ಧರ್ಮ, ದೇವರ ಹೆಸರಿನಲ್ಲಿ ದೇಶದ ಏಕತೆ ಒಡೆಯುವ ಕೆಲಸ ಮಾಡಬಾರದು: ಹೆಚ್.ಡಿ ದೇವೇಗೌಡ

Update: 2019-01-20 17:16 GMT

ತುಮಕೂರು,ಜ.20: ಧರ್ಮ, ದೇವರ ಹೆಸರಿನಲ್ಲಿ ದೇಶದ ಏಕತೆ ಒಡೆಯುವ ಕೆಲಸವನ್ನು ಯಾರೂ ಮಾಡಬಾರದು ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ರಾಷ್ಟ್ರಾಧ್ಯಕ್ಷ ಹೆಚ್.ಡಿ ದೇವೇಗೌಡ ತಿಳಿಸಿದ್ದಾರೆ.

ತಾಲೂಕಿನ ಐನಾಪುರದ ನೂತನ ಶ್ರೀಮೋಕ್ಷ ಲಕ್ಷ್ಮಿರಂಗನಾಥಸ್ವಾಮಿ ಹಾಗೂ ಫಲಪ್ರಧ ಆಂಜನೇಯಸ್ವಾಮಿ ದೇವಾಲಯದ ಉದ್ಘಾಟನೆ, ರಾಜಗೋಪುರದ ಕಳಸಾಭಿಷೇಕ ನೆರವೇರಿಸಿ ಮಾತನಾಡುತ್ತಿದ್ದ ಅವರು, ಇನ್ನೊಬ್ಬರನ್ನು ಪ್ರೀತಿಸುವುದು, ಅವರ ಕಷ್ಟ-ಸುಖಃಗಳಿಗೆ ಸ್ಪಂದಿಸುವುದೇ ನಿಜವಾದ ಧರ್ಮ. ಆದರೆ ಅದಕ್ಕೆ ತದ್ವಿರುದ್ದವಾದ ಕ್ರಿಯೆಗಳು ನಡೆಯುತ್ತಿವೆ. ದೇಶದಲ್ಲಿ 35 ಕೋಟಿ ಮುಸ್ಲಿಂ,15 ಕೋಟಿ ಕ್ರಿಶ್ಚಿಯನ್ನರು ಇದ್ದು, ಹಿಂದೂ ರಾಷ್ಟ್ರದ ಹೆಸರಿನಲ್ಲಿ ಮತ್ತೊಮ್ಮೆ ದೇಶ ವಿಭಜನೆಗೆ ಅವಕಾಶ ಮಾಡಿಕೊಡಬೇಕೇ ಎಂದು ಅವರು ಪ್ರಶ್ನಿಸಿದರು.

ನಾನು ಭಾಗವಹಿಸಿರುವ ಈ ಸಮಾರಂಭ ಹಿಂದೂ ದೇವಾಲಯದ ಕಾರ್ಯಕ್ರಮ. ಮುಸ್ಲಿಮರು, ಕ್ರಿಶ್ಚಿಯನ್ನರು, ದಲಿತರು, ಹಿಂದುಳಿದವರು ಎಲ್ಲರೂ ವೇದಿಕೆಯಲ್ಲಿದ್ದಾರೆ. ತಾಳ್ಮೆ, ಸಹಿಷ್ಣತೆಯೇ ಹಿಂದೂಧರ್ಮದ ನಿಜವಾದ ಸಾರ. ಅದನ್ನು ಅರ್ಥ ಮಾಡಿಕೊಳ್ಳದೇ ಇತರೆ ಧರ್ಮ, ಜಾತಿಯ ಜನರನ್ನು ದ್ವೇಷದಿಂದ ಕಾಣುವುದು ಹಿಂದೂ ಧರ್ಮಕ್ಕೆ ಸಲ್ಲದು. ಇದನ್ನು ಅಧಿಕಾರದಲ್ಲಿರುವವರು ಅರ್ಥ ಮಾಡಿಕೊಳ್ಳಬೇಕು. 13ನೇ ವರ್ಷದ ವಯಸ್ಸಿನವಾಗಿದ್ದಾಗಿನಿಂದಲೂ ದೇವಾಲಯಗಳಿಗೆ ಹೋಗುತ್ತಿದ್ದೇನೆ. ನಾನು ಎಂದೂ ಹಿಂದೂ ಧರ್ಮವನ್ನು ವಿರೋಧಿಸಿಲ್ಲ. ಬದಲಾಗಿ ಹಿಂದೂ ಧರ್ಮದಲ್ಲಿನ ಗಣೇಶ ಹಾಲು ಕುಡಿದ, ದೇವರು ಮೈಮೇಲೆ ಬಂತು ಎಂಬ ಇಂತಹ ಮೌಢ್ಯವನ್ನು ವಿರೋಧಿಸುತ್ತೇನೆ. ಇದನ್ನು ಸರಿಯಾಗಿ ಅರ್ಥೈಸದ ಕೆಲವರು ನಾನು ಹಿಂದೂ ಧರ್ಮದ ವಿರೋಧಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಟ್ಟಿದ್ದಾರೆ. ಇಂತಹ ಕೆಲಸಗಳಿಗೆ ನಾನು ಎಂದಿಗೂ ಬೆಲೆ ನೀಡುವುದಿಲ್ಲ ಎಂದು ಹೆಚ್.ಡಿ.ದೇವೇಗೌಡರು ಸ್ಪಷ್ಟಪಡಿಸಿದರು.

ಮೋಕ್ಷಗಿರಿ ಶ್ರೀಲಕ್ಷ್ಮಿ ರಂಗನಾಥಸ್ವಾಮಿ ಮತ್ತು ಅಂಜನೇಯ ದೇವಾಲಯಗಳು ಇಂದು ಪ್ರತಿಷ್ಠಾಪನೆಗೊಂಡಿವೆ. ಮುಂದೊಂದು ದಿನ ಈ ಕ್ಷೇತ್ರ ಪ್ರಸಿದ್ದ ಧಾರ್ಮಿಕ ಕ್ಷೇತ್ರವಾಗಿ ಬೆಳವಣಿಗೆ ಹೊಂದುವುದರಲ್ಲಿ ಆಶ್ಚರ್ಯವಿಲ್ಲ. ನನಗೂ ಈ ದೇವಾಲಯದ ಜೀಣೋದ್ಧಾರ ಸಮಿತಿ ಅಧ್ಯಕ್ಷರಾದ ಡಾ.ಜಯಪ್ರಕಾಶ್ ನಾರಾಯಣ್ ಅವರಿಗೆ 25 ವರ್ಷದ ಸ್ನೇಹ. ನನ್ನನ್ನು ಆರೋಗ್ಯ ನೋಡಿಕೊಳ್ಳುತ್ತಿರುವ ವೈದ್ಯರು ಇವರೇ. ಅವರು ತಮ್ಮ ಗ್ರಾಮದಲ್ಲಿ ದೇವಾಲಯವನ್ನು ಕಟ್ಟಿಸಿ, ಒಳ್ಳೆಯ ಕಾರ್ಯ ಮಾಡಿದ್ದಾರೆ. ದೇವಾಲಯದ ಜೊತೆಗೆ ಕಲ್ಯಾಣ ಮಂಟಪ ಮತ್ತಿತರರ ಕಾರ್ಯ ಯೋಜನೆ ಇದೆ. ಅದಕ್ಕೆ ನಮ್ಮ ಕೈಯಲ್ಲಾದ ಸಹಕಾರವನ್ನು ನೀಡಲು ಸಿದ್ಧ ಎಂದು ದೇವೇಗೌಡರು ಭರವಸೆ ನೀಡಿದರು.

ಈ ದೇಹವನ್ನು ದೇವರು ಕೊಟ್ಟಿದ್ದು, ಅವನ ಇಚ್ಚೆ ಇರುವವರೆಗೆ ಮಾತ್ರ ಭೂಮಿಯ ಮೇಲೆ ಬದುಕಲು ಸಾಧ್ಯ. ನಮ್ಮ ಪಕ್ಷದ ಹಿರಿಯ ಧುರೀಣ ಚನ್ನಿಗಪ್ಪ ಖಾಯಿಲೆಯಿಂದ ಅಸ್ಪತ್ರೆಯಲ್ಲಿ ಮಲಗಿದ್ದಾರೆ. ಅವರ ಬಗ್ಗೆಯೂ ದೇವರಲ್ಲಿ ಬೇಡಿಕೊಂಡಿದ್ದೇನೆ. ತುಮಕೂರು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ತಂದೆಯ ಹೆಸರನ್ನು ಉಳಿಸುತ್ತಾನೆ ಎಂಬ ನಂಬಿಕೆ ನಮಗಿದೆ ಎಂದರು.

ಸಂಸದ ಎಸ್.ಪಿ.ಮುದ್ದಹನುಮೇಗೌಡ ಮಾತನಾಡಿ, ಇಂದೊಂದು ಧಾರ್ಮಿಕ ಕಾರ್ಯಕ್ರಮ. ಶನಿವಾರ ಕೊಲ್ಕತ್ತಾದಲ್ಲಿದ್ದ ದೇವೇಗೌಡರು ಭಾನುವಾರ ಬೆಳಗ್ಗೆ ನಡೆಯುವ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರಾ ಎಂಬ ಅನುಮಾನ ನಮ್ಮನ್ನು ಕಾಡಿತ್ತು. ಆದರೆ ದೇವರ ಅನುಗ್ರಹ ದೇವೇಗೌಡರು ಕಾರ್ಯಕ್ರಮದಲ್ಲಿ ಭಾಗಿಯಾಗಿದಲ್ಲದೆ, ಸುಮಾರು 100ಕ್ಕೂ ಹೆಚ್ಚು ಮೆಟ್ಟಿಲು ಹತ್ತಿ, ಕುಂಭಾಭೀಷೇಕ ಮಾಡಿದರು. ಅವರ ಉತ್ಸಾಹ ನಿಜಕ್ಕೂ ನಮಗೆ ಸ್ಪೂರ್ತಿ. ಇಂತಹವರ ನಾಯಕತ್ವದ ಅವಶ್ಯಕತೆ ನಮ್ಮ ದೇಶಕ್ಕೆ ಇದೆ. ರಾಜ್ಯದಲ್ಲಿರುವ ಸಮ್ಮಿಶ್ರ ಸರಕಾರ ದಲಿತ, ಹಿಂದುಳಿದ ವರ್ಗದವರು, ಬಡವರ ಬಗ್ಗೆ ಅಪಾರ ಕಾಳಜಿ ಇರುವ ಹೆಚ್ಡಿಕೆ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಸರಕಾರ ಹೀಗೆಯೇ ವಿಘ್ನ ರಹಿತವಾಗಿ ನಡೆಯಲಿ ಎಂಬುದು ಭಗವಂತನಲ್ಲಿ ನಮ್ಮ ಕೋರಿಕೆ. ಹಾಗೆಯೇ ಡಾ.ಜಯಪ್ರಕಾಶ್ ನಾರಾಯಣ ಅವರು, ಚಿಕಿತ್ಸೆಯನ್ನು ಹೀಗೆಯೇ ಮುಂದುವರೆಸಿ, ದೇವೇಗೌಡರು ಇನ್ನೂ ಹತ್ತಾರು ವರ್ಷ ಕ್ರಿಯಾಶೀಲರಾಗುವಂತೆ ನೋಡಿಕೊಳ್ಳಲಿ ಎಂದರು.

ತುಮಕೂರು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ಮಾತನಾಡಿ, ದೈವಶಕ್ತಿ, ಒಗ್ಗಟ್ಟು ಇದ್ದರೆ ಎಂತಹ ಸಾಧನೆಯನ್ನು ಮಾಡಬಹುದು ಎಂಬುದಕ್ಕೆ ಇಂದು ಐನಾಪುರದಲ್ಲಿ ನಿರ್ಮಾಣಗೊಂಡಿರುವ ಮೋಕ್ಷಗಿರಿ ಲಕ್ಷ್ಮಿರಂಗನಾಥ ದೇವಾಲಯವೇ ಸಾಕ್ಷಿ. ಇಲ್ಲಿಗೆ ಬೇಕಾದ ಮೂಲಭೂತ ಸೌಕರ್ಯ ಕಲ್ಪಿಸಿಕೊಡಲು ನಾನು ಸಿದ್ದನಿದ್ದೇನೆ. ಕೋರಿಕೆಯಂತೆ ಶುದ್ದ ಕುಡಿಯುವ ನೀರಿನ ಘಟಕ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಲಾಗಿದೆ. ಉಳಿದ ಕಾರ್ಯಗಳಿಗೂ ಸಹಕಾರ ನೀಡಲಿದ್ದೇನೆ. ಇಂದು ಕೆಲ ಮಾಧ್ಯಮಗಳು ಸರಕಾರದ ಬಗ್ಗೆ ಇಲ್ಲಸಲ್ಲದ ಹೇಳಿಕೆಗಳನ್ನು ಬಿತ್ತರಿಸುತ್ತಿವೆ. ಆದರೆ ಜೆಡಿಎಸ್‍ನಲ್ಲಿ 37 ಶಾಸಕರು, 37 ವಜ್ರಗಳಂತೆ, ಅವರನ್ನು ಯಾರು ಅಲ್ಲಾಡಿಸಲು ಸಾಧ್ಯವಿಲ್ಲ. ಸಾಲಮನ್ನಾ, ಬಡವರ ಬಂಧು ಅಂತಹ ಕಾರ್ಯಕ್ರಮ ನೀಡಿರುವ ಕುಮಾರಸ್ವಾಮಿ ಅವರ ಸರಕಾರ ಉಳಿಯಬೇಕು. ಕಳೆದ 7 ತಿಂಗಳಲ್ಲಿ ಸಮ್ಮಿಶ್ರ ಸರಕಾರ ಕೈಗೊಂಡಿರುವ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸಿ ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.

ವೇದಿಕೆಯಲ್ಲಿ ದೇವಾಲಯ ಜೀಣೋದ್ದಾರ ಸಮಿತಿ ಅಧ್ಯಕ್ಷ ಡಾ.ಜಯಪ್ರಕಾಶ ನಾರಾಯಣ್, ಮುಖಂಡರಾದ ಹಿರೇಹಳ್ಳಿ ಮಹೇಶ್, ಅಲೆನೂರು ಅನಂತು, ಪಾಲನೇತ್ರಯ್ಯ, ವೈ.ಟಿ.ನಾಗರಾಜು, ಮಹಮದ್ ಅಜಂ, ಇಕ್ಬಾಲ್ ಅಹಮದ್, ರೇಣುಕಮ್ಮ, ಗೌರಮ್ಮ, ಪಾಲಿಕೆ ಸದಸ್ಯರಾದ ಮಂಜುನಾಥ್, ಕುಮಾರ್, ಜೆಡಿಎಸ್ ಮುಖಂಡ ಬೆಳಗುಂಬ ವೆಂಕಟೇಶ್, ಸುವರ್ಣಗಿರಿ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News