ಉಕ್ಕಿನ ಮೇಲುಸೇತುವೆ ಬೇಡ: ಮೆಟ್ರೊ, ಉಪನಗರ ರೈಲು ಯೋಜನೆಗೆ ಖರ್ಚು ಮಾಡಲು ಸಲಹೆ

Update: 2019-01-20 16:11 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜ.20: ಎಲಿವೇಟೆಡ್ ಕಾರಿಡಾರ್ ಹಾಗೂ ಉಕ್ಕಿನ ಮೇಲುಸೇತುವೆಗೆ ಖರ್ಚು ಮಾಡುವ ಹಣವನ್ನೇ ಮೆಟ್ರೊ ಹಾಗೂ ಉಪನಗರ ರೈಲು ಯೋಜನೆಗೆ ಖರ್ಚು ಮಾಡಬಹುದು ಎಂದು ಬೆಂಗಳೂರು ಉಳಿಸಿ ಸಮಿತಿ ಸಲಹೆ ನೀಡಿದೆ.

ಉಕ್ಕಿನ ಸೇತುವೆ ಹಾಗೂ ಎಲಿವೇಟೆಡ್ ಕಾರಿಡಾರ್ ಯೋಜನೆಗಳ ಕುರಿತು ಚರ್ಚಿಸಲು ಯುವಿಸಿಇ ಅಲುಮ್ನಿ ಅಸೋಸಿಯೇಶನ್ ಸಭಾಂಗಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಈ ಸಲಹೆ ಸಭೆಯ ಮುಂದಿಡಲಾಯಿತು. ನಗರದಲ್ಲಿ ಈಗಾಗಲೇ ಹಸಿರು ನಾಶವಾಗಿದೆ. ಪರಿಸರವನ್ನು ಇನ್ನಷ್ಟು ಹಾಳು ಮಾಡುವ ಬದಲು ಪರಿಸರ ಉಳಿಸುವ ಅಥವಾ ಪರಿಸರದ ಮೇಲೆ ಕಡಿಮೆ ಪರಿಣಾಮ ಬೀರುವ ಯೋಜನೆಗಳತ್ತ ಗಮನ ನೀಡಬೇಕು ಎಂದು ಸಮಿತಿ ಆಗ್ರಹಿಸಿತು.

ಉಕ್ಕಿನ ಮೇಲುಸೇತುವೆ ಹಾಗೂ ಎಲಿವೇಟೆಡ್ ಕಾರಿಡಾರ್ ಯೋಜನೆಗಳಿಗಿಂತ ಮೆಟ್ರೊ ಹಾಗೂ ಉಪನಗರ ರೈಲು ಯೋಜನೆ ಸೇರಿದಂತೆ ಸಮೂಹ ಸಾರಿಗೆಗೆ ಒತ್ತು ನೀಡಬೇಕು ಎಂದು ಇದೇ ವೇಳೆ ಒತ್ತಾಯಿಸಿದರು.

ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿ ಡಾ.ಟಿ.ವಿ.ರಾಮಚಂದ್ರ ಮಾತನಾಡಿ, ನಗರದಲ್ಲಿ 70 ರ ದಶಕದಲ್ಲಿ ಶೇ.63 ರಷ್ಟು ಹಸಿರು ಹಾಗೂ ಶೇ.7 ರಷ್ಟು ಕಟ್ಟಡವಿತ್ತು. 2017 ರ ವೇಳೆಗೆ ಹಸಿರಿನ ಪ್ರಮಾಣ ಶೇ.6.46 ಕ್ಕಿಳಿದರೆ, ಕಟ್ಟಡಗಳ ಪ್ರಮಾಣ ಶೇ.78.7 ಕ್ಕೇರಿದೆ. ಈ ರೀತಿಯಲ್ಲಿ ನಗರದ ಬೆಳೆದರೆ ಮುಂದಿನ ದಿನಗಳಲ್ಲಿ ಹಸಿರು ಎಂಬುದೇ ಇಲ್ಲದಂತಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಐಐಎಸ್‌ಸಿ ಸಾರಿಗೆ ವ್ಯವಸ್ಥೆ ಎಂಜಿನಿಯರಿಂಗ್‌ನ ಸಹಾಯಕ ಉಪನ್ಯಾಸಕ ಡಾ.ಆಶೀಶ್ ವರ್ಮಾ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನಲ್ಲಿ ವಾಹನಗಳ ಸಂಖ್ಯೆ ಅಧಿಕವಾಗುತ್ತಿದೆ. ಕಾರುಗಳು 2.5 ಕೋಟಿ ಚದರ ಮೀಟರ್ ರಸ್ತೆಯ ಜಾಗ, ದ್ವಿಚಕ್ರ ವಾಹನಗಳು 31.18 ಲಕ್ಷ ಚದರ ಮೀಟರ್ ರಸ್ತೆಯ ಜಾಗವನ್ನು ಆಕ್ರಮಿಸಿಕೊಂಡಿವೆ. ಬಸ್‌ಗಳು 1.87 ಲಕ್ಷ ಚದರ ಮೀಟರ್ ಜಾಗವನ್ನು ಆಕ್ರಮಿಸಿವೆ. ಸಮೂಹ ಸಾರಿಗೆಯಿಂದ ಸಂಚಾರ ದಟ್ಟಣೆ, ಮಾಲಿನ್ಯ ಮೊದಲಾದ ಸಮಸ್ಯೆಗಳನ್ನು ಕಡಿಮೆ ಮಾಡಬಹುದು ಎಂದು ಸಲಹೆ ನೀಡಿದರು.

ದುಂದು ವೆಚ್ಚ ಸಲ್ಲದು

ರಾಜ್ಯ ಸರಕಾರ ಅನಗತ್ಯವಾದ ದುಂದುವೆಚ್ಚ ಮಾಡಲು ಮುಂದಾಗಿದೆ. ಈ ಹಿಂದಿನ ಬಜೆಟ್‌ನಲ್ಲಿ ಶಿಕ್ಷಣಕ್ಕೆ 2,600 ಕೋಟಿ ರೂ., ವಸತಿಗೆ 3,900 ಕೋಟಿ ರೂ. ಮೀಸಲಿಡುವ ಮೂಲಕ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಆದರೆ, ಎಲಿವೇಟೆಡ್ ಹಾಗೂ ಉಕ್ಕಿನ ಸೇತುವೆ ಕಾಮಗಾರಿಗೆ ಅನುದಾನ ನೀಡುವ ಮೂಲಕ ದುಂದುವೆಚ್ಚ ಮಾಡಲು ಮುಂದಾಗಿರುವುದು ಸರಿಯಲ್ಲ.

- ಕಾತ್ಯಾಯಿನಿ ಚಾಮರಾಜ್, ಸಿವಿಕ್ ಸಂಸ್ಥೆಯ ಟ್ರಸ್ಟಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News