ದೇಶದ ಜನತೆ ಮೋದಿಯನ್ನು ಅನುಮಾನದಿಂದ ನೋಡುತ್ತಿದ್ದಾರೆ: ಡಾ.ಡಿ.ಎಲ್.ವಿಜಯಕುಮಾರ್

Update: 2019-01-19 12:28 GMT

ಕೊಪ್ಪ, ಜ.19: ಸತತ ಬೆಲೆಯೇರಿಕೆ, ನೋಟು ಅಮಾನ್ಯೀಕರಣ, ನಿರುದ್ಯೋಗ ಸಮಸ್ಯೆಯಿಂದ ದೇಶದಲ್ಲಿ ಜನಸಾಮಾನ್ಯರು ಬೇಸತ್ತಿದ್ದು ಪ್ರಧಾನಿ ಮೋದಿಯನ್ನು ಅನುಮಾನದಿಂದ ನೋಡುತ್ತಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಡಿ.ಎಲ್. ವಿಜಯಕುಮಾರ್ ಹೇಳಿದರು.

ಪಟ್ಟಣದ ಪುರಭವನದಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡಿದ್ದ ಸಂಕ್ರಾಂತಿ ಸಮ್ಮಿಲನ ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ವಿದೇಶದಲ್ಲಿರುವ ಕಪ್ಪುಹಣವನ್ನು ವಾಪಸ್ಸು ತಂದು ಪ್ರತಿಯೊಬ್ಬ ಭಾರತೀಯನ ಬ್ಯಾಂಕ್ ಖಾತೆತೆ ರೂ. 15 ಲಕ್ಷ ಜಮೆ ಮಾಡುವುದಾಗಿ ಮೋದಿ ಹೇಳಿದ್ದರು. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಠಿ ಮಾಡುವ ಭರವಸೆ ನೀಡಿದ್ದರು. ಆದರೆ ಮೋದಿ ಹೇಳಿದ ಯಾವುದೇ ಆಶ್ವಾಸನೆಯನ್ನು ಈಡೇರಿಸಿಲ್ಲ. ಆದರ ಬದಲು ರಫೆಲ್ ಹಗರಣದಲ್ಲಿ ಮುಳುಗಿ ಹೋಗಿದ್ದಾರೆ. ಎರಡು ವರ್ಷಗಳ ಹಿಂದೆ ರೂ. 2000 ನೋಟನ್ನು ಮುದ್ರಣ ಮಾಡಿದ್ದು ಈಗ ವಿನಾಕಾರಣ ರದ್ದು ಮಾಡಲು ಹೊರಟಿದ್ದಾರೆ.

 ಈ ಹಿಂದೆ ರಾಜ್ಯದಲ್ಲಿ ಆಡಳಿತ ಮಾಡಿದ ಕಾಂಗ್ರೆಸ್ ಸರ್ಕಾರ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ್ದ 165 ಭರವಸೆಗಳನ್ನು ಈಡೇರಿಸಿತ್ತು. ಭ್ರಷ್ಟಾಚಾರ ರಹಿತ ಆಡಳಿತ ನೀಡಿತ್ತು. ಆದರೂ ಕಳೆದ ಚುನಾವಣೆಯಲ್ಲಿ ರಾಜ್ಯದ ಜನ ಪಕ್ಷಕ್ಕೆ ಬಹುಮತ ನೀಡಿಲ್ಲ. ಅನಿವಾರ್ಯವಾಗಿ ಸಮ್ಮಿಶ್ರ ಸರ್ಕಾರದ ಮೊರೆ ಹೋಗಬೇಕಾಯಿತು. ನಮ್ಮದೇ ಸರ್ಕಾರ ಇದ್ದರೇ ಅನುಕೂಲ ಆಗುತ್ತಿತ್ತು. ಪಕ್ಷದ ಕಾರ್ಯಕರ್ತರು ಆದಷ್ಟು ತಾಳ್ಮೆ ವಹಿಸಬೇಕು. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಠಿಣ ಶ್ರಮ ಹಾಕಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದರು.

 ಶಾಸಕ ಟಿ.ಡಿ. ರಾಜೇಗೌಡ ಮಾತನಾಡಿ, ಕಳೆದ 9 ತಿಂಗಳಲ್ಲಿ ಸರ್ಕಾರ ರಚನೆ, ಪ್ರಕೃತಿ ವಿಕೋಪ ಮುಂತಾದ ಕಾರಣಗಳಿಂದ ಕ್ಷೇತ್ರದ ಅಭಿವೃದ್ದಿ ಕಡೆ ಗಮನ ಹರಿಸಲು ಆಗಿರಲಿಲ್ಲ. ಈಗ ಎಲ್ಲವೂ ಸರಿಯಾಗಿದ್ದು ಸರ್ಕಾರ ಸುಭದ್ರವಾಗಿದೆ. ಕಳೆದ 3 ತಿಂಗಳಲ್ಲಿ ರೂ. 150 ಕೋಟಿ ಅನುದಾನ ತಂದಿದ್ದೇನೆ. ರೂ. 40 ಕೋಟಿ ವೆಚ್ಚದ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ್ದು ಕಾಮಗಾರಿ ಪ್ರಗತಿಯಲ್ಲಿದೆ. ರೂ. 75 ಲಕ್ಷ ಕುಡಿಯುವ ನೀರಿಗೆ ಮೀಸಲಿಡಲಾಗಿದೆ.

 ವಿರೋಧ ಪಕ್ಷದವರು ರಾಜೇಗೌಡರು ಬಿಜೆಪಿಗೆ ಡೀಲ್ ಆಗಿದ್ದಾರೆ ಎಂದು ಪದೇ ಪದೇ ಸುದ್ದಿ ಹರಡುತ್ತಿದ್ದಾರೆ. ನನ್ನ ಪಕ್ಷದ ಕಾರ್ಯಕರ್ತರ ಶ್ರಮದ ಬೆವರಿನ ಎದುರು ಯಾವ ದುಡ್ಡು ಲೆಕ್ಕಕ್ಕಿಲ್ಲ. ಆದ್ದರಿಂದ ಸಿಎಂ ಮಾಡುತ್ತೇನೆ ಎಂದರು ಪಕ್ಷ ಬಿಟ್ಟು ಹೋಗುವ ಪ್ರಶ್ನೆಯೇ ಇಲ್ಲ ಎಂದರು. ಚುನಾವಣೆ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರು ಮನೆಮನೆಗೆ ಹೋಗಿ ಭರವಸೆಗಳನ್ನು ಕೊಟ್ಟು ಬಂದಿದ್ದೀರಿ. ಹಂತಹಂತವಾಗಿ ಅದನ್ನು ಈಡೇರಿಸುವ ಕೆಲಸ ಮಾಡುತ್ತೇನೆ. ಮುಂದಿನ ಐದು ವರ್ಷದಲ್ಲಿ ಕ್ಷೇತ್ರದ ಸಂಪೂರ್ಣ ಅಭಿವೃದ್ದಿಯೇ ನನ್ನ ಗುರಿ.

ಇದೇ ಸಂದರ್ಭದಲ್ಲಿ ಗ್ರಾಮಾಂತರ ಪಂಚಾಯತ್ ಅಧ್ಯಕ್ಷೆ ವಿದ್ಯಾ ಜಯರಾಂ, ಸದಸ್ಯ ಎಸ್.ಬಿ. ಸತೀಶ್ಚಂದ್ರ ಶೆಟ್ಟಿ ಸೇರಿದಂತೆ ಸಿಗದಾಳು ಮತ್ತು ನಾರ್ವೆಯಿಂದ 30ಕ್ಕೂ ಹೆಚ್ಚು ಬೇರೆ ಪಕ್ಷಗಳ ಮುಖಂಡರು ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಯಾದರು.

 ವೇದಿಕೆಯಲ್ಲಿ ಎಐಸಿಸಿ ಕಾರ್ಯದರ್ಶಿ ಸಂದೀಪ್, ಸಚಿನ್ ಮೀಗ, ಎಚ್.ಎಂ. ಸತೀಶ್, ಎಂ.ಎಚ್. ಸುಧೀರ್ ಕುಮಾರ್ ಮುರೊಳ್ಳಿ, ಎಚ್.ಎಂ. ನಟರಾಜ್, ಎ.ಎಸ್. ನಾಗೇಶ್, ಚಂದ್ರೇಗೌಡ, ಸೀತಾಲಕ್ಷ್ಮೀ, ಅನ್ನಪೂರ್ಣ ನರೇಶ್, ಯು.ಎಸ್.ಶಿವಪ್ಪ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News