ಸಂಕ್ರಾಂತಿ ಮಾಡಲು ಹೋದ ಬಿಜೆಪಿಗೆ ಸಂ‘ಭ್ರಾಂತಿ’: ಮುಖ್ಯಮಂತ್ರಿ ಕುಮಾರಸ್ವಾಮಿ

Update: 2019-01-17 12:24 GMT

ಬೆಂಗಳೂರು, ಜ. 17: ಸುಗ್ಗಿಯ ಹಬ್ಬ ಸಂಕ್ರಾಂತಿ ಮಾಡಲು ಹೋಗಿದ್ದ ರಾಜ್ಯ ಬಿಜೆಪಿ ಮುಖಂಡರಿಗೆ ಸಂ‘ಭ್ರಾಂತಿ’ಯಾಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಗುರುವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ನಾವು ಯಾವುದೇ ಆಪರೇಷನ್‌ಗೂ ಕೈ ಹಾಕಿಲ್ಲ. ಆದರೂ, ಬಿಜೆಪಿ ನಾಯಕರು ಎಲ್ಲ ರೀತಿಯ ವ್ಯರ್ಥ ಪ್ರಯತ್ನವನ್ನು ಮಾಡುತ್ತಿದ್ದಾರೆ ಎಂದು ದೂರಿದರು.

ರಾಜ್ಯದಲ್ಲಿನ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರವನ್ನು ಬಿಜೆಪಿ ನಾಯಕರು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದ್ದಾರೆಂದು ನಾವು ಎಲ್ಲಿಯೂ ಹೇಳಿಲ್ಲ. ಮೈತ್ರಿ ಸರಕಾರ ಅಸ್ಥಿರಗೊಳಿಸುವ ಪ್ರಯತ್ನ ನಡೆಸಲಾಗುತ್ತಿದೆ ಎಂಬುದನ್ನು ನಾನು ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ಬಿಜೆಪಿಯ ತಂತ್ರ ತಿರುವು-ಮುರುವು ಆಗಿದೆ ಎಂದು ಟೀಕಿಸಿದರು.

ಬಿಜೆಪಿ ಶಾಸಕರಿಗೆ ಆಮಿಷವೊಡ್ಡುತ್ತಿದ್ದೇವೆ ಎಂದು ಬಿಎಸ್‌ವೈ ಹೇಳುತ್ತಿರುವುದು ಆಶ್ಚರ್ಯವನ್ನುಂಟು ಮಾಡಿದೆ. ಹೊಸ ವರ್ಷದ ಸಂದರ್ಭದಲ್ಲಿ ನಾನು ಕುಟುಂಬದ ಜತೆ ವಿದೇಶಕ್ಕೆ ಹೋಗಿದ್ದನ್ನು ಬಿಎಸ್‌ವೈ ಟೀಕೆ ಮಾಡಿದ್ದರು. ಇದೀಗ ಯಾವ ಪುರುಷಾರ್ಥ ಸಾಧನೆಗಾಗಿ ಹರಿಯಾಣದ ಗುರುಗ್ರಾಮದ ಹೊಟೇಲ್ ನಲ್ಲಿ ಬಿಜೆಪಿ ಶಾಸಕರನ್ನು ಕೂಡಿಹಾಕಿದ್ದಾರೆ ಎಂದು ಪ್ರಶ್ನಿಸಿದರು.

ಐಷಾರಾಮಿ ಹೊಟೇಲ್ ನಲ್ಲೇ ಕುಳಿತು ಬಿಜೆಪಿ ಶಾಸಕರು ಬರ ಪರಿಸ್ಥಿತಿಯ ಅಧ್ಯಯನ ಮಾಡುತ್ತಿದ್ದಾರೆಯೇ? ತಾವು ಎರಡು-ಮೂರು ದಿನ ರಾಜ್ಯದಿಂದ ಹೊರ ಹೋಗಿದ್ದಕ್ಕೆ ಆರೋಪಗಳ ಸುರಿಮಳೆ ಗೈದಿದ್ದರು. ಈಗ ಬಿಜೆಪಿ ಶಾಸಕರನ್ನು ಹೊಟೇಲ್ ನಲ್ಲಿ ಕೂಡಿಹಾಕಿ ಅವರ ಮೊಬೈಲ್ ಫೋನ್‌ಗಳನ್ನು ಕಿತ್ತುಕೊಂಡು ದಿಗ್ಭಂಧನ ಹಾಕಲಾಗಿದೆ ಎಂಬ ಮಾಹಿತಿ ಬಿತ್ತರವಾಗುತ್ತಿದೆ. ರಾಜ್ಯದ ಜನತೆ ಬರ ಸ್ಥಿತಿ ನಿವಾರಣೆಯಾಗಿ ಕಷ್ಟದಿಂದ ಸುಖಕ್ಕೆ ಮರಳಿದ್ದಾರೆಯೇ ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ಒಂದು ವಾರದಿಂದ ಅಲ್ಲಿ ಕುಳಿತು ಶಾಸಕರನ್ನು ಕೂಡಿಹಾಕಿ ಏನು ಮಾಡುತ್ತಿದ್ದೀರಿ. ತಮ್ಮ ಶಾಸಕರನ್ನು ಸರಿಯಾಗಿ ಇಟ್ಟುಕೊಳ್ಳದೆ ನಮ್ಮ ಮೇಲೆ ಆರೋಪ ಮಾಡಲಾಗುತ್ತಿದೆ ಎಂದು ಬಿಜೆಪಿಯವರು ಹೇಳುತ್ತಿದ್ದರು. ಆದರೆ, ಇದೀಗ ಅವರೇನು ಮಾಡುತ್ತಿದ್ದಾರೆಂದು ಟೀಕಿಸಿದರು.

ಇತ್ತೀಚೆಗೆ ಶಾಸಕರನ್ನು ಹಿಡಿದಿಟ್ಟುಕೊಳ್ಳುವುದು ದೇಶದೆಲ್ಲೆಡೆ ನಡೆಯುತ್ತಿದ್ದು, ಸಂಪ್ರದಾಯವೂ ಆಗಿದೆ. ಆದರೆ, ನಿಮ್ಮ ಮತ್ತು ನಿಮ್ಮ ಶಾಸಕರ ನಡುವಿನ ಭಿನ್ನಾಭಿಪ್ರಾಯ ಏನಿದೆ ? ಇಲ್ಲದಿದ್ದರೆ ಏಕೆ ದಿಗ್ಭಂಧನ ಹಾಕುತ್ತಿದ್ದಿರಿ? ನಾವು ನಮ್ಮ ಶಾಸಕರಿಗೆ ಯಾವುದೇ ರೀತಿಯ ದಿಗ್ಬಂಧನ ಹಾಕಿಲ್ಲ. ಎಲ್ಲರನ್ನೂ ಮುಕ್ತವಾಗಿ ಬಿಟ್ಟಿದ್ದೇವೆ. ಬಿಜೆಪಿಯ ಪ್ರಯತ್ನಗಳಿಗೆ ನಾಡಿನ ಜನತೆ ಸೂಕ್ತ ಸಮಯದಲ್ಲಿ ತಕ್ಕ ಉತ್ತರ ನೀಡಲಿದ್ದಾರೆ ಎಂದು ಕುಮಾರಸ್ವಾಮಿ ಎಚ್ಚರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News