ಸಾಹಿತಿಗಳಿಗೆ ಸಾಮಾಜಿಕ-ರಾಜಕೀಯ ಪ್ರಜ್ಞೆ ಬೇಕು: ಬರಗೂರು ರಾಮಚಂದ್ರಪ್ಪ

Update: 2019-01-18 15:59 GMT

ಧಾರವಾಡ, ಜ.18: ಸಾಹಿತಿಗಳಿಗೆ ಸಾಮಾಜಿಕ ಮತ್ತು ರಾಜಕೀಯ ಪ್ರಜ್ಞೆ ಬೇಕು. ಆಗ ಮಾತ್ರವೆ ಸಾಹಿತ್ಯ ಬರಹಗಳು ಸಮಾನತೆ ಸೌಹಾರ್ದತೆಯ ಜೀವಶಕ್ತಿಯನ್ನು ಪಡೆದುಕೊಳ್ಳುತ್ತವೆ ಎಂದು ಹಿರಿಯ ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಅಭಿಪ್ರಾಯಿಸಿದರು.

ನಗರದ ಕರ್ನಾಟಕ ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವ ಭವನದಲ್ಲಿ ಮೂರು ದಿನ ಆಯೋಜಿಸಿರುವ ಧಾರವಾಡ ಸಾಹಿತ್ಯ ಸಂಭ್ರಮ-2019ನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಾಮಾಜಿಕ ಪ್ರಜ್ಞೆಯೆಂದರೆ ಜಾತಿವಾದದ ಪರವಾಗಿರುವ ಪ್ರಜ್ಞೆಯಲ್ಲ. ರಾಜಕೀಯ ಪ್ರಜ್ಞೆಯೆಂದರೆ ರಾಜಕೀಯ ಪಕ್ಷವೊಂದರ ಪರವಾದ ಪ್ರಜ್ಞೆಯಲ್ಲ. ವಿವಿಧ ಸಾಮಾಜಿಕ, ರಾಜಕೀಯ ಸೈದ್ಧಾಂತಿಕತೆಗಳನ್ನು ರೂಪಾಂತರಿಸಿಕೊಳ್ಳುವ ಪ್ರಕ್ರಿಯಾತ್ಮಕ ಪ್ರಜ್ಞೆ ನಮಗೆ ಬೇಕು ಎಂದು ಅವರು ಪ್ರತಿಪಾದಿಸಿದರು.

ಕೋಮು ಸೌಹಾರ್ದತೆ ಕದಡುತ್ತಿರುವ ಈ ಕಾಲದಲ್ಲಿ ಕಾಗೆಯ ಕಾರುಣ್ಯವು ಕೋಗಿಲೆಯ ಕಂಠದೊಳಗೆ ಒಂದಾಗಬೇಕು. ಕಾಗೆ-ಕೋಗಿಲೆಗಳ ನೈಸರ್ಗಿಕ ಸಹಜ-ಸೌಂದರ್ಯವು ಸಮಾಜದ ಜೀವಶಕ್ತಿಯಾದಾಗ ಮಾತ್ರವೆ ನಮ್ಮದು ಹೆಮ್ಮೆ ಪಡುವ ನಿಜದ ನಾಡಾಗುತ್ತದೆ ಎಂದು ಅವರು ಆಶಿಸಿದರು.

ಹಿರಿಯ ಸಾಹಿತಿ ನಿರಂಜನರವರ ‘ಚಿರಸ್ಮರಣೆ’, ಬಸವರಾಜ ಕಟ್ಟಿಮನಿ ಅವರ ‘ಜ್ವಾಲಮುಖಿಯ ಮೇಲೆ’ ಕಾದಂಬರಿಗಳ ಗುಣಗಳನ್ನು ಗುರುತಿಸಲು ವಿಮರ್ಶಕರಿಗೆ ದಶಕಗಳೆ ಬೇಕಾದವು. ಅನಕೃ ಅವರಂತಹ ಲೇಖಕರ ಬಗ್ಗೆಯೂ ಅವರ ಬದುಕಿದ್ದಾಗ ಸರಿಯಾದ ವಿಮರ್ಶೆ ಬಂದಿಲ್ಲ. ಪ್ರಗತಿಪರ ವಿಚಾರಧಾರೆಯ ಸಾಹಿತಿ ಮತ್ತು ಸಾಹಿತ್ಯವನ್ನು ಶಿಲ್ಪದ ಮಾನದಂಡ ಮುಖ್ಯ ಮಾಡಿಕೊಂಡು ಹೊರಗಿಟ್ಟ ವಿಮರ್ಶಾವರ್ಣಾಶ್ರಮ ಬಹಳಷ್ಟು ಸಾಹಿತಿಗಳಿಗೆ ಅನ್ಯಾಯ ಮಾಡಿದೆ ಅವರು ವಿಷಾದಿಸಿದರು.

ವಿಮರ್ಶಾವರ್ಣಾಶ್ರಮವು ರಾಷ್ಟ್ರಕವಿ ಕುವೆಂಪುವನ್ನೂ ಬಿಟ್ಟಿಲ್ಲ. ಕುವೆಂಪುರವರ ಶೂದ್ರ ತಪಸ್ವಿ ಕೃತಿಯನ್ನು ಕೆಲವರು ಬ್ರಾಹ್ಮಣ ವಿರೋಧಿ ಎಂಬ ಹಣೆಪಟ್ಟಿ ಕಟ್ಟಿದರು. ಈ ವಾಗ್ವಾದವನ್ನು ಗಮನಿಸುತ್ತಾ ಬಂದ ಕುವೆಂಪು ಶೂದ್ರ ತಪಸ್ವಿ ಮೂರನೆ ಮುದ್ರಣದಲ್ಲಿ ತಮ್ಮ ಕೃತಿಯನ್ನು ವಿಮರ್ಶಕರು ಸರಿಯಾಗಿ ಅರ್ಥ ಮಾಡಿಕೊಳ್ಳಲಿಲ್ಲ. ನನ್ನ ಕೃತಿ ಬ್ರಾಹ್ಮಣ ವಿರೋಧಿ ಅಲ್ಲ; ತಪಸ್ಸು ಎಲ್ಲ ಮಾನವರ ಹಕ್ಕು ಎಂಬ ಸಾಮಾಜಿಕ ಸಿದ್ಧಾಂತವನ್ನು ಸಾಹಿತ್ಯೀಕರಿಸಿದೆ ಎಂದು ಬರೆದುಕೊಂಡಿದ್ದರು ಎಂದು ಅವರು ಸ್ಮರಿಸಿದರು.

ಮರೆಯಾದ ವಾಗ್ವಾದಗಳು: ಗಾಂಧಿಯಲ್ಲಿ ಸಂತನ ಪ್ರಜ್ಞೆ ಹಾಗೂ ಅಂಬೇಡ್ಕರ್ ಅವರಲ್ಲಿ ಸ್ಪೋಟಕ ಗುಣ ಇದ್ದರೂ ಅವರಿಬ್ಬರೂ ಎಂದಿಗೂ ಭಾಷೆಯ ಭ್ರಷ್ಟರಾಗಲಿಲ್ಲ ಹಾಗೂ ಹಿಂಸೆಗೆ ಒಳಪಡಿಸಲಿಲ್ಲ. ಈ ಇಬ್ಬರ ವಾಗ್ವಾದಗಳು ಇಂದು ಆದರ್ಶವಾಗಬೇಕಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News