ್ರಧಾನ ಕಾರ್ಯದರ್ಶಿ ಪ್ರದೀಪ್ ನರ್ವಾಲ್ ಆರೋಪಿಸಿದ್ದಾರೆ.

ಇವರಿಬ್ಬರೂ ಎಬಿವಿಪಿಗೆ ಫೆಬ್ರವರಿ 2016ರಲ್ಲಿ ರಾಜೀನಾಮೆ ನೀಡಿದ್ದರು. ‘‘ನಾವಿಬ್ಬರೂ ದಲಿತರಾಗಿದ್ದರಿಂದ ಎಬಿವಿಪಿಯನ್ನು ಸಮರ್ಥಿಸಿಕೊಳ್ಳಲು ಟಿವಿ ಸಂದರ್ಶನಗಳಲ್ಲಿ ಹಾಜರಾಗುವಂತೆ ನಮಗೆ ಸತತವಾಗಿ ಹೇಳಲಾಗಿತ್ತು. ಆದರೆ ವೇಮುಲಾರನ್ನು ಅವರು ಉಗ್ರನೆಂದು ಹೇಳುತ್ತಿದ್ದುದರಿಂದ ನಾವು ಅವರು ಹೇಳಿದಂತೆ ಕೇಳಲು ನಿರಾಕರಿಸಿದ್ದೆವು. ಫೆಬ್ರವರಿ 9ರ ಘಟನೆಯಲ್ಲಿ ಅವರು ಗಮನ ಬೇರೆಡೆಗೆ ಸೆಳೆಯಲು ಅವಕಾಶ ಕಂಡರು’’ ಎಂದು ಅವರಿಬ್ಬರು ಹೇಳಿಕೊಂಡಿದ್ದಾರೆ.

ಫೆಬ್ರವರಿ 9, 2016ರ ಸಭೆಗಿಂತ ಮೊದಲು ಆ ಘಟನೆಯನ್ನು ಹೇಗೆ ಉತ್ಪ್ರೇಕ್ಷಿಸುವುದೆಂಬುದರ ಬಗ್ಗೆಯೇ ಜೆಎನ್‌ಯು ಎಬಿವಿಪಿ ವ್ಯಾಟ್ಸ್ಯಾಪ್ ಗ್ರೂಪಿನಲ್ಲಿ ಚರ್ಚೆಯ ವಿಷಯವಾಗಿತ್ತೆಂದು ಜತಿನ್ ಹೇಳಿದ್ದಾರೆ.

ಆದರೆ ಇಬ್ಬರ ಆರೋಪವನ್ನೂ ಜೆಎನ್‌ಯು ವಿದ್ಯಾರ್ಥಿ ಯೂನಿಯನ್ನಿನ ಮಾಜಿ ಜಂಟಿ ಕಾರ್ಯದರ್ಶಿ ಸೌರಭ್ ಶರ್ಮ ನಿರಾಕರಿಸಿದ್ದಾರೆ. ‘‘ಇಬ್ಬರೂ ಕಾಂಗ್ರೆಸ್ ಸೇರಿದ್ದಾರೆ ಹಾಗೂ ಈ ಸುಳ್ಳು ಮತ್ತು ಅಪಪ್ರಚಾರದಿಂದ ಗಮನ ಬೇರೆಡೆ ಸೆಳೆಯಲು ರಾಹುಲ್ ಗಾಂಧಿ ಸೂಚನೆಯಂತೆ ಸುದ್ದಿಗೋಷ್ಠಿ ನಡೆಸಿದ್ದಾರೆ’’ ಎಂದು ಶರ್ಮ ಆರೋಪಿಸಿದ್ದಾರೆ.

ಪ್ರದೀಪ್ ಕಾಂಗ್ರೆಸ್ ಸೇರಿದ್ದರೂ, ಜತಿನ್ ಇನ್ನೂ ಕಾಂಗ್ರೆಸ್ ಸದಸ್ಯರಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News