ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಚಿಕ್ಕಮಗಳೂರಿನ ಕೊಡುಗೆ ಅಪಾರ: ಸಚಿವ ಕೆ.ಜೆ.ಜಾರ್ಜ್

Update: 2019-01-18 18:33 GMT

ಮೂಡಿಗೆರೆ, ಜ.18: ಚಿಕ್ಕಮಗಳೂರು ಜಿಲ್ಲೆ ಕನ್ನಡ ಸಾಹಿತ್ಯಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡಿಡೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಹೇಳಿದರು. 

ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ ಹೇಮಾವತಿ ಪ್ರಧಾನ ಸಾಹಿತ್ಯ ವೇದಿಕೆಯಲ್ಲಿ ಶುಕ್ರವಾರ 15ನೇ ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಅವರು, ನಾಡು, ನುಡಿ, ಜಲ, ಭಾಷೆಗೆ ತೊಂದರೆ ಬಂದಾಗ ರಾಜ್ಯಾದ್ಯಂತ ನಡೆಯುವ ಕನ್ನಡ ಪರ ಹೋರಾಟಕ್ಕೆ ಜಿಲ್ಲೆಯಿಂದ ದೊಡ್ಡ ಕೂಗು ಬರಲು ಇಲ್ಲಿ ನೆಲೆಸಿದ್ದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರು ದೊಡ್ಡ ಕೊಡುಗೆಯನ್ನು ನೀಡಿದ್ದರು. ಇಂತಹ ಪರಂಪರಾಗತ ಜಿಲ್ಲೆಯಿಂದ ಕನ್ನಡಕ್ಕೆ ತನ್ನದೇ ಆದ ಕೊಡುಗೆ ಸಿಗಲು ಸಾಧ್ಯವಿದೆ. ಭಾಷೆ, ಸಂಸ್ಕೃತಿ, ಸಾಹಿತ್ಯವನ್ನು ಹುಟ್ಟು ಹಾಕಲು ಇಂತಹ ಸಮ್ಮೇಳನ ಸಹಕಾರಿಯಾಗಲಿದೆ ಎಂದು ಹೇಳಿದರು. 

ರಾಜ್ಯ ಸರಕಾರ ಕನ್ನಡದ ಬಗ್ಗೆ ಅತೀ ಹೆಚ್ಚಿನ ಖಾಳಜಿ ಹೊಂದಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸಮಿತಿ ಅಧ್ಯಕ್ಷರಾಗಿ ಕನ್ನಡವನ್ನು ಮತ್ತು ಸರಕಾರಿ ಶಾಲೆಯನ್ನು ಉಳಿಸಲು ಅವಿರತ ಪ್ರಯತ್ನ ನಡೆಸಿದ್ದಾರೆ. ಕನ್ನಡ ನಾಡು, ನುಡಿ, ಜಲ, ಭಾಷೆಗೆ ತೊಂದರೆ ಎದುರಾದಾಗ ರಾಜ್ಯ ಸರಕಾರ ಕೈಕಟ್ಟಿ ಕುಳಿತಿಲ್ಲ. ತನ್ನದೇ ಆದ ರೀತಿಯಲ್ಲಿ ಕಾರ್ಯಾಚರಿಸಿ ಭಾಷೆಯನ್ನು ಮತ್ತು ನಾಡಲು ಉಳಿಸುವ ಜವಾಬ್ದಾರಿಯಿಂದ ಸರಕಾರ ನುಣಿಚಿಕೊಳ್ಳಲು ಮುಂದಾಗಿಲ್ಲ ಎಂದು ತಿಳಿಸಿದರು. 

ಮಾಜಿ ಕೇಂದ್ರ ಸಚಿವೆ ಡಿ.ಕೆ.ತಾರದೇವಿ ಮಾತನಾಡಿ, ರಾಜ್ಯದ ಪ್ರತಿ ಮನೆಗಳಲ್ಲಿ ಕನ್ನಡದ ಕಂಪು ಹೊರ ಹೊಮ್ಮುವ ಜತೆಗೆ ಸರಕಾರಿ ಶಾಲೆಗಳಲ್ಲಿ ಕನ್ನಡ ಮಾಧ್ಯಮಕ್ಕೆ ಸರಕಾರ ಸರಕಾರ ಪ್ರೋತ್ಸಾಹ ನೀಡುವ ಮೂಲಕ ಕನ್ನಡ ಶಾಲೆಗಳಿಗೆ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದಾಗ ಇಂತಹ ಸಮ್ಮೇಳನಕ್ಕೆ ಅರ್ಥ ಬರುತ್ತದೆ. ಮಹಾನಗರಗಳಲ್ಲಿ ಕನ್ನಡವೆಂಬುದೇ ಇಲ್ಲ. ಕನ್ನಡವನ್ನು ಹುಡುಕಿಕೊಂಡು ಹೋಗಬೇಕಾದ ಪರಿಸ್ಥಿತಿಯಿದೆ. ಸರಕಾರ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಕನ್ನಡ ಸಾಹಿತ್ಯ ಪರಿಷತ್ತನ್ನು ಇನ್ನಷ್ಟು ಗಟ್ಟಿಗೊಳಿಸಬೇಕು. ಭಾಷೆ ಉಳಿಸುವ ಇಂತಹ ಸಂಸ್ಥೆಗಳಿಗೆ ಸ್ವಾಯುತ್ತತೆ ಕೊಟ್ಟಲ್ಲಿ ಕನ್ನಡವನ್ನು ಬೆಳೆಸಲು ದೊಡ್ಡ ಕಷ್ಟ ಪಡಬೇಕಾದ ಅವಶ್ಯಕತೆಯಿಲ್ಲ ಎಂದು ತಿಳಿಸಿದರು. 

ಸಮ್ಮೇಳನಾಧ್ಯಕ್ಷ ಡಾ.ಡಿ.ಎಸ್.ಜಯಪ್ಪಗೌಡ, ಪತ್ನಿ ಸುಲೋಚನಾ ಅವರನ್ನು ಭವ್ಯ ರಥದಲ್ಲಿ ಕುಳ್ಳಿರಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಸಲಾಯತು. ಮೆರವಣಿಗೆಯಲ್ಲಿ ಜನಪದ ಮೇಳಗಳು, ಸುಗ್ಗಿ, ಡೊಳ್ಳು, ವೀರಗಾಸೆ ಸೇರಿದಂತೆ ವಿವಿಧ ಪರಿಕರಗಳನ್ನೊಳಗೊಂಡ ವಾದ್ಯಗಳೊಂದಿಗೆ ಸ್ಥಳೀಯ ಕಲಾವಿದರು ಹಾಗೂ ಹೊರ ಜಿಲ್ಲೆಗಳ ಕಲಾವಿದರು ಹಾಗೂ ಕನ್ನಡಾಭಿಮಾನಿಗಳು ಪಾಲ್ಗೊಂಡಿದ್ದರು. 

ಕಾರ್ಯಕ್ರಮದಲ್ಲಿ ಹಬ್ಬದ ಮಲೆ ಮಧ್ಯದೊಳಗೆ ಎಂಬ ಕಥಾ ಸಂಕಲನ ಎಂಬ ಪುಸಕ್ತವನ್ನು ಮಾಜಿ ಕೇಂದ್ರ ಸಚಿವೆ ಡಿ.ಕೆ.ತಾರಾದೇವಿ ಬಿಡುಗಡೆಗೊಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮ್ಮೇಳನಾಧ್ಯಕ್ಷ ಡಾ,ಡಿ.ಎಸ್.ಜಯಪ್ಪಗೌಡ ವಹಿಸಿದ್ದರು. 

ಜಿಲ್ಲಾ ಕಸಾಪ ಅಧ್ಯಕ್ಷ ಕುಂದೂರು ಅಶೋಕ್, ಜಿ.ಪಂ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ, ಎಂಎಲ್‍ಸಿಗಳಾದ ಎಂ.ಕೆ.ಪ್ರಾಣೇಶ್, ಎಸ್.ಎಲ್.ಭೋಜೇಗೌಡ, ತಾ.ಪಂ. ಅಧ್ಯಕ್ಷ ಕೆ.ಸಿ.ರತನ್, ಸಮ್ಮೇಳನ ಕೋಶಾಧ್ಯಕ್ಷ ರಂಜನ್ ಅಜಿತ್ ಕುಮಾರ್, ಪ.ಪಂ. ಅಧ್ಯಕ್ಷೆ ರಮೀಜಾಬಿ, ಡಾ.ಮಸಗಲಿ ಮಂಜಪ್ಪಶೆಟ್ಟಿ, ಚಿಕ್ಕಮಗಳೂರು ತಾಲೂಕು ಕಸಾಪ ಅಧ್ಯಕ್ಷ ಹಿರೆಮಗಳೂರು ಪುಟ್ಟಸ್ವಾಮಿ, ಮೂಡಿಗೆರೆ ತಾಲೂಕು ಅಧ್ಯಕ್ಷ ಮಗ್ಗಲಮಕ್ಕಿ ಗಣೇಶ್, ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ, ಜಿಲ್ಲಾ ವರಿಷ್ಟಾಧಿಕಾರಿ ಹರೀಶ್ ಪಾಂಡೆ, ಜಿ.ಪಂ. ಸಿಇಒ ಸತ್ಯಬಾಮ, ಸುಲೋಚನಾ ಜಯಪ್ಪಗೌಡ, ಪ್ರೋ,ಪಿ.ಎಂ.ಲಕ್ಷ್ಮೀಕಾಂತ್, ಭಾಲಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.

ಸರಕಾರಿ ಶಾಲೆ ಕನ್ನಡ ಮಾಧ್ಯಮ ಸರಕಾರಿ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗಕ್ಕೆ ಸೇರಿದಂತಾಗಿದೆ. ಇದರಿಂದ ಹೊರ ತರುವ ಕೆಲಸವನ್ನು ರಾಜ್ಯ ಸರಕಾರ ಮಾಡಬೇಕಿದೆ. ಇದೇ ರೀತಿ ಕನ್ನಡ ಶಾಲೆಗಳ ಸ್ಥಿತಿ ಮುಂದುವರೆದರೆ ಹಂತ ಹಂತವಾಗಿ ಸರಕಾರಿ ಶಾಲೆಗಳೆಲ್ಲವನ್ನೂ ಮುಚ್ಚುವ ಮೂಲಕ ಆಂಗ್ಲ ಮಾಧ್ಯಮ ಖಾಸಗಿ ಶಾಲೆಗಳಿಗೆ ಸರಕಾರ ಇನ್ನು ಹೆಚ್ಚು ಸಹಕಾರ ನೀಡಿದಂತಾಗುತ್ತದೆ. ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಡೆಯುವ ಚರ್ಚೆಗಳನ್ನು ಸರಕಾರ ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ. ಇಲ್ಲವಾದರೆ ಸಮ್ಮೇಳನಕ್ಕೆ ಅರ್ಥವೆಂಬುದೇ ಇರುವುದಿಲ್ಲ. 
- ಕುಂದೂರು ಅಶೋಕ್, ಜಿಲ್ಲಾ ಕಸಾಪ ಅಧ್ಯಕ್ಷ 

ಕನ್ನಡವೆಂಬ ಒಂದು ಭಾಷೆಯನ್ನು ಕಲಿತು ರಾಜ್ಯದ 30 ಜಿಲ್ಲೆಗಳಲ್ಲೂ ತಿರುಗಾಡಲಾರದ ಪರಿಸ್ಥಿತಿಯಿದೆ. ಚಿತ್ರದುರ್ಗ ಜಿಲ್ಲೆ ದಾಟಿ ಮುಂದೆ ಹೋದರೆ ಬೇರೆ ಭಾಷೆಗಳೆ ಎದುರಾಗುತ್ತದೆ. ಬೆಂಗಳೂರು ಮಹಾನಗರದಲ್ಲಿ ಕನ್ನಡ ಭಾಷೆಯೊಂದನ್ನು ಬಿಟ್ಟು, ಬೇರೆಲ್ಲಾ ಭಾಷೆಯೂ ಚಾಲ್ತಿಯಲ್ಲಿದೆ. ನಮ್ಮ ರಾಜ್ಯದ ಪರಿಸ್ಥಿತಿ ಹೀಗಾದರೆ ಹೊರ ರಾಜ್ಯದಲ್ಲಿ ಕನ್ನಡ ಬೆಳೆಸಲು ಹೇಗೆ ಸಾಧ್ಯ. ಮೊದಲು ಕನ್ನಡ ಶಾಲೆಯನ್ನು ಉಳಿಸಿ ಬೆಳೆಸಲು ಮುಂದಾದರೆ ತಾನಾಗಿಯೆ 30 ಜಿಲ್ಲೆಗಳಲ್ಲಿ ಕನ್ನಡ ಭಾಷೆ ಪಸರಿಸುತ್ತದೆ. 
- ಎಸ್.ಎಲ್.ಭೋಜೇಗೌಡ, ವಿಧಾನ ಪರಿಷತ್ ಸದಸ್ಯ

ಕನ್ನಡ ಭಾಷೆ ಯಾಕೆ ನಶಿಸಿಹೋಗುತ್ತಿದೆ ಎಂಬುದು ರಾಜ್ಯದ ಕನ್ನಡಿಗರು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ಕನ್ನಡ ಭಾಷೆ ನಶಿಸಿ ಹೋಗಲು ಕನ್ನಡಿಗರೆ ಕಾರಣ. ಹಿಂದಿ, ಇಂಗ್ಲೀಷ್ ಮತ್ತಿತರೆ ಭಾಷೆಗಳನ್ನು ಕಲಿಯುವುದು ಕೂಡ ಅಗತ್ಯವಾಗಿದೆ. ಅದಕ್ಕೆ ಯಾವುದೇ ವಿರೋಧವಿಲ್ಲ. ಆದರೆ ನಾವೇ ಕನ್ನಡ ವಿರೋಧಿ ಧೋರಣೆ ಅನುಸರಿಸಿದರೆ ಕನ್ನಡವನ್ನು ಬೆಳೆಸಲು ಸಾಧ್ಯವೇ ಇಲ್ಲ. ಮನೆಯಲ್ಲಿ ಮಕ್ಕಳಿಗೆ ಡ್ಯಾಡಿ, ಮಮ್ಮಿ, ಅಂಕಲ್, ಆಂಟಿ ಎಂಬ ಆಂಗ್ಲ ಪದಬಳಕೆಯಿಂದ ಮಕ್ಕಳಲ್ಲಿ ಕನ್ನಡದ ಬೆಳವಣಿಗೆ ಕುಂಠಿತವಾಗಲು ಕಾರಣವಾಗಿದೆ. 

- ಎಂ.ಕೆ.ಪ್ರಾಣೇಶ್, ವಿಧಾನ ಪರಿಷತ್ ಸದಸ್ಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News