ಮಹಿಳೆಗೆ ಅಸಾಧ್ಯ ಎಂಬುದು ಯಾವುದೂ ಇಲ್ಲ: ರೂಪಾ ಶಾ

Update: 2019-01-19 15:10 GMT

ಮಂಗಳೂರು, ಜ.19: ಮಹಿಳೆಗೆ ಅಸಾಧ್ಯ ಎಂಬುದು ಯಾವುದೂ ಇಲ್ಲ. ಹಣ, ಶಕ್ತಿ ಮತ್ತು ಅನ್ನಕ್ಕೆ ಸಮಾನವಾಗಿ ಮಹಿಳೆಯರನ್ನು ಬಿಂಬಿಸಿರುವುದು ಸ್ತ್ರೀ ಸಾಮರ್ಥ್ಯಕ್ಕೆ ಸಿಕ್ಕ ಗೌರವವಾಗಿದೆ ಎಂದು ಮುಂಬೈಯ ಎಸ್‌ಎನ್‌ಡಿಟಿ ಮಹಿಳಾ ವಿವಿ ಕುಲಪತಿ ರೂಪಾ ಶಾ ಅಭಿಪ್ರಾಯಪಟ್ಟರು.

ನಗರದ ಟಿ.ಎಂ.ಎ.ಪೈ ಕನ್ವೆನ್ಶನಲ್ ಸೆಂಟರ್‌ನಲ್ಲಿ ಶನಿವಾರ ವುಮೆನ್ಸ್ ನ್ಯಾಷನಲ್ ಎಜುಕೇಶನ್ ಸೊಸೈಟಿ ಆಶ್ರಯದಲ್ಲಿ ಆಯೋಜಿಸಿದ್ದ ಬೆಸೆಂಟ್ ಶತಮಾನೋತ್ಸವ ಸಮಾರಂಭದಲ್ಲಿ ಮಹಿಳಾ ಸಬಲೀಕರಣದ ಬಗ್ಗೆ ಅವರು ಉಪನ್ಯಾಸ ನೀಡಿದರು.

ತಾಯಿ ಮಗುವನ್ನು 9 ತಿಂಗಳು ಹೊತ್ತು, ಹೆತ್ತು ಸಲಹುವ ಪ್ರಕ್ರಿಯೆ ಮಹಿಳೆಯ ಸಾಮರ್ಥ್ಯಕ್ಕೆ ಸಾಕ್ಷಿ. ಆತ್ಮವಿಶ್ವಾಸ ಆಕೆಯ ಈ ಸಾಧನೆಗೆ ಕಾರಣವಾಗಿದೆ. ಆದಿಕಾಲದಿಂದಲೂ ಮಹಿಳೆ ಎಲ್ಲ ಕ್ಷೇತ್ರಗಳಲ್ಲಿ ಒಂದು ಹೆಜ್ಜೆ ಮುಂದಿರುವುದನ್ನು ಇತಿಹಾಸ ಸಾರಿದೆ ಎಂದು ರೂಪಾ ಶಾ ಹೇಳಿದರು.

ಮಹಿಳೆ ವಿವಿಧ ಸಂದರ್ಭಗಳಲ್ಲಿ ಮಾನಸಿಕವಾಗಿ ಕುಗ್ಗಿಸುವ ಸಂದರ್ಭ ಎದುರಾಗುವುದು ಸಾಮಾನ್ಯ. ಆರಂಭದಲ್ಲಿ ನಾನು ಕಾಫಿ ಟೇಸ್ಟರ್ ಆಗಿ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿಕೊಂಡಾಗ ಹಲವರು ನಕ್ಕಿದ್ದರು. ನಾನು ಮಾಡುವ ಕೆಲಸದಲ್ಲಿ ವಿಜ್ಞಾನವಿದೆ ಎಂಬುದನ್ನು ಯಾರೂ ಅರ್ಥ ಮಾಡಿಕೊಂಡಿರಲಿಲ್ಲ. ಕಾಫಿಯ ಗುಣಮಟ್ಟ ಕಾಯ್ದುಕೊಂಡು ರೈತರ ಮುಖದಲ್ಲಿ ಮಂದಹಾಸ ಬೀರಿದಾಗ ನನ್ನ ಕಾರ್ಯ ಸಾರ್ಥಕವೆನಿಸುತ್ತದೆ ಎಂದು ಕಾಫಿ ಲ್ಯಾಬ್ ಲಿಮಿಟೆಡ್‌ನ ಅಧ್ಯಕ್ಷೆ ಸುನಾಲಿನಿ ಎನ್.ಮೆನನ್ ಹೇಳಿದರು.

ಕಾಲೇಜಿನ ಪ್ರಾಂಶುಪಾಲ ಡಾ.ಸತೀಶ್ ಕುಮಾರ್ ಶೆಟ್ಟಿ, ದಶಮಾನೋತ್ಸವ ಆಚರಣೆ ಸಮಿತಿಯ ಅಧ್ಯಕ್ಷ ಕೆ.ದೇವಾನಂದ ಪೈ, ವುಮೆನ್ಸ್ ನ್ಯಾಷನಲ್ ಎಜುಕೇಶನ್ ಸೊಸೈಟಿ ಅಧ್ಯಕ್ಷ ಕುಡ್ಪಿ ಜಗದೀಶ ಶೆಣೈ, ಉಪಾಧ್ಯಕ್ಷ ಮನೇಲ್ ಅನ್ನಪ್ಪ ನಾಯಕ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News