ಅಧಿಕಾರಕ್ಕಾಗಿ ಘನತೆ ಮಾರಾಟಕ್ಕಿಟ್ಟ ಮಾಯಾವತಿ: ವಿವಾದಾತ್ಮಕ ಹೇಳಿಕೆ ನೀಡಿದ ಬಿಜೆಪಿ ಶಾಸಕಿ

Update: 2019-01-20 09:21 GMT

ಲಕ್ನೋ, ಜ. 20: "ಬಿಎಸ್ಪಿ ನಾಯಕಿ ಮಾಯಾವತಿ ಕ್ಷುಲ್ಲಕ ಮಹಿಳೆ. ಅಧಿಕಾರಕ್ಕಾಗಿ ತನ್ನ ಘನತೆಯನ್ನು ಮಾರಾಟ ಮಾಡಿಕೊಳ್ಳುತ್ತಿದ್ದಾರೆ" ಎಂದು ಹೇಳಿಕೆ ನೀಡುವ ಮೂಲಕ ಉತ್ತರ ಪ್ರದೇಶದ ಬಿಜೆಪಿ ಶಾಸಕಿಯೊಬ್ಬರು ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.

ಶನಿವಾರ ರ್ಯಾಲಿಯೊಂದರಲ್ಲಿ ಮಾತನಾಡುವ ವೇಳೆ ಮುಘಲ್‌ಸರಾಯ್ ಶಾಸಕಿ ಸಾಧನಾ ಸಿಂಗ್, "ಮಾಯಾವತಿಗೆ ಆತ್ಮಗೌರವ ಇಲ್ಲ. ಆಕೆ ಈ ಮೊದಲು ಕೂಡಾ ಕಿರುಕುಳಕ್ಕೀಡಾಗಿದ್ದಾರೆ. ಇತಿಹಾಸದಲ್ಲಿ ದ್ರೌಪದಿ ಕಿರುಕುಳಕ್ಕೆ ಒಳಗಾದಾಗ, ಪ್ರತೀಕಾರ ಬಯಸಿದಳು ಆದರೆ ಈ ಮಹಿಳೆ ಎಲ್ಲವನ್ನೂ ಕಳೆದುಕೊಂಡಿದ್ದು, ಇದೀಗ ಅಧಿಕಾರಕ್ಕಾಗಿ ತಮ್ಮ ಘನತೆಯನ್ನೇ ಮಾರಿಕೊಳ್ಳುತ್ತಿದ್ದಾರೆ. ಮಾಯಾವತಿಯವರನ್ನು ನಾವು ಖಂಡಿಸುತ್ತೇವೆ. ಆಕೆ ಮಹಿಳೆಯಲ್ಲೇ ತುಚ್ಛ" ಎಂದು ಹೇಳಿದ್ದರು.

1995ರಲ್ಲಿ ಅತಿಥಿಗೃಹವೊಂದರಲ್ಲಿ ಮಾಯಾವತಿ ಮೇಲೆ ಸಮಾಜವಾದಿ ಪಕ್ಷದ ಕಾರ್ಯಕರ್ತರು ಹಲ್ಲೆ ನಡೆಸಿದ್ದನ್ನು ಪರೋಕ್ಷವಾಗಿ ಉಲ್ಲೇಖಿಸಿ ನೀಡಿರುವ ಈ ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ದೇಶಕ್ಕಾಗಿ ಇತಿಹಾಸವನ್ನು ನಾನು ಮರೆತಿದ್ದೇನೆ ಎಂದು ಅಖಿಲೇಶ್ ಯಾದವ್ ಜತೆಗಿನ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾಯಾವತಿ ಇತ್ತೀಚೆಗೆ ಹೇಳಿಕೆ ನೀಡಿದ್ದರು.

ಬಿಜೆಪಿ ಶಾಸಕಿಯ ಈ ಹೇಳಿಕೆ, ಎಸ್ಪಿ-ಬಿಎಸ್ಪಿ ಮೈತ್ರಿಯಿಂದ ಆ ಪಕ್ಷಕ್ಕೆ ಆಗಿರುವ ಹತಾಶೆಯನ್ನು ತೋರಿಸುತ್ತದೆ ಎಂದು ಬಿಎಸ್ಪಿ ಮುಖಂಡ ಸತೀಶ್ ಚಂದ್ರ ಮಿಶ್ರಾ ಹೇಳಿದ್ದಾರೆ. ಬಿಜೆಪಿ ಮುಖಂಡರು ಸೋಲಿನ ಭೀತಿಯಿಂದ ತಮ್ಮ ಮಾನಸಿಕ ಸಮತೋಲನ ಕಳೆದುಕೊಂಡಿದ್ದಾರೆ ಎಂದು ಛೇಡಿಸಿದ್ದಾರೆ.

ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್ ಕೂಡಾ ಈ ಹೇಳಿಕೆಯನ್ನು ಟೀಕಿಸಿದ್ದು, ಇದು ದೇಶದ ಮಹಿಳೆಯರಿಗೆ ಮಾಡಿದ ಅವಮಾನ ಎಂದು ಹೇಳಿದ್ದಾರೆ. ಇದು ಬಿಜೆಪಿಗರ ನೈತಿಕ ದಿವಾಳಿತನ ಮತ್ತು ನಿರಾಶಾಭಾವದ ಸಂಕೇತ ಎಂದು ಟೀಕಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News