ಮೊದಲು ಕಾಂಗ್ರೆಸ್ ಗೆ ಬೈಯುತ್ತಿದ್ದ ಸಿದ್ದರಾಮಯ್ಯ, ಈಗ ಅದರ ಗುಲಾಮ: ಜಗದೀಶ್ ಶೆಟ್ಟರ್

Update: 2019-01-20 15:35 GMT

ಹುಬ್ಬಳ್ಳಿ,ಜ.20: ಮೊದಲಿಗೆ ಕಾಂಗ್ರೆಸ್ ಪಕ್ಷದ ಬಗ್ಗೆ ಅಸಮಾಧಾನಗೊಂಡಿದ್ದ ಸಿದ್ದರಾಮಯ್ಯ ಈಗ ಕಾಂಗ್ರೆಸ್ ಪಕ್ಷದ ಗುಲಾಮನಾಗಿದ್ದಾರೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಿಡಿಕಾರಿದರು.

ನಗರದಲ್ಲಿಂದು ಖಾಸಗಿ ಹೊಟೇಲ್ ನಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಮತ್ತು ಜೆಡಿಎಸ್‌ನವರಲ್ಲಿ ಗೊಂದಲ, ಒಳಬೇಗುದಿ ದಿನದಿಂದ ದಿನಕ್ಕೆ ವೃದ್ಧಿಸುತ್ತಿದೆ. ಅಲ್ಲದೇ ಮೊದಲಿಗೆ ಕಾಂಗ್ರೆಸ್ ಪಕ್ಷಕ್ಕೆ ಬೈಯುತ್ತಿದ್ದ ಸಿದ್ದರಾಮಯ್ಯ ಪ್ರಸ್ತುತ ದಿನಗಳಲ್ಲಿ ಕಾಂಗ್ರೆಸ್ ಗುಲಾಮನಾಗಿದ್ದಾನೆ ಎಂದರು. ಲೋಕಸಭಾ ಚುನಾವಣೆ ಯಾವುದೇ ಸಂದರ್ಭದಲ್ಲಿ ಕೂಡ ಬರಬಹುದು. ಪಕ್ಷದ ಸಂಘಟನೆಯನ್ನು ಮತ್ತಷ್ಟು ಬಲಯುತ ಮಾಡುವ ಕುರಿತು ಚರ್ಚೆ ನಡೆಸುತ್ತಿದ್ದೇವೆ. ಪಕ್ಷ ಸಂಘಟನೆ ಕುರಿತು ದೆಹಲಿಯಲ್ಲಿ ರಾಷ್ಟ್ರೀಯ ಹಂತದಲ್ಲಿ ಚರ್ಚೆಯಾಯಿತು ಎಂದು ಅವರು ತಿಳಿಸಿದರು.

ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಬಿಜೆಪಿ ಶಾಸಕರನ್ನು ಸೆಳೆಯುತ್ತಿರುವುದಾಗಿ ಹೇಳಿದ್ದರು. ಸಿಎಂ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಬಿಜೆಪಿ ಶಾಸಕರು ಸಂಪರ್ಕದಲ್ಲಿದ್ದಾರೆಂದು ಹೇಳಿಕೆ ಕೊಟ್ಟಿದ್ದರು. ಹೀಗಾಗಿ ಬಿಜೆಪಿಯವರು ರೆಸಾರ್ಟ್‌‌ಗೆ ಹೋಗಬೇಕಾಯಿತು. ಆದರೆ ನಮ್ಮ ಶಾಸಕರ ನಡುವೆ ಮತ್ತಷ್ಟು ಒಗ್ಗಟ್ಟು ಮೂಡಿಸಲು ಹೋಗಿದ್ದಷ್ಟೆ ಎಂದರು. ನಾವು ರೆಸಾರ್ಟ್‌ಗೆ ಹೋಗಿದ್ದನ್ನು ಟೀಕಿಸಿದ್ದ ಸಿದ್ದರಾಮಯ್ಯನವರೇ ಈಗ ರೆಸಾರ್ಟ್ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಕಾಂಗ್ರೆಸ್ ಶಾಸಕರನ್ನು ಬಲವಂತವಾಗಿ ರೆಸಾರ್ಟ್‌ಗೆ ಕರೆದೊಯ್ದಿದ್ದಾರೆ. ಅಲ್ಲದೇ ಸಿದ್ದರಾಮಯ್ಯನವರು ಕೆ.ಎಸ್. ಈಶ್ವರಪ್ಪನವರ ವಿರುದ್ಧ ಕೀಳಾಗಿ ಮಾತಾಡಿದ್ದಾರೆ. ಅವರಿಗೆ ಚಾಮುಂಡೇಶ್ವರಿಯಲ್ಲಿ ಹೀನಾಯವಗಿ ಸೋತರೂ ಬುದ್ಧಿ ಬಂದಿಲ್ಲ. ಬಾದಾಮಿಯಲ್ಲಿ ಒಂದು ಸಾವಿರ ಮತಗಳಿಂದ ಗೆದ್ದು ಅಹಂಕಾರದಿಂದ ವರ್ತಿಸುತ್ತಿದ್ದಾರೆ. ಹೀಗೆ ಮುಂದುವರೆದರೆ ಇಡೀ ಕರ್ನಾಟಕದ ಜನರು ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಪಕ್ಷವನ್ನು ಮನೆಗೆ ಕಳಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಮತ್ತು ಜೆಡಿಎಸ್‌ನವರಲ್ಲಿ ಗೊಂದಲ, ಒಳಬೇಗುದಿಯಿಂದ ಅವರಲ್ಲೇ ಮಂತ್ರಿ ಸ್ಥಾನಕ್ಕಾಗಿ, ಅಧಿಕಾರಕ್ಕಾಗಿ ಜಗಳ ನಡೆಯುತ್ತಿದೆ. ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಬಿಜೆಪಿಯ ಮೇಲೆ ಸುಳ್ಳು ಹೊಣೆ ಹಾಕುತ್ತಿದ್ದಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News