ಅಕ್ರಮ ಮರಳು ಸಾಗಾಣೆಗೆ ಲಂಚ ಪ್ರಕರಣ: ಶಿವಮೊಗ್ಗ ಗ್ರಾಮಾಂತರ ಠಾಣೆ ಕಾನ್‍ಸ್ಟೇಬಲ್‍ಗೆ ಜಾಮೀನು ನಿರಾಕರಣೆ

Update: 2019-01-17 18:30 GMT

ಶಿವಮೊಗ್ಗ, ಜ. 17: ಅಕ್ರಮ ಮರಳು ಸಾಗಾಣೆಗೆ ವ್ಯಕ್ತಿಯೋರ್ವರಿಂದ ಲಂಚ ಪಡೆಯುವ ವೇಳೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ದಿಂದ ಬಂಧಿತರಾಗಿ ನ್ಯಾಯಾಂಗ ವಶದಲ್ಲಿರುವ, ಶಿವಮೊಗ್ಗ ಗ್ರಾಮಾಂತರ ಠಾಣೆ ಕಾನ್‍ಸ್ಟೆಬಲ್ ಯಲ್ಲಪ್ಪರವರ ಜಾಮೀನು ಅರ್ಜಿಯನ್ನು ಜಿಲ್ಲಾ ಸೆಷನ್ಸ್ ನ್ಯಾಯಾಲಯ ತಿರಸ್ಕರಿಸಿದೆ. 

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದ ಶಿವಮೊಗ್ಗ ಉಪ ವಿಭಾಗದ ಡಿವೈಎಸ್‍ಪಿ ಸುದರ್ಶನ್ ಹಾಗೂ ಗ್ರಾಮಾಂತರ ಠಾಣೆ ಸಬ್ ಇನ್ಸ್‍ಪೆಕ್ಟರ್ ಭಾರತಿಯವರ ಅರ್ಜಿಯ ವಿಚಾರಣೆಯನ್ನು ಜ.19 ಕ್ಕೆ ಮುಂದೂಡಿ ನ್ಯಾಯಾಲಯ ಆದೇಶ ಹೊರಡಿಸಿದೆ. 

ನಿರಾಕರಣೆ: ಅಕ್ರಮ ಮರಳು ಸಾಗಾಣೆಯಲ್ಲಿ ನಡೆದಿರುವ ಲಂಚ ಪ್ರಕರಣದಲ್ಲಿ, ಪೊಲೀಸ್ ಇಲಾಖೆಯ ಉನ್ನತ ಹುದ್ದೆಯಲ್ಲಿರುವ ಅಧಿಕಾರಿಗಳು ಶಾಮೀಲಾಗಿರುವುದನ್ನು ಸೆಷನ್ಸ್ ನ್ಯಾಯಾಲಯ ಮನಗಂಡಿದ್ದು, ಅಧಿಕಾರಿಗಳ ವಿಚಾರಣೆ ಇನ್ನೂ ಬಾಕಿಯಿದೆ. ಈ ಹಂತದಲ್ಲಿ ತಪ್ಪಿತಸ್ಥ ಸ್ಥಾನದಲ್ಲಿರುವ ಆರೋಪಿ ಕಾನ್ಸ್‍ಸ್ಟೆಬಲ್‍ಗೆ ಜಾಮೀನು ಮಂಜೂರು ಮಾಡಿದರೆ, ಸಾಕ್ಷ್ಯ ನಾಶವಾಗಬಹುದು ಎಂಬ ಕಾರಣಕ್ಕೆ ನ್ಯಾಯಾಲಯ ಜಾಮೀನು ನಿರಾಕರಿಸಿದೆ. ಯಲ್ಲಪ್ಪರವರ ನ್ಯಾಯಾಂಗ ಬಂಧನದ ಅವಧಿಯನ್ನು ಬುಧವಾರದಿಂದ ಮತ್ತೆ 14 ದಿನಗಳವರೆಗೆ ಮುಂದುವರಿಸುವಂತೆಯೂ ನ್ಯಾಯಾಲಯ ಆದೇಶಿಸಿದೆ.

ಘಟನೆ ಹಿನ್ನೆಲೆ: ತಾಲೂಕಿನ ಹೊಳಲೂರಿನಿಂದ ಅಕ್ರಮ ಮರಳು ಸಾಗಾಣೆಗೆ ಅವಕಾಶ ನೀಡಲು ದಾವಣಗೆರೆ ಜಿಲ್ಲೆ ಚೆನ್ನಗಿರಿ ಮೂಲದ ಫೈರೋಜ್ ಎಂಬ ವ್ಯಕ್ತಿಯಿಂದ ನಗರದ ಹೋಟೆಲ್‍ವೊಂದರಲ್ಲಿ 17,500 ರೂ. ಲಂಚ ಪಡೆಯುವ ವೇಳೆ ಖಚಿತ ಮಾಹಿತಿ ಮೇಲೆ ಎಸಿಬಿ ಪೊಲೀಸರು ದಾಳಿ ನಡೆಸಿ ಕಾನ್ಸ್‍ಸ್ಟೆಬಲ್ ಯಲ್ಲಪ್ಪರನ್ನು ಬಂಧಿಸಿದ್ದರು. 

ವಿಚಾರಣೆ ವೇಳೆ, ಅಕ್ರಮ ಮರಳು ದಂಧೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಭಾಗಿಯಾಗಿರುವ ವಿವರವನ್ನು ಯಲ್ಲಪ್ಪರವರು ಬಾಯ್ಬಿಟ್ಟಿದ್ದರು. ಈ ಬಗ್ಗೆ ವೀಡಿಯೋ ತುಣುಕು, ಧ್ವನಿ ಸಂದೇಶ ರೆಕಾರ್ಡ್‍ಗಳನ್ನು ನೀಡಿದ್ದರು. ಇದರ ಆಧಾರದ ಮೇಲೆ ಎಸಿಬಿ ಪೊಲೀಸರು ಡಿವೈಎಸ್‍ಪಿ ಸುದರ್ಶನ್, ಗ್ರಾಮಾಂತರ ಠಾಣೆ ಇನ್ಸ್ ಪೆಕ್ಟರ್ ಕುಮಾರಸ್ವಾಮಿ, ಸಬ್ ಇನ್ಸ್ ಪೆಕ್ಟರ್ ಭಾರತಿಯವರ ಮೇಲೆ ಎಫ್‍ಐಆರ್ ದಾಖಲಿಸಿಕೊಂಡಿದ್ದರು. 

ಇದರಲ್ಲಿ ಡಿವೈಎಸ್‍ಪಿ ಹಾಗೂ ಸಬ್ ಇನ್ಸ್‍ಪೆಕ್ಟರ್ ರವರು ಬಂಧನ ಭೀತಿಯ ಹಿನ್ನೆಲೆಯಲ್ಲಿ ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಉಳಿದಂತೆ ಇನ್ಸ್‍ಪೆಕ್ಟರ್ ಕುಮಾರಸ್ವಾಮಿಯವರು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿಲ್ಲವೆಂದು ಹೇಳಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News