ಸ್ವ ಸಹಾಯ ಸಂಘಗಳ ಬೆಳವಣಿಗೆಗೆ ಹೆಚ್ಚಿನ ಒತ್ತು: ಸಚಿವ ಬಂಡೆಪ್ಪ ಕಾಶೆಂಪೂರ್

Update: 2019-01-18 16:00 GMT

ಬೀದರ್, ಜ.18: ಸಮಾಜದ ಏಳ್ಗೆಯಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುವ ಸ್ವ-ಸಹಾಯ ಸಂಘಗಳ ಬೆಳವಣಿಗೆಗೆ ರಾಜ್ಯ ಸರಕಾರವು ಹೆಚ್ಚಿನ ಒತ್ತು ನೀಡುತ್ತಿದೆ ಎಂದು ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ್ ತಿಳಿಸಿದ್ದಾರೆ.

ನಗರದಲ್ಲಿನ ಜಿಲ್ಲಾ ರಂಗಮಂದಿರದಲ್ಲಿಂದು ಸಹಕಾರ ಇಲಾಖೆಯು ಆಯೋಜಿಸಿದ್ದ ಬಡವರ ಬಂಧು ಮತ್ತು ಕಾಯಕ ಯೋಜನೆಯಡಿಯ ಫಲಾನುಭವಿಗಳಿಗೆ ಚೆಕ್ ಹಾಗೂ ಸಾಲ ಮಂಜೂರಾತಿ ಆದೇಶ ಪತ್ರ ವಿತರಣಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ರೈತರ ಬೆಳೆಸಾಲ ಮನ್ನಾ ಮಾಡಿ ಅವರ ಕಷ್ಟಗಳಿಗೆ ಸ್ಪಂದಿಸಿದ ರಾಜ್ಯ ಸಮ್ಮಿಶ್ರ ಸರಕಾರವು, ಮಹತ್ವಾಕಾಂಕ್ಷಿ ಕಾರ್ಯಕ್ರಮಗಳಾದ ಕಾಯಕ ಮತ್ತು ಬಡವರ ಬಂಧು ಯೋಜನೆಗಳನ್ನು ಜಾರಿ ಮಾಡಿದೆ. ಈ ಯೋಜನೆಗಳ ಲಾಭ ಪಡೆಯಲು ಜನತೆ ಮುಂದೆ ಬರಬೇಕು ಎಂದು ಅವರು ತಿಳಿಸಿದರು.

ಬೆಳಗಾವಿ ಅಧಿವೇಶನದಲ್ಲಿ ಸ್ವಸಹಾಯ ಸಂಘಗಳ ಏಳ್ಗೆಯ ಬಗ್ಗೆ ವಿಷಯ ಪ್ರಸ್ತಾಪಿಸಿ ಕಾಯಕ ಯೋಜನೆಯನ್ನು ಜಾರಿ ಮಾಡಲಾಗಿತ್ತು. ಈ ಯೋಜನೆಗಳ ಅನುಷ್ಠಾನಕ್ಕೆ ಹಲವಾರು ಬ್ಯಾಂಕುಗಳು ನೀಡಿರುವ ಸಹಕಾರ ಸ್ಮರಣೀಯ ಎಂದು ಅವರು ಹೇಳಿದರು. ಸಣ್ಣ ಪ್ರಮಾಣದಲ್ಲಿ ವ್ಯಾಪಾರ-ವಾಹಿವಾಟು ನಡೆಸುವ ಜನತೆಗೆ ಮುಂದಿನ ದಿನಗಳಲ್ಲಿ ಉತ್ತಮ ಮಾರುಕಟ್ಟೆ ಸಿಗುವ ವ್ಯವಸ್ಥೆ ಮಾಡಬೇಕಿದೆ. ಸಹಕಾರ ಇಲಾಖೆಯಿಂದ ಇದಕ್ಕೆ ಅಗತ್ಯ ವ್ಯವಸ್ಥೆ ಮಾಡಲು ಚಿಂತನೆ ಮಾಡಲಾಗುತ್ತಿದೆ. ಬಜೆಟ್ ಮಂಡನೆ ವೇಳೆಯಲ್ಲಿ ಈ ಬಗ್ಗೆ ಆಲೋಚಿಸಲಾಗುವುದು ಎಂದು ಬಂಡೆಪ್ಪ ಕಾಶೆಂಪೂರ್ ತಿಳಿಸಿದರು.

ಕಾಯಕ ಹಾಗೂ ಬಡವರ ಬಂಧು ಯೋಜನೆಗಳು ಸಹಕಾರ ಇಲಾಖೆಯ ಗಮನಾರ್ಹ ಯೋಜನೆಗಳಾಗಿವೆ. ಸ್ವಸಹಾಯ ಗುಂಪಿನ ಸದಸ್ಯರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಆಲೋಚಿಸಿ ಈ ಯೋಜನೆಯನ್ನು ಜಾರಿ ಮಾಡಿದ್ದು, ಸ್ವಸಹಾಯ ಗುಂಪುಗಳು ಸಮೂಹ ಮಾದರಿಯಲ್ಲಿ ಅಥವಾ ವೈಯಕ್ತಿಕವಾಗಿ ಸ್ವಂತ ಉದ್ಯೋಗ ಕೈಗೊಳ್ಳಲು ಸಹಕಾರ ಸಂಸ್ಥೆಗಳ ಮೂಲಕ ಸ್ವಸಹಾಯ ಗುಂಪುಗಳಿಗೆ ಗರಿಷ್ಠ 10 ಲಕ್ಷ ರೂ.ವರೆಗೆ ಸಾಲ ಒದಗಿಸಲಾಗುತ್ತದೆ ಎಂದು ಅವರು ಹೇಳಿದರು. ರಾಜ್ಯದ ನಗರ ಪ್ರದೇಶಗಳಲ್ಲಿ ನೋಂದಾಯಿತ ಬೀದಿ ವ್ಯಾಪಾರಿಗಳಿಗೆ, ಸಣ್ಣ ವ್ಯಾಪಾರಿಗಳಿಗೆ, ರಸ್ತೆಗಳಲ್ಲಿ ಮನೆಮನೆಗೆ ತಳ್ಳುವ ಬಂಡಿ, ಅಥವಾ ಮೋಟಾರು ವಾಹನದಲ್ಲಿ ತರಕಾರಿ ಹೂ ಹಣ್ಣು ಕಾಯಿ ಮಾರುವವರು, ರಸ್ತೆ ಬದಿಯ ಬುಟ್ಟಿ ವ್ಯಾಪಾರಿಗಳು ಇತ್ಯಾದಿ ಕೆಲಸಗಳಲ್ಲಿ ತೊಡಗಿರುವ ಬಿಪಿಎಲ್ ಕಾರ್ಡ್ ಹೊಂದಿರುವ ವ್ಯಾಪಾರಿಗಳಿಗೆ ಸಹಾಯವಾಗಲು ಬಡವರ ಬಂಧು ಯೋಜನೆಯನ್ನು ಜಾರಿ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಬೀದರ್ ಜಿಲ್ಲೆಯಲ್ಲಿ 171 ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಮೂಲಕ 1,63,326 ರೈತರಿಗೆ ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಮಧ್ಯಮಾವಧಿ ಸಾಲ ವಿತರಣೆ ಮಾಡಲಾಗಿದೆ. ರೈತರಿಗೆ ಶೇ.4 ಬಡ್ಡಿದರದಲ್ಲಿ ಸಹಕಾರ ಬ್ಯಾಂಕ್ ಮತ್ತು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಮೂಲಕ ಡಿಸೆಂಬರ್‌ನಿಂದ ಈವರೆಗೆ 11,162 ರೈತರಿಗೆ 121 ಕೋಟಿ ರೂ. ಸಾಲ ವಿತರಣೆ ಮಾಡಲಾಗಿದೆ ಎಂದು ಅವರು ಹೇಳಿದರು.

ರಾಜ್ಯ ಸರಕಾರವು ದಾಖಲೆಯ ಪ್ರಮಾಣದಲ್ಲಿ ರೈತರ ಬೆಳೆಸಾಲ ಮನ್ನಾ ಮಾಡಿರುವುದು ಇಡೀ ದೇಶದಲ್ಲಿಯೇ ನಿರಂತರ ಚರ್ಚೆಯಾಗುತ್ತಿದ್ದು, ನಮ್ಮ ರಾಜ್ಯದ ಕಡೆಗೆ ನೋಡುವ ಹಾಗೆ ಬಜೆಟ್ ಮಂಡಿಸಲಾಗುತ್ತದೆ. ಸ್ವಸಹಾಯ ಸಂಘಗಳ ಹಿತಕಾಯಲು ಸಹಕಾರ ಇಲಾಖೆಯು ಬದ್ಧವಾಗಿದ್ದು, ಈ ನಿಟ್ಟಿನಲ್ಲಿ ಬರುವ ಜುಲೈ ತಿಂಗಳೊಳಗೆ ಸಹಕಾರ ಇಲಾಖೆಯ 9,448 ಕೋಟಿ ರೂ.ಮನ್ನಾ ಆಗಲಿದೆ ಎಂದು ಬಂಡೆಪ್ಪ ಕಾಶೆಂಪೂರ್ ತಿಳಿಸಿದರು.

ಕಾರ್ಯಕ್ರಮದಲ್ಲಿ ಯುವ ಸಬಲೀಕರಣ ಹಾಗೂ ಕ್ರೀಡಾ ಸಚಿವ ರಹೀಂ ಖಾನ್, ಜಿ.ಪಂ.ಅಧ್ಯಕ್ಷೆ ಭಾರತಬಾಯಿ ಶೇರಿಕಾರ, ವಿಧಾನಪರಿಷತ್ ಸದಸ್ಯ ಅರವಿಂದಕುಮಾರ್ ಅರಳಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News