ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಕೇರಳದ ಬಿಂದು, ಕನಕದುರ್ಗಾ

Update: 2019-01-17 09:23 GMT

 ಹೊಸದಿಲ್ಲಿ, ಜ.17: ಶಬರಿಮಲೆ ದೇಗುಲವನ್ನು ಪ್ರವೇಶಿಸಿ ಇತಿಹಾಸ ನಿರ್ಮಿಸಿದ್ದ ಕೇರಳದ ಇಬ್ಬರು ಮಹಿಳೆಯರಾದ ಬಿಂದು ಅಮ್ಮಿನಿ(40 ವರ್ಷ) ಹಾಗೂ ಕನಕ ದುರ್ಗಾ(39 ವರ್ಷ)ತಮಗೆ ಭದ್ರತೆ ನೀಡುವಂತೆ ಕೋರಿ ಸುಪ್ರೀಂಕೋರ್ಟ್‌ನ ಮೆಟ್ಟಿಲೇರಿದ್ದಾರೆ.

ತಮ್ಮ ಜೀವ ಅಪಾಯದಲ್ಲಿದೆ. ನಮಗೆ ಸ್ವಾತಂತ್ರವಿಲ್ಲವಾಗಿದೆ. ಒಬ್ಬ ಮಹಿಳೆ ಈಗಾಗಲೇ ಆಸ್ಪತ್ರೆಗೆ ಸೇರಿದ್ದಾರೆ ಎಂದು ಉಚ್ಚ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಹಿರಿಯ ವಕೀಲೆ ಇಂದಿರಾ ಜೈಸಿಂಗ್ ಅರ್ಜಿದಾರರ ಪರ ಕೋರ್ಟಿಗೆ ದೂರು ಸಲ್ಲಿಸಿದ್ದು, ಇಬ್ಬರಿಗೂ 24 ಗಂಟೆ ಪೊಲೀಸರ ಭದ್ರತೆ ನೀಡುವಂತೆ ವಿನಂತಿಸಿದ್ದಾರೆ. ನ್ಯಾಯಾಧೀಶರು ಶುಕ್ರವಾರ ಅರ್ಜಿ ವಿಚಾರಣೆ ನಡೆಸಲಿದ್ದಾರೆ.

ಶಬರಿಮಲೆ ದೇವಾಲಯ ಪ್ರವೇಶಿಸಿದ 50 ವರ್ಷದೊಳಗಿನ ಮೊದಲ ಮಹಿಳೆಯಾಗಿರುವ ಕನಕದುರ್ಗಾ ಇತ್ತೀಚೆಗೆ ತನ್ನ ಮನೆಗೆ ವಾಪಸಾದ ಸಂದರ್ಭದಲ್ಲಿ ಆಕೆಯ ಅತ್ತೆ ಅವರ ಮೇಲೆ ಹಲ್ಲೆ ನಡೆಸಿದ್ದು, ಅವರೀಗ ಮಲ್ಲಪ್ಪುರಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕನಕದುರ್ಗಾ ಹಾಗೂ ಬಿಂದು ಅಯ್ಯಪ್ಪ ದೇಗುಲ ಪ್ರವೇಶಿಸಿದ ಬಳಿಕ ಕೇರಳದಲ್ಲಿ ಭಾರೀ ಹಿಂಸಾಚಾರ ನಡೆದಿದ್ದು ಘಟನೆಗೆ ಸಂಬಂಧಿಸಿ ಕನಿಷ್ಠ 3,000 ಜನರನ್ನು ಬಂಧಿಸಲಾಗಿದೆ.

ಬಿಂದು ಕೇರಳದ ಕಣ್ಣೂರು ವಿವಿಯ ಕಾನೂನು ಉಪನ್ಯಾಸಕರಾಗಿದ್ದರೆ, ಕನಕ ದುರ್ಗಾ ಸರಕಾರದ ತಾತ್ಕಾಲಿಕ ಸಿಬ್ಬಂದಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News