ಜಾತ್ಯಾತೀತ ನಿಲುವಿನ ಪಕ್ಷಗಳು ಒಟ್ಟಾದರೆ ಬಿಜೆಪಿ ಹಾರಿ ಹೋಗುವುದು ಖಚಿತ: ವೀರಪ್ಪ ಮೊಯ್ಲಿ

Update: 2019-01-20 16:57 GMT

ಬೆಂಗಳೂರು, ಜ.20: ಬಿಜೆಪಿಯವರು ಈಗಲಾದರೂ ಬುದ್ದಿ ಕಲಿತು ಸುಮ್ಮನಾಗದೇ ಹೋದರೆ ಆಪರೇಷನ್ ಕಮಲಕ್ಕೆ ಪ್ರತಿಯಾಗಿ ಬಿಜೆಪಿ ಶಾಸಕರನ್ನು ಕಳೆದುಕೊಳ್ಳುವ ಸಂದರ್ಭ ಬರಹುದು ಎಂದು ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ ಹೇಳಿದ್ದಾರೆ. 

ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಎಷ್ಟೇ ಪ್ರಯತ್ನಪ್ಟರೂ ಸಮ್ಮಿಶ್ರ ಸರಕಾರವನ್ನು ಅಸ್ಥಿತಗೊಳಿಸಲು ಸಾಧ್ಯವಿಲ್ಲ. ಸರಕಾರ ಸುಭದ್ರವಾಗಿದೆ. ಅವರು ಆಪರೇಷನ್ ಕಮಲ ಮುಂದುವರೆಸಿದರೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಅದನ್ನು ನೋಡಿಕೊಂಡು ಸುಮ್ಮನೆ ಕೂರುವುದಿಲ್ಲ ಪ್ರತಿತಂತ್ರ ಮಾಡಲೇಬೇಕಾಗುತ್ತದೆ ಎಂದು ಹೇಳಿದರು.

ಬಿಜೆಪಿಯವರು ಕಾಂಗ್ರೆಸ್ ಶಾಸಕರಿಗೆ ನಾನಾ ರೀತಿ ಆಮಿಷಗಳನ್ನು ಒಡ್ಡಿ ಪಕ್ಷಾಂತರ ಮಾಡಲು ಪ್ರಯತ್ನ ಮಾಡಿದಾಗ ನಮ್ಮ ಶಾಸಕರನ್ನು ನಾವು ರಕ್ಷಿಸಿಕೊಳ್ಳಲು ಒಂದೆಡೆ ಸೇರಿಕೊಳ್ಳಬೇಕಾಗಿದೆ. ಇದು ರೆಸಾರ್ಟ್ ರಾಜಕೀಯ ಅಲ್ಲ. ಬಿಜೆಪಿಯವರು ರೆಸಾರ್ಟ್ ರಾಜಕೀಯ ಮಾಡಿದರು. ನಮ್ಮ ಶಾಸಕರನ್ನು ನಾವು ರಕ್ಷಿಸಿಕೊಳ್ಳುವ ಸಲುವಾಗಿ ರೆಸಾರ್ಟ್‌ಗೆ ಹೋಗಿಲ್ಲ ಎಂದರು. ರಾಷ್ಟ್ರಮಟ್ಟದಲ್ಲಿ ಜಾತ್ಯಾತೀತ ನಿಲುವಿನ ಪಕ್ಷಗಳ ಒಟ್ಟಾದರೆ ಬಿಜೆಪಿ ಹಾರಿ ಹೋಗುವುದು ಖಚಿತ. ನಿನ್ನೆ ಕೋಲ್ಕತ್ತಾದಲ್ಲಿ ನಡೆದ ಸಮಾವೇಶ ರಾಷ್ಟ್ರರಾಜಕಾರಣದಲ್ಲಿ ಗಂಭೀರ ಪ್ರಭಾವ ಬೀರಿದೆ. ಎಲ್ಲ ಜಾತ್ಯಾತೀತ ಪಕ್ಷಗಳು ಒಂದುಗೂಡಿವೆ. ಕಾಂಗ್ರೆಸ್ ಕೂಡ ಅದನ್ನು ಬೆಂಬಲಿಸಿದೆ. ರಾಹುಲ್‌ಗಾಂಧಿ ಅವರು ಭಾಗವಹಿಸದೇ ಇದ್ದರೂ ಅವರ ಪ್ರತಿನಿಧಿಯಾಗಿ ಅಭಿಷೇಕ್ ಸಿಂಘ್ವಿ ಮತ್ತಿತರ ನಾಯಕರು ಭಾಗವಹಿಸಿದ್ದರು. ರಾಜಕೀಯವಾಗಿ ಬಿಜೆಪಿ ಹೊರತುಪಡಿಸಿ ಎಲ್ಲ ಪಕ್ಷಗಳು ಒಟ್ಟಾಗುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News