ಪ್ರಧಾನಿ ಸಹಿತ ರಾಜಕೀಯ ಗಣ್ಯರ ವಿರುದ್ಧ ಸ್ಪರ್ಧಿಸಲಿದ್ದಾರೆ ಜೀವಂತವಿರುವ 'ಸತ್ತವರು' !

Update: 2019-01-19 08:38 GMT

ವಾರಣಾಸಿ, ಜ. 19:  ಪ್ರಧಾನಿ ನರೇಂದ್ರ ಮೋದಿ ಮುಂದಿನ ಲೋಕಸಭಾ ಚುನಾವಣೆಯನ್ನು ವಾರಣಾಸಿಯಿಂದ ಮತ್ತೆ ಸ್ಪರ್ಧಿಸಲು ನಿರ್ಧರಿಸಿದರೆ ವಿಪಕ್ಷಗಳ ಅಭ್ಯರ್ಥಿಗಳ ಹೊರತಾಗಿ ಅವರು ಜೀವಂತ ಸತ್ತವರ ಸವಾಲನ್ನೂ ಎದುರಿಸಬೇಕಾದೀತು. ಮೋದಿ ಮಾತ್ರವಲ್ಲ, ಇಂತಹುದೇ ಸವಾಲು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಹಾಗೂ ಬಿಎಸ್‍ಪಿ ನಾಯಕಿ ಮಾಯಾವತಿಗೂ ಕಾದಿದೆ.

ಜೀವಂತವಿದ್ದರೂ ಸರಕಾರಿ ದಾಖಲೆಗಳಲ್ಲಿ ತಪ್ಪಾಗಿ ಮೃತರು ಎಂದು ಘೋಷಿಸಲ್ಪಟ್ಟ ಜನರ ಸಂಘಟನೆ ಮೃತಕ್ ಸಂಘ್ ಪ್ರಧಾನಿ ಮೋದಿ ಸಹಿತ ಇತರ ರಾಜಕೀಯ ದಿಗ್ಗಜರ ವಿರುದ್ಧ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಿರ್ಧರಿಸಿದೆ.

ಜೀವಂತವಿದ್ದರೂ ದಾಖಲೆಗಳಲ್ಲಿ ಮೃತ ಪಟ್ಟಿರುವ ನಮ್ಮಂತಹ ಜನರ ಕಷ್ಟಗಳತ್ತ ನಾಯಕರ ಗಮನವನ್ನು ಸೆಳೆಯಲು ನಾವು ಚುನಾವಣೆಯಲ್ಲಿ ಸ್ಪರ್ಧಿಸಲಿದ್ದೇವೆ ಎಂದು  ಸಂಘದ ಅಧ್ಯಕ್ಷ ಲಾಲ್ ಬಿಹಾರಿ 'ಮೃತಕ್' ಆಝಂಘರ್ ನ ರಾಜಘಾಟ್ ರುದ್ರಭೂಮಿಯಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

''ಚುನಾವಣೆಯಲ್ಲಿ ನಾವು ಕೇವಲ ಸತ್ತವರನ್ನು ನಿಲ್ಲಿಸುತ್ತೇವೆ,  ತಾವು ಜೀವಂತವಿದ್ದೇವೆ ಎಂದು ತೋರಿಸಿಕೊಳ್ಳಲು ಇದು ಅವರಿಗೆ ಉತ್ತಮ ವಿಧಾನ'' ಎಂದು ಅವರು ಹೇಳಿದ್ದಾರೆ.

''ಅಲಹಾಬಾದ್ ಹೈಕೋರ್ಟ್ ತನ್ನ 2000ದ ಆದೇಶದ ನಂತರ ಜೀವಂತವಿದ್ದರೂ ಸತ್ತಿದ್ದಾರೆ ಎಂದು ದಾಖಲೆಗಳಲ್ಲಿ ಘೋಷಿಸಲ್ಪಟ್ಟ ಸಾವಿರಾರು ಮಂದಿಯನ್ನು ಜೀವಂತ ಎಂದು ಘೋಷಿಸಿದ್ದರೂ ಅಂತಹವರು ತಮ್ಮ ಆಸ್ತಿಗಳನ್ನು ಇನ್ನಷ್ಟೇ ಪಡೆಯಬೇಕಿದೆ. ಎಲ್ಲಾ ಪಕ್ಷಗಳೂ ನಮ್ಮಂತಹವರನ್ನು ನಿರ್ಲಕ್ಷ್ಯಿಸಿದೆ'' ಎಂದು  ಲಾಲ್ ಬಿಹಾರಿ ಹೇಳಿದ್ದಾರೆ.

ತಮ್ಮ ಸಂಘ ಇಲ್ಲಿಯ ತನಕ ಒಂದು ಸಾವಿರಕ್ಕೂ ಅಧಿಕ ಮಂದಿಗೆ ಸಹಾಯ ಮಾಡಿದೆ ಎಂದು ಅವರು ಹೇಳಿಕೊಂಡಿದ್ದಾರೆ.

ಲಾಲ್ ಬಿಹಾರಿಯನ್ನು ಜುಲೈ 1977ರಲ್ಲಿ ಅವರ ಸ್ವಂತ ಬಂಧುಗಳೇ ಸತ್ತಿದ್ದಾರೆಂದು ಘೋಷಿಸಿ ಅವರ ಹೆಸರಲ್ಲಿದ್ದ ಆಸ್ತಿಯನ್ನು ತಮ್ಮ ಹೆಸರಿಗೆ ಮಾಡಿಸಿಕೊಂಡಿದ್ದರು. ಅವರು 1988ರ ಲೋಕಸಭಾ ಉಪಚುನಾವಣೆಯಲ್ಲಿ ಅಲಹಾಬಾದ್ ನಿಂದ ವಿಪಿ ಸಿಂಗ್, ಕಾನ್ಶಿರಾಮ್ ಹಾಗೂ ಸುನಿಲ್ ಶಾಸ್ತ್ರಿ ವಿರುದ್ಧ  ಹಾಗೂ 1989ರಲ್ಲಿ ಅಮೇಠಿಯಿಂದ ರಾಜೀವ್ ಗಾಂಧಿ ವಿರುದ್ಧ ಸ್ಪರ್ಧಿಸಿದ್ದರಲ್ಲದೆ ನಂತರ ಆರಕ್ಕೂ ಹೆಚ್ಚು ಚುನಾವಣೆಗಳಲ್ಲಿ ಸ್ಪರ್ಧಿಸಿದ್ದರು.

ಅಂತಿಮವಾಗಿ ಜೂನ್ 30, 1994ರಂದು ಅವರನ್ನು ದಾಖಲೆಗಳಲ್ಲಿ ಜೀವಂತವಾಗಿದ್ದಾರೆಂದು ಘೋಷಿಸಲಾಯಿತು. ತನ್ನನ್ನು 17 ವರ್ಷಗಳ ಕಾಲ ಮೃತ ಎಂದು ಘೋಷಿಸಿದ ಉತ್ತರ ಪ್ರದೇಶ ಸರಕಾರದ ವಿರುದ್ಧ 25 ಕೋಟಿ ರೂ. ಮಾನಹಾನಿ ಪ್ರಕರಣವನ್ನೂ ಅವರು ದಾಖಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News