ಇಷ್ಟವಿಲ್ಲದೇ ಇದ್ದರೆ ಪಕ್ಷ ತೊರೆದು ಬಿಡಿ: ಶತ್ರುಘ್ನ ಸಿನ್ಹಾಗೆ ಬಿಜೆಪಿ ನಾಯಕನ ಸಲಹೆ

Update: 2019-01-17 10:21 GMT

ಪಾಟ್ನಾ, ಜ. 17: ಬಿಜೆಪಿಯ ಪಟ್ನಾ ಸಾಹಿಬ್ ಕ್ಷೇತ್ರದ ಸಂಸದ, ಹಿರಿಯ ನಟ ಶತ್ರುಘ್ನ ಸಿನ್ಹಾ ಅವರಿಂದ ಬಹಳಷ್ಟು ಸಮಯದಿಂದ ಟೀಕೆಗೊಳಗಾಗಿರುವ ಬಿಜೆಪಿ ಕೊನೆಗೂ ಅವರಿಗೆ ಸಲಹೆಯೊಂದನ್ನು ನೀಡಿದೆ. ‘‘ನಿಮಗಿಷ್ಟವಿಲ್ಲದೇ ಇದ್ದರೆ ಪಕ್ಷವನ್ನು ತೊರೆದು ಬಿಡಿ,’’ ಎಂಬ ಖಡಕ್ ಸಲಹೆಯೊಂದನ್ನು ರವಾನಿಸಿದೆ.

ಬಿಹಾರದ ಉಪ ಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಸುಶೀಲ್ ಕುಮಾರ್ ಮೋದಿ ಅವರಿಂದ ಈ ಸಲಹೆ ಬಂದಿದೆ. ‘‘ಶತ್ರುಘ್ನ ಸಿನ್ಹಾ ಅವರು ಯಶವಂತ್ ಸಿನ್ಹಾ ಅವರ ಕೆಟ್ಟ ಸಹವಾಸಕ್ಕೆ ಬಿದ್ದಿದ್ದಾರೆ,’’ ಎಂದೂ ಅವರು ಹೇಳಿದ್ದಾರೆ.

ಮಂಗಳವಾರ ರಾತ್ರಿ ಟಿವಿ ವಾಹಿನಿಯೊಂದು ಆಯೋಜಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದ ಸುಶೀಲ್ ಕುಮಾರ್ ಮೋದಿ ‘‘ಶತ್ರುಘ್ನ ಸಿನ್ಹಾ ನನಗೂ ಅಚ್ಚುಮೆಚ್ಚಿನ ನಟ ಆದರೆ ಅವರು ಬಿಜೆಪಿಯನ್ನು ಟೀಕಿಸುತ್ತಿರುವ ರೀತಿ ನೀಡಿದಾಗ ಅವರು ಪಕ್ಷ ತ್ಯಜಿಸುವುದೇ ಮೇಲು. ಅವರಿಗೆ ಸಚಿವ ಹುದ್ದೆ, ಎರಡು ಅವಧಿಯ ರಾಜ್ಯಸಭಾ ಸದಸ್ಯತ್ವ ಹಾಗೂ ಎರಡು ಅವಧಿಯ ಲೋಕಸಭಾ ಸದಸ್ಯತ್ವ ನೀಡಿದ ಪಕ್ಷದ ವಿರುದ್ಧ ಅವರು ಎಲ್ಲ ರೀತಿಯ ಭಾಷೆಗಳನ್ನು ಪ್ರಯೋಗಿಸುತ್ತಿದ್ದಾರೆ,’’ ಎಂದರು.

‘‘ಸಿನ್ಹಾ ಅವರು ನೋಟು ಅಮಾನ್ಯೀಕರಣ ಹಾಗೂ ಜಿಎಸ್‌ಟಿ ಮಸೂದೆಯನ್ನು ಟೀಕಿಸುವುದರ ಜತೆಗೆ ಲಾಲು ಪ್ರಸಾದ್ ಸಹಿತ ವಿಪಕ್ಷ ನಾಯಕರನ್ನು ಭೇಟಿಯಾಗಿ ಈಗ ಅವರ ಪುತ್ರ ಬಿಹಾರದ ಮುಂದಿನ ಸಿಎಂ ಎಂಬಂತೆ ಬಿಂಬಿಸುತ್ತಿರುವುದು ಬಿಜೆಪಿಗೆ ಮುಜುಗರ ತಂದಿದೆ,’’ ಎಂದು ಸುಶೀಲ್ ಕುಮಾರ್ ಮೋದಿ ಹೇಳಿದರು.

‘‘ಅವರು ಕಳೆದ ಚುನಾವಣೆಯಲ್ಲಿ ಬಿಜೆಪಿ ನಾಯಕರ ಪ್ರಯತ್ನದಿಂದ ಗೆದ್ದಿದ್ದರು ಅವರಿಗೆ ಈಗ ತಮ್ಮ ಜನಪ್ರಿಯತೆಯ ಬಗ್ಗೆ ಖಚಿತತೆಯಿದ್ದರೆ ಮತ್ತೆ ಇದೇ ಕ್ಷೇತ್ರದಿಂದ ಸ್ಪರ್ಧಿಸಲಿ’’ ಎಂದು ಅವರು ಶತ್ರುಘ್ನ ಸಿನ್ಹಾಗೆ ಸವಾಲೆಸೆದರು.

ಪಟ್ನಾ ಸಾಹಿಬ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಲಿದ್ದಾರೆಂದು ಹೇಳಲಾಗುತ್ತಿರುವ ಸುಶೀಲ್ ಕುಮಾರ್ ಮೋದಿ ‘‘ಪಕ್ಷ ನಿರ್ಧರಿಸಿದರೆ ನಾನು ಸ್ಪರ್ಧಿಸುತ್ತೇನೆ, ನಾನು ಬಿಜೆಪಿ ಪಕ್ಷದಲ್ಲಿಯೇ ಹುಟ್ಟಿದವ, ಇದೇ ಪಕ್ಷದಲ್ಲಿಯೇ ಸಾಯುತ್ತೇನೆ,’’ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News