ರೈತರು ಕೇವಲ ಲಾಭಕ್ಕೆ ಆಸೆಪಟ್ಟರೆ ಜನರು ಹಸಿವಿನಿಂದ ಸಾಯುವ ಪರಿಸ್ಥಿತಿ ಉದ್ಭವಿಸುತ್ತದೆ: ಬಾ.ಹ.ರಮಾಕುಮಾರಿ

Update: 2019-01-20 17:26 GMT

ತುಮಕೂರು,ಜ.20: ಎಲ್ಲರೂ ಲಾಭ ನಷ್ಟದ ಲೆಕ್ಕಾಚಾರ ಮಾಡುವ ಹೊತ್ತಿನಲ್ಲಿ ರೈತರು ಲಾಭ ಬರುವುದನ್ನಷ್ಟೇ ಲೆಕ್ಕಾಚಾರ ಹಾಕಿದರೆ, ಜನರು ಹಸಿವಿನಿಂದ ಸಾಯುವಂತಹ ಪರಿಸ್ಥಿತಿ ಉದ್ಭವವಾಗುತ್ತದೆ ಎಂದು ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಆಧ್ಯಕ್ಷ ಬಾ.ಹ.ರಮಾಕುಮಾರಿ ಆತಂಕ ವ್ಯಕ್ತಪಡಿಸಿದ್ದಾರೆ.

ತುಮಕೂರು ನಗರದ ಅಮಾನಿಕೆರೆ ಪಾರ್ಕ್ ಬಳಿ ಇರುವ ಕನ್ನಡ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ ಕನ್ನಡವೇ ನಮ್ಮಮ್ಮ 101 ಗಾಯಕರಿಂದ ಕನ್ನಡ ಭುವನೇಶ್ವರಿಗೆ 101 ನಾಡು ನುಡಿಯು ಗೀತ ನಮನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರೈತರು ಮಳೆ ಬರಲಿ, ಬಾರದೇ ಇರಲಿ ಬೀಜ ತಂದು ಬಿತ್ತುತ್ತಾರೆ. ಮಳೆ ಬಾರದಿದ್ದರೆ ಇಡೀ ಬಿತ್ತನೆಯೇ ಕಮರಿ ಹೋಗುತ್ತದೆ. ಕುವೆಂಪು ಅವರ ರೈತ ಗೀತೆಯ ಹಿನ್ನೆಲೆಯಲ್ಲಿ ನೋಡಿದರೆ ರೈತರ ಬದುಕು ದುಸ್ಥರವಾಗಿದೆ. ಪಾವಗಡದಂತಹ ಪ್ರದೇಶದಲ್ಲಿ ಕಡಲೆಕಾಯಿ ಬೆಳೆ ಇಲ್ಲದೆ ರೈತರು ಆತ್ಮಹತ್ಯೆ ಮಾಡಿಕೊಳ್ಳುವಂತಹ ಸ್ಥಿತಿಗೆ ಬಂದಿದ್ದಾರೆ. ಹೀಗಾಗಿ ರೈತರಿಗೆ ನೀರು ಮತ್ತು ವಿದ್ಯುತ್ ಒದಗಿಸಿ ವೈಜ್ಞಾನಿಕ ಬೆಲೆ ನೀಡಿದರೆ ಆತನ ಬದುಕು ಹಸನಾಗುತ್ತದೆ ಎಂದು ಹೇಳಿದರು.

ರೈತರು ಬೆಳೆಯುವ ಸೊಪ್ಪು, ತರಕಾರಿಯನ್ನು ನಾವೆಲ್ಲರೂ ಚೌಕಾಸಿ ಮಾಡಿ ಖರೀದಿ ಮಾಡುತ್ತೇವೆ. ಇದರಿಂದ ತಿಂಗಳುಗಟ್ಟಲೆ ಬೆಳೆಯುವ ರೈತರಿಗೆ ಏನೂ ಸಿಗುವುದಿಲ್ಲ. ಅವರು ಬೆಳೆಯುವ ಬೆಳೆ ಸೂಕ್ತ ಬೆಲೆ ಕೊಟ್ಟು ಖರೀದಿ ಮಾಡುವುದರಿಂದ ರೈತರು ನೆಮ್ಮದಿಯಿಂದ ಬದುಕು ನಡೆಸುತ್ತಾರೆ. ಘನತೆಯಿಂದ ಗೌರವದಿಂದ ಸಮಾಜದಲ್ಲಿ ಬದುಕಲು ಅವಕಾಶ ಮಾಡಿ ಕೊಡಬೇಕು. ಇದು ನಮ್ಮ ನಾಡಿನ ಪ್ರಶ್ನೆಯೂ ಆಗಿದೆ ಎಂದು ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್ ಗೆ 104 ವರ್ಷಗಳ ಇತಿಹಾಸವಿದೆ. ಇದು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿ ಕೆಲಸ ಮಾಡಿಕೊಂಡು ಬರುತ್ತಿದೆ. ಕಲೆ ಸಾಹಿತ್ಯ, ಸಂಸ್ಕೃತಿಯನ್ನು ಎತ್ತಿ ಹಿಡಿಯುವಂತಹ, ಅದನ್ನು ಮುಂದಿನ ಪೀಳಿಗೆಗೆ ಮುಟ್ಟಿಸುವಂತಹ ಮಹತ್ವದ ಕಾರ್ಯವನ್ನು ಮಾಡುತ್ತಾ ಬರುತ್ತಿದೆ. ಹಲವು ಕಾರ್ಯಕ್ರಮಗಳನ್ನು ಹಾಕಿಕೊಂಡು ನಿರಂತರವಾಗಿ ಜನರಿಗೆ ಜ್ಞಾನವನ್ನು ಹೆಚ್ಚಿಸುವ ಕೆಲಸ ಮಾಡುತ್ತಿದ್ದೇವೆ. ತುಮಕೂರು ಜಿಲ್ಲೆ ಗುಬ್ಬಿವೀರಣ್ಣನವರ ತವರು. ಇಲ್ಲಿ ಕನ್ನಡ ಕಟ್ಟುವಂತಹ ಕೆಲಸ ನಿರಂತರವಾಗಿ ನಡೆದುಕೊಂಡು ಬಂದಿದೆ. ಗುಬ್ಬಿ ವೀರಣ್ಣನವರಿಂದಾಗಿ ಪ್ರಪಂಚದಲ್ಲಿ ತುಮಕೂರು ಹೆಸರು ಮಾಡಿದೆ. ಹಲವು ನಾಟಕಗಳ ಮೂಲಕ ಕನ್ನಡ ಕಟ್ಟುವ ಕೆಲಸ ಮಾಡಿಕೊಂಡು ಬಂದಿದ್ದು ಅದನ್ನು ಇಂದಿಗೂ ಮುಂದುವರಿಸಿ ಕೊಂಡು ಹೋಗುತ್ತಿದ್ದೇವೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದಲ್ಲಿ ಗ್ರಂಥಾಲಯವನ್ನು ತೆರೆಯಲಾಗಿದೆ. ಇಲ್ಲಿ ಸದಸ್ಯತ್ವ ಪಡೆದು ಪುಸ್ತಕಗಳನ್ನು ಮನೆಗೆ ಕೊಂಡುಹೋಗಿ ಓದಲು ಅವಕಾಶ ಕಲ್ಪಿಸಲಾಗಿದೆ. ಇದರ ಸದುಪಯೋಗ ಪಡೆದುಕೊಂಡು ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು. ಅಷ್ಟೇ ಅಲ್ಲದೆ ನಮ್ಮ ಜಿಲ್ಲೆಯ ಎಲ್ಲಾ ಲೇಖಕರ ಕೃತಿಗಳು ಗ್ರಂಥಾಲಯದಲ್ಲಿ ಲಭಿಸುವಂತೆ ವ್ಯವಸ್ಥೆ ಮಾಡಲಾಗುವುದು. ನಮ್ಮ ಜಿಲ್ಲೆಯ ಲೇಖಕರು ಮತ್ತು ಸಾಹಿತಿಗಳ ಪರಿಚಯವು ಎಲ್ಲರಿಗೂ ಆಗಬೇಕು ಎಂಬುದು ನಮ್ಮ ಉದ್ದೇಶವಾಗಿದೆ ಎಂದರು.

ಇಂದು 101 ಗಾಯಕರು ಹಾಡಿರುವ ಕನ್ನಡ ಗೀತೆಗಳನ್ನು ಪುಸ್ತಕ ರೂಪದಲ್ಲಿ ಹೊರತರುತ್ತೇವೆ. ಹಾಡಿದವರ ಹೆಸರನ್ನು ಪುಸ್ತಕ ದಲ್ಲಿ ಮುದ್ರಿಸಲಾಗುವುದು. ಜೊತೆಗೆ ಇಂದಿನ ಎಲ್ಲಾ 101 ಕನ್ನಡ ಗೀತೆಗಳನ್ನು ವಿಡಿಯೋ ರೆಕಾರ್ಡಿಂಗ್ ಮಾಡಿ ಯೂಟ್ಯೂಬ್ ಗೆ ಹಾಕಲಾಗುವುದು. ಈ ಹಾಡುಗಳನ್ನು ಜಗತ್ತಿನ ಯಾವುದೇ ಭಾಗದಲ್ಲಿ ಕುಳಿತು ಬೇಕಾದರೂ ಕೇಳಬಹುದಾಗಿದೆ. ಹಾಡುಗಳನ್ನು ಚೆನ್ನಾಗಿ ಹಾಡಿದರೆ ಭವಿಷ್ಯದಲ್ಲಿ ಹಾಡುಗಾರರಿಗೂ ಅವಕಾಶಗಳು ಲಭ್ಯವಾಗುತ್ತವೆ. ಇದೊಂದು ಮಹತ್ವದ ಕಾರ್ಯವಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಖ್ಯಾತ ಹಿಂದೂಸ್ಥಾನಿ ಗಾಯಕ ಚಿದಾನಂದ ದೇವರಮನಿ ಮಾತನಾಡಿ, ಕನ್ನಡ ಮಾತನಾಡುವಾಗ ಒಂದು ವಾಕ್ಯದಲ್ಲಿ ಹಲವು ಇಂಗ್ಲೀಷ್ ಪದಗಳು ಇರುವುದು ಕಂಡು ಬರುತ್ತದೆ. ಇದು ಬಿಡಬೇಕು. ಸಂಗೀತ ಕನ್ನಡ ಸಂಸ್ಕೃತಿ ಉಳಿಸಲು ಮುಂದಾಗಬೇಕು ಎಂದು ಕರೆ ನೀಡಿದರು.

ಕನ್ನಡ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಕೆ.ರವಿಕುಮಾರ್, ಸಂಚಾಲಕ ಆರ್.ಬಸವರಾಜಪ್ಪ ಮತ್ತಿತರರು ವೇದಿಕೆಯಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News