ರಫೇಲ್ ಒಪ್ಪಂದ: ಯುಪಿಎ ಸರಕಾರ ಒಪ್ಪಿದ್ದಕ್ಕಿಂತ ಅಧಿಕ ಮೊತ್ತ ಪಾವತಿಸಲಿರುವ ಎನ್‌ಡಿಎ; ವರದಿಯಲ್ಲಿ ಉಲ್ಲೇಖ

Update: 2019-01-18 15:05 GMT

ಹೊಸದಿಲ್ಲಿ, ಜ..18: ರಫೇಲ್ ಯುದ್ಧವಿಮಾನ ಖರೀದಿಗೆ ಈ ಹಿಂದಿನ ಯುಪಿಎ ಸರಕಾರ ಮಾಡಿಕೊಂಡಿದ್ದ ಒಪ್ಪಂದಕ್ಕಿಂತ ಅಧಿಕ ವೆಚ್ಚದಲ್ಲಿ ಎನ್‌ಡಿಎ ಸರಕಾರ ಒಪ್ಪಂದ ಮಾಡಿಕೊಂಡಿದೆ ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ. ರಫೇಲ್ ಯುದ್ಧವಿಮಾನಗಳನ್ನು 1.3 ಬಿಲಿಯನ್ ಯುರೋ(10,546 ಕೋಟಿ ರೂ.ಗೂ ಹೆಚ್ಚು) ವೆಚ್ಚದಲ್ಲಿ ಭಾರತದ ಅಗತ್ಯಕ್ಕೆ ತಕ್ಕಂತೆ ವಿನ್ಯಾಸಗೊಳಿಸಿ ಅಭಿವೃದ್ಧಿಗೊಳಿಸುವ ಪ್ರಸ್ತಾವನೆಗೆ ಮೋದಿ ಸರಕಾರ ಒಪ್ಪಿಗೆ ನೀಡಿರುವುದು ಪ್ರತೀ ವಿಮಾನದ ವೆಚ್ಚ ಹೆಚ್ಚಲು ಪ್ರಮುಖ ಕಾರಣವಾಗಿದೆ. ಇದರಿಂದ ಪ್ರತೀ ಯುದ್ಧವಿಮಾನದ ಬೆಲೆ ಶೇ.41.42ರಷ್ಟು ಹೆಚ್ಚಳವಾಗಿದೆ ಎಂದು ವರದಿ ತಿಳಿಸಿದೆ.

2015ರ ಎಪ್ರಿಲ್ 10ರಂದು ಪ್ಯಾರಿಸ್‌ಗೆ ಭೇಟಿ ನೀಡಿದ್ದ ಪ್ರಧಾನಿ ಮೋದಿ, 2007ರಲ್ಲಿ ಯುಪಿಎ ಸರಕಾರ ಮಾಡಿಕೊಂಡಿದ್ದ 126 ರಫೇಲ್ ಜೆಟ್ ವಿಮಾನಗಳ ಬದಲು, ಪೂರ್ಣ ಸಜ್ಜಿತ, ಯುದ್ಧಕ್ಷೇತ್ರಕ್ಕೆ ಸಿದ್ಧಗೊಳಿಸಲಾದ 36 ರಫೇಲ್ ಜೆಟ್ ವಿಮಾನಗಳನ್ನು ಭಾರತ ಖರೀದಿಸಲಿದೆ ಎಂದು ಘೋಷಿಸಿದ್ದರು. 2007ರಲ್ಲಿ ಭಾರತೀಯ ವಾಯುಪಡೆ 126 ರಫೇಲ್ ವಿಮಾನಗಳಿಗೆ ಬೇಡಿಕೆ ಸಲ್ಲಿಸಿದ ಕಾರಣ ಇವನ್ನು ಸರಬರಾಜು ಮಾಡಲು ಅಂದಿನ ಯುಪಿಎ ಸರಕಾರ ಜಾಗತಿಕ ಟೆಂಡರ್ ಕರೆದಿತ್ತು. ದಸಾಲ್ಟ್ ಏವಿಯೇಷನ್ ಎಂಬ ಫ್ರಾನ್ಸ್‌ನ ಸಂಸ್ಥೆ ಟೆಂಡರ್ ಪಡೆದುಕೊಂಡಿದ್ದು , ಎಚ್‌ಎಎಲ್ ವಿಮಾನ ತಯಾರಿಸುವುದೆಂದು ನಿರ್ಧರಿಸಲಾಗಿತ್ತು. ಒಂದು ವಿಮಾನದ ಬೆಲೆ 643 ಕೋಟಿ ರೂ. ಎಂದು ನಿರ್ಧರಿಸಿದ್ದು 2011ರ ವೇಳೆಗೆ ಈ ಮೊತ್ತ 811 ಕೋಟಿ ರೂ.ಗೆ ಹೆಚ್ಚಿತ್ತು. 2016ರಲ್ಲಿ ಮೋದಿ ಸರಕಾರ ಈ ಮೊತ್ತದ ಮೇಲೆ ಶೇ.9ರಷ್ಟು ಡಿಸ್ಕೌಂಟ್ ಪಡೆದುಕೊಂಡ ಹಿನ್ನೆಲೆಯಲ್ಲಿ ದರ 744 ಕೋಟಿ ರೂ.ಗೆ ಇಳಿಯಿತು. ಬಳಿಕ ಭಾರತೀಯ ವಾಯುಪಡೆಯ ಕೋರಿಕೆಯಂತೆ ಈ ವಿಮಾನಗಳ ವಿನ್ಯಾಸವನ್ನು ಬದಲಾಯಿಸಲು ನಿರ್ಧರಿಸಲಾಗಿದ್ದು ಇದಕ್ಕೆ 1.3 ಬಿಲಿಯನ್ ಯುರೋ(10,546 ಕೋಟಿ ರೂ.ಗೂ ಹೆಚ್ಚು) ವೆಚ್ಚ ಪಾವತಿಸಲು ಮೋದಿ ಸರಕಾರ ಒಪ್ಪಿಕೊಂಡಿದೆ. ವಿನ್ಯಾಸ ಬದಲಿಸುವ ವೆಚ್ಚದಲ್ಲಿ ಹೆಚ್ಚಳದ ಬಗ್ಗೆ ನಿಯೋಗದಲ್ಲಿದ್ದ ರಕ್ಷಣಾ ಇಲಾಖೆಯ ಮೂವರು ಅಧಿಕಾರಿಗಳು ಆಕ್ಷೇಪಿಸಿದ್ದರು. ಆದರೆ ವಾಯುಪಡೆಯ ಉಪ ಮುಖ್ಯಸ್ಥರ ಸಹಿತ ಇತರ ನಾಲ್ವರು ಅಧಿಕಾರಿಗಳು ಈ ಆಕ್ಷೇಪವನ್ನು ತಿರಸ್ಕರಿಸಿದ್ದರು ಎಂದು ಸುದ್ದಿಸಂಸ್ಥೆಯ ವರದಿ ತಿಳಿಸಿದೆ. ಹಲವು ಸುತ್ತಿನ ಮಾತುಕತೆಯ ಬಳಿಕ ನಿಯೋಗವು 2016ರ ಆಗಸ್ಟ್ 4ರಂದು ವರದಿ ಸಲ್ಲಿಸಿದೆ. ಅಂದಿನ ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್ ಈ ವಿಷಯವನ್ನು ಭದ್ರತೆಯ ಕುರಿತ ಸಂಪುಟ ಸಮಿತಿ(ಪ್ರಧಾನಿ ಮೋದಿ ಅಧ್ಯಕ್ಷ)ಗೆ ವರ್ಗಾಯಿಸಿದ್ದಾರೆ. ಅಲ್ಲದೆ, 2016ರಲ್ಲಿ ಎನ್‌ಡಿಎ ಸರಕಾರ ರಫೇಲ್ ವಿಮಾನಗಳಿಗಿಂತಲೂ ಕಡಿಮೆ ದರದಲ್ಲಿ ಯುದ್ಧವಿಮಾನ ಪೂರೈಸುವ ಮತ್ತೊಂದು ಕೊಡುಗೆಯನ್ನು ಪಡೆದಿತ್ತು. ಜರ್ಮನಿ, ಬ್ರಿಟನ್, ಇಟಲಿ ಮತ್ತು ಸ್ಪೇನ್ ದೇಶಗಳ ಪ್ರಮುಖ ವಿಮಾನ ಉತ್ಪಾದನಾ ಸಂಸ್ಥೆಗಳು ‘ಏರ್‌ಬಸ್’ ಎಂಬ ಸಂಸ್ಥೆಯ ಹೆಸರಿನಲ್ಲಿ ನಿರ್ಮಿಸಲಾಗುವ ಟೈಫೂನ್ ಜೆಟ್ ವಿಮಾನಗಳು ರಫೇಲ್ ವಿಮಾನಗಳಿಗಿಂತಲೂ ಅಗ್ಗವಾಗಿದ್ದವು. ಆದರೆ ಬಿಡ್ಡಿಂಗ್ (ಕೂಗುಬೆಲೆ) ಸಂದರ್ಭ ದಸಾಲ್ಟ್ ಸಂಸ್ಥೆ ಕಡಿಮೆ ಬೆಲೆ ನಮೂದಿಸಿದ್ದರಿಂದ ಆ ಸಂಸ್ಥೆಯ ಜೊತೆ ಮಾತುಕತೆ ಮುಂದುವರಿದಿದೆ ಎಂದು ವರದಿ ತಿಳಿಸಿದೆ.

 ಜುಲೈ 2014ರಲ್ಲಿ ಅಂದಿನ ರಕ್ಷಣಾ ಸಚಿವ ಅರುಣ್ ಜೇಟ್ಲಿಗೆ ಪತ್ರ ಬರೆದ ಏರ್‌ಬಸ್ ಸಂಸ್ಥೆಯ ಯುದ್ಧವಿಮಾನ ವಿಭಾಗದ ಮುಖ್ಯಸ್ಥ ಡೊಮಿಂಗೊ ಯುರೆನ, ಟೈಫೂನ್ ಯುದ್ಧವಿಮಾನಗಳ ಬೆಲೆಯಲ್ಲಿ ಶೇ. 20ರಷ್ಟು ಕಡಿತ ಮಾಡುವ ಕೊಡುಗೆ ಮುಂದಿಟ್ಟರು. ಆದರೆ , ಬಿಡ್ಡಿಂಗ್ ಕೊನೆಗೊಂಡ ಬಳಿಕ ಕೊಡುಗೆಯ ಪ್ರಸ್ತಾಪ ಮುಂದಿರಿಸಿದ್ದರಿಂದ ಇದು ಕೇಂದ್ರ ಜಾಗೃತ ಆಯೋಗದ ಮಾರ್ಗದರ್ಶಿ ಸೂತ್ರಕ್ಕೆ ವಿರುದ್ಧವಾಗಿದೆ ಎಂದು ತಿಳಿಸಿದ್ದ ಭಾರತ ಸರಕಾರ ಈ ಕೊಡುಗೆಯನ್ನು ತಿರಸ್ಕರಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News