ಗೋಡೆ ನಿರ್ಮಾಣಕ್ಕೆ ಅನುದಾನ ನೀಡಿದರೆ ಅಕ್ರಮ ವಲಸಿಗರ ಗಡಿಪಾರಿಗೆ 3 ವರ್ಷ ತಡೆ

Update: 2019-01-20 17:31 GMT

ವಾಶಿಂಗ್ಟನ್,ಜ.3: ಮೆಕ್ಸಿಕೊ ಗೋಡೆ ನಿರ್ಮಾಣಕ್ಕೆ 5.7 ಶತಕೋಟಿ ಡಾಲರ್ ಅನುದಾನ ನೆರವಿಗೆ ಅನುಮೋದನೆ ನೀಡಿದಲ್ಲಿ, ಅದಕ್ಕೆ ಬದಲಾಗಿ ಮೂರು ವರ್ಷಗಳ ಕಾಲ ಅಕ್ರಮ ವಲಸಿಗರಿಗೆ ಗಡಿಪಾರು ಆದೇಶದಿಂದ ರಕ್ಷಣೆ ನೀಡುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪ್ರತಿಪಕ್ಷ ಡೆಮಾಕ್ರಾಟರಿಗೆ ಶನಿವಾರ ಕೊಡುಗೆ ನೀಡಿದ್ದಾರೆ. ಆದರೆ ಟ್ರಂಪ್ ಅವರ ಈ ಪ್ರಸ್ತಾಪವನ್ನು ಡೆಮಾಕ್ರಾಟರು ತಕ್ಷಣವೇ ತಿರಸ್ಕರಿಸಿದ್ದಾರೆ.

29 ದಿನಗಳಿಂದ ಸರಕಾರಿ ಆಡಳಿತದ ಭಾಗಶಃ ಮುಚ್ಚುಗಡೆಯನ್ನು ಕೊನೆಗೊಳಿಸುವ ಉದ್ದೇಶದಿಂದ ಟ್ರಂಪ್ ಈ ಯೋಜನೆಯನ್ನು ಶನಿವಾರ ಶ್ವೇತಭವನದಲ್ಲಿ ಪ್ರಕಟಿಸಿದ್ದರು. ಆದರೆ ಎಲ್ಲಾ ಸರಕಾರಿ ಕಚೇರಿಗಳು ಮರಳಿ ಕಾರ್ಯಾರಂಭಿಸುವವರೆಗೆ ತಾವು ವಲಸಿಗರಿಗೆ ಸಂಬಂಧಿಸಿದ ಮಾತುಕತೆಗಳಲ್ಲಿ ಪಾಲ್ಗೊಳ್ಳುವುದಿಲ್ಲವೆಂದು ಡೆಮಾಕ್ರಾಟರು ಪಟ್ಟುಹಿಡಿದಿದ್ದಾರೆ.

ಅಮೆರಿಕವು ಅಪಾರ ಸಂಖ್ಯೆಯಲ್ಲಿ ವಲಸಿಗರನ್ನು ಸ್ವೀಕರಿಸುವ ಮೂಲಕ ಚರಿತ್ರೆಯನ್ನು ನಿರ್ಮಿಸಿದೆ. ಆದರೆ ಇದೀಗ ಈ ಅಕ್ರಮ ವಲಸೆಯು ಅಮೆರಿಕಕ್ಕೆ ಅಘಾತಕಾರಿ ಪರಿಸ್ಥಿತಿಯನ್ನು ತಂದೊಡ್ಡಿರುವುದಾಗಿ ಟ್ರಂಪ್ ಹೇಳಿದ್ದಾರೆ. ಮೆಕ್ಸಿಕೊ ಗಡಿಯುದ್ದಕ್ಕೂ ಕೇವಲ ಗೋಡೆ ಕಟ್ಟಿದರೆ ಸಾಕಾಗದು, ಬಲಿಷ್ಠವಾದ ಭದ್ರತಾ ವ್ಯವಸ್ಥೆಯ ಅಗತ್ಯವೂ ಇದೆ. ಶಕ್ತಿಯುತವಾದ ಉಕ್ಕಿನ ಗೋಡೆಯ ನಿರ್ಮಾಣಕ್ಕಾಗಿ 5.7 ಶತಕೋಟಿ ಡಾಲರ್ ಅನುದಾನಕ್ಕಾಗಿ ಅನುಮೋದನೆ ನೀಡಬೇಕೆಂದು ಟ್ರಂಪ್ ಆಡಳಿತ ಡೆಮಾಕ್ರಾಟರನ್ನು ಆಗ್ರಹಿಸಿದೆ.

ಅಮೆರಿಕದಲ್ಲಿ ಏಳು ಲಕ್ಷಕ್ಕೂ ಅಧಿಕ ಮಂದಿ ಅನಧಿಕೃತ ವಲಸಿಗರಿದ್ದಾರೆ. ಮೆಕ್ಸಿಕೋ ಗೋಡೆ ನಿರ್ಮಾಣಕ್ಕೆ 5.7 ಶತಕೋಟಿ ಡಾಲರ್ ಅನುದಾನಕ್ಕೆ ಅನುಮೋದನೆ ನೀಡಿದಲ್ಲಿ ಅವರಿಗೆ ಪೌರತ್ವವಿಲ್ಲದಿದ್ದರೂ ಅಮೆರಿಕದಲ್ಲಿ ಉದ್ಯೋಗ ನಿರ್ವಹಿಸಲು ಮೂರು ವರ್ಷಗಳವರೆಗೆ ಅವಕಾಶ ನೀಡಲಾಗುವುದು ಎಂಬ ನೂತನ ಕೊಡುಗೆಯನ್ನು ಟ್ರಂಪ್ ನೀಡಿದ್ದಾರೆ.

ಯುದ್ಧಗ್ರಸ್ತ ದೇಶಗಳಿಂದ ಆಗಮಿಸಿರುವ ಮೂರು ಲಕ್ಷಕ್ಕೂ ಅಧಿಕ ಅಕ್ರಮ ವಲಸಿಗರಿಗೆ ಮೂರು ವರ್ಷಗಳ ವರೆಗೆ ಅಮೆರಿಕ ವೀಸಾ ನೀಡಲಾಗುವುದು ಎಂಬ ಆಶ್ವಾಸನೆಯನ್ನು ಟ್ರಂಪ್ ನೀಡಿದ್ದಾರೆ. ಶ್ವೇತಭವನದಲ್ಲಿ ಶನಿವಾರ ನಡೆದ 15 ನಿಮಿಷಗಳ ಕಾಲ ನೀಡಿದ ಹೇಳಿಕೆಯೊಂದರಲ್ಲಿ ಅವರು ಈ ಕೊಡುಗೆಯನ್ನು ಘೋಷಿಸಿದಾದರೆ. ಇದೇ ವೇಳೆ ಟ್ರಂಪ್ ಅವರು ಹಿಂದೆ ನೀಡಿದ್ದ ವಾಗ್ದಾನವನ್ನೇ ಪುನರುಚ್ಚರಿಸಿದ್ದಾರೆ , ಅದನ್ನು ತಾವು ಒಪ್ಪುವುದಿಲ್ಲವೆಂದು ಡೆಮಾಕ್ರಾಟ್ ನಾಯಕಿ, ಅಮೆರಿಕ ಪ್ರತಿನಿಧಿ ಸಭಾದ ಸ್ಪೀಕರ್ ನ್ಯಾನ್ಸಿ ಪೆಲೋಸಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News