ದೇಶದ ಎರಡನೇ ಅತ್ಯಂತ ಚಿಕ್ಕ ರಾಜ್ಯದಲ್ಲಿ ದೇಶದ ಎರಡನೇ ಅತಿ ದೊಡ್ಡ ಸರಕಾರಿ ಆಸ್ಪತ್ರೆ

Update: 2019-01-19 05:58 GMT

ಗ್ಯಾಂಗ್ಟಾಕ್, ಜ. 19:  ದೇಶದ ಎರಡನೇ ಅತ್ಯಂತ ಚಿಕ್ಕ ರಾಜ್ಯವಾದ ಸಿಕ್ಕಿಂನಲ್ಲಿ ದೇಶದ ಎರಡನೇ ಅತಿ ದೊಡ್ಡ ಸರಕಾರಿ ಆಸ್ಪತ್ರೆ ಉದ್ಘಾಟನೆಗೊಂಡಿದೆ.

ರಾಜ್ಯದ ಸೋಚಯ್ ಗಂಗ್ ಎಂಬಲ್ಲಿರುವ ಈ ಆಸ್ಪತ್ರೆಯನ್ನು ಜ. 14ರಂದು  ಮುಖ್ಯಮಂತ್ರಿ ಪವನ್ ಚಮ್ಲಿಂಗ್ ಉದ್ಘಾಟಿಸಿದ್ದಾರೆ. ಒಟ್ಟು 1,002 ಹಾಸಿಗೆ ಸಾಮರ್ಥ್ಯದ ಈ ಆಸ್ಪತ್ರೆ ದೆಹಲಿಯಲ್ಲಿರುವ ದೇಶದ ಅತ್ಯಂತ ದೊಡ್ಡ ಸರಕಾರಿ ಆಸ್ಪತ್ರೆಯಾದ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್ಸ್) ನಂತರದ ಎರಡನೇ ಅತಿ ದೊಡ್ಡ ಆಸ್ಪತ್ರೆಯಾಗಿದೆ.

ಒಟ್ಟು ಹತ್ತು ಅಂತಸ್ತುಗಳ ಈ ಸರ್ ತುಟೊಬ್ ನಮ್ಗ್ಯಲ್ ಮೆಮೋರಿಯಲ್ ಮಲ್ಟಿ-ಸ್ಪೆಷಾಲಿಟಿ ಹಾಸ್ಪಿಟಲ್ ಒಟ್ಟು 15 ಎಕರೆ ವಿಶಾಲ ಪ್ರದೇಶದಲ್ಲಿದೆ. ಸುಮಾರು 1,281 ಕೋಟಿ ರೂ. ವೆಚ್ಚದಲ್ಲಿ  ನಿರ್ಮಿಸಲಾಗಿರುವ ಈ ಆಸ್ಪತ್ರೆ ಕಟ್ಟಡದ ನಿರ್ಮಾಣಕ್ಕೆ ಒಟ್ಟು ಒಂಬತ್ತು ವರ್ಷಗಳೇ ಬೇಕಾಯಿತು. ಸಿಕ್ಕಿಂ ರಾಜಧಾನಿ ಗ್ಯಾಂಗ್ಟಾಕ್ ನಲ್ಲಿರುವ ಶತಮಾನದಷ್ಟು ಹಳೆಯದಾದ ಎಸ್‍ಟಿಎನ್‍ಎಂ ಆಸ್ಪತ್ರೆಯನ್ನು ಈ ಹೊಸ ಆಸ್ಪತ್ರೆಗೆ ಸ್ಥಳಾಂತರಿಸಲಾಗುವುದು.

ಗುಡ್ಡ ಪ್ರದೇಶದಲ್ಲಿ ನಿರ್ಮಾಣವಾಗಿರುವ ಈ ಆಸ್ಪತ್ರೆಯ ಮುಖ್ಯ ಕಟ್ಟಡ ನಿರ್ಮಾಣಕ್ಕೆ ಭೂಕಂಪ ನಿರೋಧಕ ತಂತ್ರಜ್ಞಾನ ಅಳವಡಿಸಲಾಗಿದ್ದು ರಿಕ್ಟರ್ ಮಾಪಕದಲ್ಲಿ 8ರಷ್ಟು ತೀವ್ರತೆಯ ಭೂಕಂಪವನ್ನು ಇದು ತಾಳಿಕೊಳ್ಳುವ ಸಾಮರ್ಥ್ಯ ಹೊಂದಿದೆ. ವಿಶ್ವ ದರ್ಜೆಯ ಅತ್ಯಾಧುನಿಕ ಸೌಲಭ್ಯಗಳಿರುವ ಈ ಆಸ್ಪತ್ರೆಯಲ್ಲಿ 23 ಶಸ್ತ್ರಕ್ರಿಯಾ ಕೊಠಡಿಗಳು ಏಕಕಾಲದಲ್ಲಿ ಕಾರ್ಯಾಚರಿಸಬಹುದಾಗಿದೆ.

ಎಲ್ಲಾ ಅತ್ಯಾಧುನಿಕ ವೈದ್ಯಕೀಯ ಉಪಕರಣಗಳನ್ನು ಹೊಂದಿರುವ ಈ ಆಸ್ಪತ್ರೆಗೆ ಈಗಾಗಲೇ 47 ತಜ್ಞರು ಹಾಗೂ 261 ದಾದಿಯರನ್ನು ನೇಮಕ ಮಾಡಲಾಗಿದ್ದು ಇನ್ನೂ ಹಲವಾರು ಸಿಬ್ಬಂದಿಯ ನೇಮಕಾತಿ ನಡೆಯಲಿದೆ.

ಫೆ. 1ರಿಂದ ಈ ಆಸ್ಪತ್ರೆ ಸಾರ್ವಜನಿಕರ ಸೇವೆಗೆ ಲಭ್ಯವಿದ್ದು ಎಲ್ಲರಿಗೂ ಇಲ್ಲಿ ಉಚಿತ ಚಿಕಿತ್ಸೆ ದೊರೆಯಲಿದೆ. ಗ್ಯಾಂಗ್ಟಾಕ್ ಮತ್ತು ಸುತ್ತಮುತ್ತಲನ ಪ್ರದೇಶದ ಸಿಬ್ಬಂದಿ ಮತ್ತು ಸಾರ್ವಜನಿಕರನ್ನು ಆಸ್ಪತ್ರೆಗೆ ಕರೆ ತರಲು ಎಂಟು ಬಸ್ಸುಗಳ ಸೇವೆ ದಿನದ 24 ಗಂಟೆಗಳೂ ಲಭ್ಯವಾಗಲಿವೆ. ರೋಗಿಗಳ ಸಂಬಂಧಿಕರಿಗೆ ಉಳಿದುಕೊಳ್ಳಲು 119 ಆಸಿಗೆಗಳ ಯಾತ್ರಿ ನಿವಾಸ ಕೂಡ ಹತ್ತಿರದಲ್ಲಿಯೇ ತಲೆಯೆತ್ತಿದೆ.

ರಾಜ್ಯದ ಮೊದಲ ವೈದ್ಯಕೀಯ ಕಾಲೇಜಿಗೆ ಕೂಡ ಮುಖ್ಯಮಂತ್ರಿ ಚಮ್ಲಿಂಗ್ ಶಿಲಾನ್ಯಾಸ ನೆರವೇರಿಸಿದ್ದಾರೆ. ಆಸ್ಪತ್ರೆ ಕಟ್ಟಡದ ಪಕ್ಕದಲ್ಲಿಯೇ 556 ಕೋಟಿ ರೂ. ವೆಚ್ಚದ ಕಾಲೇಜು ನಿರ್ಮಾಣವಾಗಲಿದೆ. ಅಲ್ಲಿಯ ತನಕ ವೈದ್ಯಕೀಯ ಶಿಕ್ಷಣ ಕೋರ್ಸುಗಳನ್ನು ಹಳೆಯ ಎಸ್‍ಟಿಎನ್‍ಎಂ ಆಸ್ಪತ್ರೆ ಕಟ್ಟಡದಲ್ಲಿ ನಡೆಸಲಾಗುವುದು. ಈ ವರ್ಷದ ಜುಲೈ ತಿಂಗಳಲ್ಲಿ ವೈದ್ಯಕೀಯ ಶಿಕ್ಷಣ ತರಗತಿಗಳು ಆರಂಭಗೊಳ್ಳುವವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News