ಬಿಜೆಪಿಯ 'ಆಪರೇಷನ್ ಕಮಲ'ದ ವಿರುದ್ಧ ರಾಜ್ಯಾದ್ಯಂತ ಆಕ್ರೋಶ

Update: 2019-01-17 12:48 GMT

ಬೆಂಗಳೂರು, ಜ.17: ಮೈತ್ರಿ ಸರಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ನಡೆಸುತ್ತಿರುವ ಆಪರೇಷನ್ ಕಮಲದ ವಿರುದ್ಧವಾಗಿ ಬೆಂಗಳೂರು, ಚಿತ್ರದುರ್ಗ, ವಿಜಯಪುರ, ಮಂಡ್ಯ, ಹುಬ್ಬಳ್ಳಿ, ಬಳ್ಳಾರಿ, ಚಿಕ್ಕಮಗಳೂರು ಸೇರಿದಂತೆ ರಾಜ್ಯಾದ್ಯಂತ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು.

ಬೆಂಗಳೂರಿನ ಮೌರ್ಯ ವೃತ್ತದಲ್ಲಿ ಬೆಂಗಳೂರು ಕಾಂಗ್ರೆಸ್ ಸಮಿತಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಎಚ್.ಕೆ.ಪಾಟೀಲ್, ಸಚಿವ ಯು.ಟಿ.ಖಾದರ್, ಜಯಮಾಲಾ, ಬಿ.ಕೆ.ಹರಿಪ್ರಸಾದ್ ಸೇರಿದಂತೆ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿ, ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರದಲ್ಲಿ ಸಾಲು, ಸಾಲು ಹಗರಣಗಳು ನಡೆದಿವೆ. ನೀರವ್ ಮೋದಿ, ಲಲಿತ್ ಮೋದಿ, ವಿಜಯ್‌ ಮಲ್ಯ ಕೋಟ್ಯಂತರ ರೂ.ಕೊಳ್ಳೆ ಹೊಡೆದು ದೇಶ ಬಿಟ್ಟು ಓಡಿ ಹೋಗಿದ್ದಾರೆ. ಇವರಿಂದ ಅಕ್ರಮವಾಗಿ ಹಣ ಪಡೆದು, ಆ ಹಣದಿಂದಲೆ ಬಿಜೆಪಿ ನಾಯಕರು ಆಪರೇಷನ್ ಕಮಲ ಮಾಡಲು ಹೊರಟಿದ್ದಾರೆ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಹರಿಪ್ರಸಾದ್ ವಾಗ್ದಾಳಿ ನಡೆಸಿದರು.

ರಫೇಲ್ ಹಗರಣದ ಮೂಲಕ ಬಿಜೆಪಿ 30ಸಾವಿರ ಕೋಟಿ ರೂ. ಭ್ರಷ್ಟಾಚಾರ ನಡೆಸಿದೆ. ಈ ಪ್ರಕರಣ ಹೊರ ಬೀಳುತ್ತಿದ್ದಂತೆ ಜನತೆಯಿಂದ ಆಕ್ರೋಶ ವ್ಯಕ್ತವಾಗುತ್ತಿದೆ. ಹೀಗಾಗಿ ಜನತೆಯ ಚಿಂತನೆಯನ್ನು ಬೇರೆಡೆಗೆ ಸೆಳೆಯುವ ನಿಟ್ಟಿನಲ್ಲಿ ಬಿಜೆಪಿಯ ಕೇಂದ್ರ ನಾಯಕರು ರಾಜ್ಯದಲ್ಲಿ ಅರಾಜಕತೆ ಸೃಷ್ಟಿಸಲಾಗುತ್ತಿದೆ ಎಂದು ಅವರು ಹೇಳಿದರು.

ಹಿರಿಯ ನಾಯಕ ಎಚ್.ಕೆ.ಪಾಟೀಲ್ ಮಾತನಾಡಿ, ಆಪರೇಷನ್ ಕಮಲದ ವಿರುದ್ಧ ಕೇವಲ ಕಾಂಗ್ರೆಸ್, ಜೆಡಿಎಸ್ ಕಾರ್ಯಕರ್ತರು ಮಾತ್ರ ಆಕ್ರೋಶ ವ್ಯಕ್ತಪಡಿಸುತ್ತಿಲ್ಲ. ಇಡೀ ರಾಜ್ಯದ ಜನತೆ ಬಿಜೆಪಿ ನಾಯಕರ ಅನೀತಿಗಳನ್ನು ಖಂಡಿಸುತ್ತಿದ್ದಾರೆ. ಈಗಲಾದರು ರಾಜ್ಯದ ಜನತೆಗೆ ಗೌರವಕೊಟ್ಟು ಆಪರೇಷನ್ ಕಮಲವನ್ನು ನಿಲ್ಲಿಸಿ, ಬಿಜೆಪಿ ಶಾಸಕರು ತಮ್ಮ ಕ್ಷೇತ್ರಗಳತ್ತ ವಾಪಸ್ ತೆರಳಬೇಕೆಂದು ತಿಳಿಸಿದರು.

ಬಿಜೆಪಿ ರಾಜ್ಯಪಾಲರನ್ನು ಬಳಸಿಕೊಂಡು ರಾಜ್ಯದಲ್ಲಿ ಅರಾಜಕತೆ ಸೃಷ್ಟಿಸಲು ಹೊಂಚು ಹಾಕುತ್ತಿದೆ. ಈ ಅರಾಜಕತೆಯ ಮೂಲಕ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಗೆಲ್ಲಬಹುದೆಂಬ ಹಗಲು ಗನಸು ಕಾಣುತ್ತಿದೆ. ರಾಜ್ಯದ ಜನತೆ ಬಿಜೆಪಿಯ ಅನೈತಿಕತೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದು ಅವರು ಹೇಳಿದರು.

ವಿಜಯಪುರ-ಬಳ್ಳಾರಿಯಲ್ಲಿ ಆಕ್ರೋಶ: ವಿಜಯಪುರದಲ್ಲಿ ಆಪರೇಷನ್ ಕಮಲಕ್ಕೆ ವಿರೋಧ ವ್ಯಕ್ತವಾಗಿದ್ದು, ಇಲ್ಲಿನ ಗಾಂಧಿಚೌಕದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರವಿಗೌಡ ಪಾಟೀಲ ಧೂಳಖೇಡ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ಬಿಜೆಪಿ ರಾಜ್ಯಾದ್ಯಕ್ಷ ಬಿ.ಎಸ್.ಯಡಿಯೂರಪ್ಪ ಭಾವಚಿತ್ರವನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಲಾಯಿತು.

ಬಳ್ಳಾರಿಯಲ್ಲಿ ರಾಯಲ್ ವೃತ್ತದಲ್ಲಿ ಬಿಜೆಪಿ ವಿರುದ್ಧ ಪ್ರತಿಭಟನೆ ನಡೆಸಲಾಯಿತು. ಬಳ್ಳಾರಿ ಸಂಸದ ವಿ.ಎಸ್.ಉಗ್ರಪ್ಪ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಆಪರೇಷನ್ ಕಮಲ ನಿಲ್ಲಿಸುವಂತೆ ಘೋಷಣೆ ಕೂಗಿ ಒತ್ತಾಯಿಸಲಾಯಿತು.

ಚಿತ್ರದುರ್ಗದ 50ಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರಿಂದ ಬಿಜೆಪಿ ಕಚೇರಿ ಮುತ್ತಿಗೆಗೆ ಯತ್ನ ನಡೆಸಲಾಯಿತು. ಗುರುಗ್ರಾಮ ರೆಸಾರ್ಟ್‌ನಲ್ಲಿರುವ ಕಮಲ ಶಾಸಕರ ವಿರುದ್ದ ಆಕ್ರೋಶ ಹೊರಹಾಕಿರುವ ಕಾಂಗ್ರೆಸ್ ಕಾರ್ಯಕರ್ತರು ಅಭಿವೃದ್ಧಿ ಮರೆತು ರೆಸಾರ್ಟ್ ಸೇರಿರುವ ಬಿಜೆಪಿ ಶಾಸಕರ ವಿರುದ್ಧ ಹರಿಹಾಯ್ದರು.

ಕಲಬುರಗಿಯಲ್ಲಿ ಟೌನ್ ಹಾಲ್ ಎದುರು ಮುಖ್ಯ ರಸ್ತೆಯಲ್ಲಿ ಪ್ರತಿಭಟನೆ ನಡೆಸಲಾಯಿತು. ಆಪರೇಷನ್ ಕಮಲದ ವಿರುದ್ಧ ಆಕ್ರೋಶ ಹೊರಹಾಕಿರುವ ಕಾರ್ಯಕರ್ತರು ಚಿಂಚೋಳಿ ಶಾಸಕ ಉಮೇಶ್ ಜಾಧವ್ ಅವರನ್ನು ಬಿಜೆಪಿಗೆ ಸೆಳೆಯುತ್ತಿರುವುದಕ್ಕೆ ಖಂಡನೆ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News