ಕುವೆಂಪು ನುಡಿದಂತೆ ನಡೆದರು: ಸಿ.ಕೆ.ರಾಮೇಗೌಡ

Update: 2019-01-20 16:06 GMT

ಬೆಂಗಳೂರು, ಜ. 20: ರಾಷ್ಟ್ರ ಕವಿ ಕುವೆಂಪು ಅವರು ನುಡಿದಂತೆ ನಡೆದುದ್ದಲ್ಲದೇ, ತಾವು ಬರೆದಂತೇ ಬದುಕಿದರು ಎಂದು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಗೌರವ ಕಾರ್ಯದರ್ಶಿ ಸಿ.ಕೆ.ರಾಮೇಗೌಡ ಅಭಿಪ್ರಾಯಪಟ್ಟರು.

ರವಿವಾರ ನಗರದ ಕುವೆಂಪು ಕಲಾ ಕೇಂದ್ರ ಟ್ರಸ್ಟ್ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಹಮ್ಮಿಕೊಂಡಿದ್ದ ‘ಕುವೆಂಪು ಗೀತೋತ್ಸವ’ ಮತ್ತು ‘ಗಾಯಕ ಜಿ.ವಿ ಅತ್ರಿ-ಗೀತನಮನ’, ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಷ್ಟ್ರಕವಿ ಕುವೆಂಪು ಅವರ ಬದುಕು ಮತ್ತು ಬರಹ ಒಂದೇ ಆಗಿತ್ತು ಎಂದು ಹೇಳಿದರು.

ಈಗಿನ ಕೆಲವು ಸಾಹಿತಿಗಳ ಪ್ರಶಸ್ತಿಗಳಿಗಾಗಿ ರಾಜಕೀಯ ಮುಖಂಡರನ್ನು ಬೆನ್ನು ಬೀಳುತ್ತಾರೆ. ಆದರೆ, ಕುವೆಂಪು ಯಾವತ್ತೂ, ಪ್ರಶಸ್ತಿಗಳ ಬೆನ್ನಹತ್ತಿ ಹೋದವರಲ್ಲ. ಕರ್ನಾಟಕ ಏಕೀಕರಣಕ್ಕಾಗಿ ಕುವೆಂಪು ಅವರು ಪಟ್ಟು ಹಿಡಿದರು. ಸರಕಾರದ ಎಚ್ಚರಿಕೆಯನ್ನು ಕೂಡ ಧಿಕ್ಕರಿಸಿ ಬರಹಗಳ ಮೂಲಕ ಏಕೀಕರಣದ ಬಗ್ಗೆ ತಿಳಿ ಹೇಳಿದರು ಎಂದು ನುಡಿದರು.

ಕುವೆಂಪು ಅವರು ಮೈಸೂರು ವಿವಿಯಲ್ಲಿ ಅಧ್ಯಾಪಕರಾಗಿದ್ದಾಗ ಮೈಸೂರಿನ ರಾಜರು ಅರಮನೆಗೆ ಬಂದು ತಮ್ಮ ಮಕ್ಕಳಿಗೆ ಪಾಠ ಮಾಡುವಂತೆ ಮನವಿ ಮಾಡಿಕೊಂಡಿದ್ದರು. ಆದರೆ, ಕುವೆಂಪು ಅವರ ಈ ಮನವಿಯನ್ನು ಪ್ರೀತಿಯಿಂದ ನಿರಾಕರಿಸಿದರು. ಎಲ್ಲರಂತೆ ನಿಮ್ಮ ಮಕ್ಕಳು ಕಾಲೇಜಿನಲ್ಲೇ ಕುಳಿತು ಪಾಠ ಕಲಿಯಲಿ ಎಂದು ರಾಜರಿಗೆ ತಿಳಿಸಿದ್ದರು ಎಂದು ತಿಳಿಸಿದರು.

ಪೂರ್ಣಚಂದ್ರ ತೇಜಸ್ವಿ ಅವರು ಪ್ರೀತಿಸಿ ಮದುವೆಯಾಗಿದ್ದರು. ತಮ್ಮ ಮಗನ ಮದುವೆಗೆ ಯಾವುದೇ ರೀತಿಯಲ್ಲೂ ಅಡ್ಡಿಯಾಗದೇ, ಕುವೆಂಪು ಅವರೇ ಮಂತ್ರ ಮಾಂಗಲ್ಯ ಮಾಡಿಸಿ ಆಡಂಬರ ಮದುವೆಯ ಸಂಪ್ರದಾಯಕ್ಕೆ ಎಳ್ಳು ನೀರು ಬಿಟ್ಟರು ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧ್ಯಕ್ಷ ಪಿ.ಮಲ್ಲಿಕಾರ್ಜುನಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದು. ಇದೇ ವೇಳೆ ಮಕ್ಕಳು ಕುವೆಂಪು ಅವರ ಕವಿತೆಗಳನ್ನು ಹಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News