ಆಗುಂಬೆ ಬಳಿ 3 ಮಂಗಗಳ ಸಾವು: ಜ್ವರ ಪೀಡಿತ 6 ಮಂದಿ ಆಸ್ಪತ್ರೆಗೆ ದಾಖಲು

Update: 2019-01-17 12:14 GMT

ಶಿವಮೊಗ್ಗ, ಜ.17: ವ್ಯಾಪಕ ಜನಜಾಗೃತಿ ಹಾಗೂ ಔಷಧೋಪಚಾರದ ನಡುವೆಯೂ ಮಂಗನಕಾಯಿಲೆ ಹಾವಳಿ ಮುಂದುವರಿದಿದೆ. ಸಾಗರ ತಾಲೂಕಿನಲ್ಲಿ ಶಂಕಿತ ಮಂಗನ ಕಾಯಿಲೆ ಜ್ವರದಿಂದ ಬಳಲುತ್ತಿದ್ದ ಆರು ಮಂದಿಯನ್ನು ಬುಧವಾರ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಮತ್ತೊಂದೆಡೆ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಹಾಗೂ ಸುತ್ತಮುತ್ತಲಿನ ಕೆಲ ಗ್ರಾಮಗಳಲ್ಲಿ, ಮೂರು ಮಂಗಗಳ ಕಳೇಬರ ಪತ್ತೆಯಾಗಿದೆ. ಇದು ಸ್ಥಳೀಯ ನಿವಾಸಿಗಳಲ್ಲಿ ಆತಂಕ ಉಂಟು ಮಾಡಿದ್ದು, ಆರೋಗ್ಯ ಇಲಾಖೆಯು ಕೆಎಫ್‍ಡಿ ರೋಗ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಜನಜಾಗೃತಿ ಮೂಡಿಸುತ್ತಿದ್ದಾರೆ. 

ದಾಖಲು: ಸಾಗರ ತಾಲೂಕಿನ ಅರಳಗೋಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಸುತ್ತಮುತ್ತಲಿನ ಗ್ರಾಮಗಳ ನಿವಾಸಿಗಳಾದ ರಾಘವೇಂದ್ರ ಭಟ್ ಬಣ್ಣುಮನೆ, ಸೋಮರಾಜು ನಂದಿಹಕ್ಲು, ಪುಷ್ಪದಂತ ಮಂಡವಳ್ಳಿ, ಸವಿತಾ ತುಮರಿ, ರವಿ ನಂದೋಡಿ, ರಾಜಾಮತಿ ಅರಲಗೋಡು ಅವರಲ್ಲಿ ಶಂಕಿತ ಕೆಎಫ್‍ಡಿ ಜ್ವರ ಕಂಡುಬಂದಿದೆ. ಇವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಪತ್ತೆ: ತೀರ್ಥಹಳ್ಳಿ ತಾಲೂಕಿನ ಆಗುಂಬೆಯಲ್ಲಿ ಒಂದು ಹಾಗೂ ಸಮೀಪದ ಬಿಳಚಿಕಟ್ಟೆಯಲ್ಲಿ ಎರಡು ಮಂಗಗಳ ಮೃತದೇಹ ಪತ್ತೆಯಾಗಿದೆ. ವಿಷಯ ತಿಳಿಯುತ್ತಿದ್ದಂತೆ ಆರೋಗ್ಯ, ಅರಣ್ಯ ಇಲಾಖೆ ಹಾಗೂ ಸ್ಥಳೀಯ ಗ್ರಾ.ಪಂ. ಆಡಳಿತದವರು ಸ್ಥಳಕ್ಕೆ ಆಗಮಿಸಿ ಕಳೇಬರಗಳ ಪರಿಶೀಲನೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಕಳೇಬರಗಳನ್ನು ಸುಡಲಾಗಿದೆ. 

ಮಾಹಿತಿ ಸಂಗ್ರಹ: ಬುಧವಾರ ಉತ್ತರ ಕನ್ನಡ ಜಿಲ್ಲೆಯಿಂದ ಆಗಮಿಸಿದ ಕೀಟಾಣು ಶಾಸ್ತ್ರಜ್ಞರ ತಂಡವು ಜೈವಿಕ ತಂತ್ರಜ್ಞಾನದ ಮೂಲಕ ಕೀಟಾಣುಗಳಲ್ಲಿರುವ ವೈರಸ್‍ಗಳನ್ನು ಪತ್ತೆ ಹಚ್ಚಲು ಸಾಗರ ತಾಲೂಕಿನ ಅರಲಗೋಡು ಭಾಗಕ್ಕೆ ಆಗಮಿಸಿ ಕೆಎಫ್‍ಡಿ ವೈರಸ್ ಹರಡುವ ಉಣಗುಗಳನ್ನು ಸಂಗ್ರಹಿಸಿದ್ದಾರೆ. 

ಪರಿಹಾರ ಬಿಡುಗಡೆ: ಸಾಗರ ತಾಲೂಕಿನ ಅರಲಗೋಡು ಗ್ರಾಪಂ ಸುತ್ತಮುತ್ತಲು ಕೆಎಫ್‍ಡಿಯಿಂದ ಮೃತಪಟ್ಟ 6 ಕುಟುಂಬಗಳಿಗೆ ಆರೋಗ್ಯ ಸಚಿವ ಶಿವಾನಂದ ಪಾಟೀಲ್‍ರವರು ವೈಯಕ್ತಿಕವಾಗಿ ನೀಡಿದ ತಲಾ 1 ಲಕ್ಷ ರೂ.ಗಳ ಪರಿಹಾರ ಮೊತ್ತವನ್ನು, ಮಾಜಿ ಸಚಿವ ಕಾಗೋಡು ತಿಮ್ಮಪ್ಪರವರು ವಿತರಣೆ ಮಾಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News