ಮೇಲ್ವರ್ಗದ ಬಡವರಿಗೆ ಮೀಸಲಾತಿ ವಿರುದ್ಧ ಮದ್ರಾಸ್ ಹೈಕೋರ್ಟ್‌ಗೆ ಡಿಎಂಕೆ ಮೇಲ್ಮನವಿ

Update: 2019-01-18 15:03 GMT

ಚೆನ್ನೈ, ಜ.18: ಸರಕಾರಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೇಲ್ವರ್ಗದ ಬಡವರಿಗೆ ಶೇ.10ರಷ್ಟು ಮೀಸಲಾತಿ ಸೌಲಭ್ಯ ಒದಗಿಸಲು ಸಂವಿಧಾನಕ್ಕೆ ತಿದ್ದುಪಡಿ ಮಾಡಿರುವುದನ್ನು ಪ್ರಶ್ನಿಸಿ ಡಿಎಂಕೆ ಶುಕ್ರವಾರ ಮದ್ರಾಸ್ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದೆ ಎಂದು ಮೂಲಗಳು ತಿಳಿಸಿವೆ. ಆರ್ಥಿಕ ಹಿನ್ನೆಲೆಯಲ್ಲಿ ಮೀಸಲಾತಿಯನ್ನು ಪರಿಗಣಿಸಬಾರದು. ವರ್ಷಾನುಗಟ್ಟಲೆ ಶಿಕ್ಷಣ ಮತ್ತು ಉದ್ಯೋಗದಿಂದ ವಂಚಿತರಾಗಿರುವ ಸಮುದಾಯವನ್ನು ಮೇಲ್ಮಟ್ಟಕ್ಕೇರಿಸುವ ಉದ್ದೇಶದಿಂದ ಮೀಸಲಾತಿ ಒದಗಿಸಲಾಗುತ್ತದೆ. ಆದ್ದರಿಂದ ಸಂವಿಧಾನ ತಿದ್ದುಪಡಿ ನಿರ್ಧಾರಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಬೇಕೆಂದು ಡಿಎಂಕೆಯ ಸಂಘಟನಾ ಕಾರ್ಯದರ್ಶಿ ಆರ್‌ಎಸ್ ಭಾರತಿ ಸಲ್ಲಿಸಿರುವ ಮೇಲ್ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ತಮಿಳುನಾಡು ರಾಜ್ಯದಲ್ಲಿ ಮೀಸಲಾತಿಯ ಪ್ರಮಾಣ ಈಗಾಗಲೇ ಶೇ.69ರಷ್ಟಿದೆ. ಕೇಂದ್ರದ ಹೊಸ ಮಸೂದೆಯಂತೆ ಇದು ಶೇ.79ಕ್ಕೆ ಹೆಚ್ಚಲಿದ್ದು ಇದು ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದು ಡಿಎಂಕೆ ಪರ ವಕೀಲ ಪಿ.ವಿಲ್ಸನ್ ತಿಳಿಸಿದ್ದಾರೆ. ಶೇ.10 ಮೀಸಲಾತಿ ಮಸೂದೆಯ ವಿರುದ್ಧ ತಮಿಳುನಾಡು ಸರಕಾರ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಿ ಕೇಂದ್ರ ಸರಕಾರಕ್ಕೆ ಕಳುಹಿಸಬೇಕು ಎಂದು ಡಿಎಂಕೆ ಅಧ್ಯಕ್ಷ ಎಂಕೆ ಸ್ಟಾಲಿನ್ ಜನವರಿ 8ರಂದು ರಾಜ್ಯ ಸರಕಾರವನ್ನು ಒತ್ತಾಯಿಸಿದ್ದರು. ಸಂವಿಧಾನದ ಆಶಯಗಳಿಗೆ ವಿರುದ್ಧವಾದ ಇಂತಹ ಮಸೂದೆಯ ಮೂಲಕ ಕೇಂದ್ರ ಸರಕಾರ ಅನರ್ಥಕಾರಕ ಆಟಕ್ಕೆ ಮುಂದಾಗಿದೆ ಎಂದವರು ಟೀಕಿಸಿದ್ದರು. ಶೇ.10 ಮೀಸಲಾತಿಯನ್ನು ವಿರೋಧಿಸಿ ‘ಯೂತ್ ಫಾರ್ ಇಕ್ವಲಿಟಿ’ ಎಂಬ ಸಂಘಟನೆಯೂ ಸುಪ್ರೀಂ ಕೋರ್ಟ್‌ನ ಮೆಟ್ಟಿಲೇರಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News