ಬಿಜೆಪಿಯ ಕುದುರೆ ವ್ಯಾಪಾರ ಪ್ರಜಾಪ್ರಭುತ್ವದ ಕಗ್ಗೊಲೆ: ಕಾಂಗ್ರೆಸ್ ಚಿಕ್ಕಮಗಳೂರು ಜಿಲ್ಲಾಧ್ಯಕ್ಷ ವಿಜಯಕುಮಾರ್

Update: 2019-01-17 18:36 GMT

ಚಿಕ್ಕಮಗಳೂರು, ಜ.17: ರಾಜ್ಯ ರಾಜಕಾರಣದಲ್ಲಿ ವಾಮ ಮಾರ್ಗದ ಮೂಲಕ ಕುದುರೆ ವ್ಯಾಪಾರಕ್ಕೆ ಮುಂದಾಗಿರುವ ಬಿಜೆಪಿ ಪಕ್ಷದವರ ಕೆಲಸ ಅಸಂವಿಧಾನಿಕವೂ, ಪ್ರಜಾಪ್ರಭುತ್ವದ ಕಗ್ಗೊಲೆಯಂತಹ ಕೃತ್ಯವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಡಿ.ಎಲ್ ವಿಜಯಕುಮಾರ್ ಆರೋಪಿಸಿದರು.

ನಗರದ ಹನುಮಂತಪ್ಪ ವೃತ್ತದಲ್ಲಿ ಜಿಲ್ಲಾ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿದ್ದ ಧರಣಿಯಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಅವರು, ದಕ್ಷಿಣ ಭಾರತದಲ್ಲಿ ಬಿಜೆಪಿ ಪಕ್ಷಕ್ಕೆ ಬಾಗಿಲು ತೆರೆದಿದ್ದ ಕರ್ನಾಟಕ ಈಗ ಬಾಗಿಲು ಮುಚ್ಚಿಕೊಂಡಿದೆ. ಏನಾದರೂ ಮಾಡಿ ಲೋಕಸಭೆ ಚುನಾವಣೆ ಮುನ್ನ ಮತ್ತೊಮ್ಮೆ ಅಧಿಕಾರ ಹಿಡಿಯುವ ಮೂಲಕ ರಾಷ್ಟ್ರ ರಾಜಕಾರಣಕ್ಕೆ ಕರ್ನಾಟಕವನ್ನು ಮೆಟ್ಟಿಲು ಮಾಡಿಕೊಳ್ಳಲೊರಟಿದ್ದಾರೆ. ಆದರೆ ವಾಮ ಮಾರ್ಗದಲ್ಲಿ ಹೋದರೆ ಅದು ಆಗದು ಎಂಬುದು ಕಳೆದೊಂದು ವಾರದಿಂದ ನಡೆಸುತ್ತಿರುವ ಬಿಜೆಪಿ ಆಪರೇಷನ್ ಕೆಲಸದಿಂದ ಬಹಿರಂಗಗೊಂಡಿದ್ದು, ಮುಂದೆಂದೂ ಅವರ ಪಾಲಿಗೆ ಕರ್ನಾಟಕ ಬಾಗಿಲು ತೆರೆಯದು ಎಂದರು. 

ವಿಶೇಷವಾಗಿ ಕುದುರೆಯನ್ನೇರಿ ಕೊರಳಿಗೆ 'ಬಿಜೆಪಿ ಕುದುರೆ ವ್ಯಾಪಾರಕ್ಕೆ ದಿಕ್ಕಾರ' ಎಂಬ ನಾಮಪಲಕ ಹಾಕಿಕೊಂಡು ತಹಶಿಲ್ದಾರ್ ಕಚೇರಿಯಿಂದ ಹನುಮಂತಪ್ಪ ವೃತ್ತದವರೆಗೆ ಸಾಗಿ ಬಂದ ಎಐಸಿಸಿ ಕಾರ್ಯದರ್ಶಿ ಬಿ.ಎಂ ಸಂದೀಪ್ ಪ್ರತಿಭಟನಾಕಾರನ್ನುದ್ದೇಶಿಸಿ ಮಾತನಾಡಿದರು. ದೇಶದ ರಕ್ಷಣೆ ವಿಚಾರದಲ್ಲಿ, ರಪೆಲ್ ವಿಚಾರದಲ್ಲಿ, ಲಂಚದ ವಾಸನೆ ಬರಿಸಿಕೊಂಡ ಮೋದಿ ನೇತೃತ್ವದ ಬಿಜೆಪಿ ಪಕ್ಷ, ಪಂಚ ರಾಜ್ಯಗಳ ಚುನಾವಣೆಯ ನಂತರ ಜ್ವರ ಬರಿಸಿಕೊಂಡಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಅಧಿಕಾರ ಇರಲೇಬೇಕು, ಇಲ್ಲವೇ ರಾಷ್ಟ್ರಪತಿ ಆಡಳಿತವನ್ನು ತರುವ ಮೂಲಕ ಚುನಾವಣೆ ಎದುರಿಸಬೇಕು ಎಂಬ ತೀರ್ಮಾನಕ್ಕೆ ಬಂದಂತಿದೆ. ಈ ಮೂಲಕ ಕರ್ನಾಟಕ ರಾಜ್ಯದ ರಾಜಕಾರಣವನ್ನು ದೇಶದ ರಾಜಕೀಯ ಭೂಪಟದಲ್ಲಿ ಕೆಟ್ಟಹೆಸರು ಬರುವಂತೆ ಮಾಡಲು ಹೊರಟಿರುವ ಬಿಜೆಪಿ ಅವರ ಪ್ರಜಾಪ್ರಭುತ್ವ ಕಗ್ಗೊಲೆ ಕೆಲಸ ನಡೆಯದು ಎಂದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಎಂ.ಎಲ್ ಮೂರ್ತಿ ಮಾತನಾಡಿ, ರಾಜ್ಯ ಕೆಪಿಸಿಸಿ ಕರೆಯ ಮೇರೆಗೆ ಇಂದು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ನಡೆಯುತ್ತಿರುವ ಈ ಚಳವಳಿ ಇಲ್ಲಿಗೆ ನಿಲ್ಲುವುದಿಲ್ಲ. ಬಿಜೆಪಿಯವರ ಪ್ರಜಾಪ್ರಭುತ್ವ ಕಗ್ಗೊಲೆ ಕೆಲಸ ಮುಂದುವರಿದರೆ ಮುಂದಿನ ದಿನಗಳಲ್ಲಿ ಹಳ್ಳಿಹಳ್ಳಿಗಳಲ್ಲೂ ಕೆಳಹಂತದವರೆಗೆ ಚಳವಳಿ ನಡೆಸುತ್ತೇವೆ ಎಂದರು.

ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಎ.ಎನ್.ಮಹೇಶ್ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜೇಗೌಡ ಮತ್ತಿತರರು ಮಾತನಾಡಿದರು. 

ಇದಕ್ಕೂ ಮುನ್ನ ನೂರಾರು ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ನಗರದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾ ಮೆರಣವಣಿಗೆ ನಡೆಸಿ ಬಿಜೆಪಿ ಮುಖಂಡರ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.

ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಮ್‍ದಾಸ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಕೆ.ಎಸ್ ಶಾಂತೇಗೌಡ, ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ, ಐ.ಎನ್.ಟಿ.ಯು.ಸಿ ಅಧ್ಯಕ್ಷ ರಾಮಚಂದ್ರ ಒಡೆಯರ್, ಎಸ್.ಸಿ ವಿಭಾಗದ ಅಧ್ಯಕ್ಷ ಹೂವಪ್ಪ, ಯುವ ಕಾಂಗ್ರೆಸ್ ಅಧ್ಯಕ್ಷ ಕೆ.ವಿ ಶಿವಕುಮಾರ್, ಸೇವಾದಳ ಅಧ್ಯಕ್ಷ ಸಿಲ್ವರ್ ಸ್ಟರ್, ಐಟಿ ಸೆಲ್ ಅಧ್ಯಕ್ಷ ಕಾರ್ತಿಕ್ ಚೆಟ್ಟಿಯಾರ್, ನಗರಸಭೆ ಸದಸ್ಯರುಗಳಾದ ರೂಬೆನ್ ಮೊಸೆಸ್, ಪುಟ್ಟಸ್ವಾಮಿ, ಸುರೇಖ ಸಂಪತ್‍ರಾಜ್, ಮಹಮ್ಮದ್ ಅಕ್ಬರ್, ಜಿಲ್ಲಾ ಅಲ್ಪ ಸಂಖ್ಯಾತರ ಅಧ್ಯಕ್ಷ ನಿಸಾರ್ ಅಹಮ್ಮದ್, ಜಿಲ್ಲಾ ಪಂಚಾಯತ್ ಸದಸ್ಯೆ ಪ್ರೇಮಾ ಮಂಜುನಾಥ್ ಮುಂತಾದವರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News