ನ್ಯಾಯಾಲಯದ ಸೌಕರ್ಯಗಳು ಸಾರ್ವಜನಿಕರಿಗೆ ಉಪಯೋಗವಾಗಲಿ: ನ್ಯಾ.ಮೋಹನ್‌ ಶಾಂತನಗೌಡರ್

Update: 2019-01-20 17:34 GMT

ಧಾರವಾಡ, ಜ.19: ನ್ಯಾಯಾಂಗ ಇಲಾಖೆಯು ಆಧುನಿಕ ಹಾಗೂ ತಾಂತ್ರಿಕ ಸೌಲಭ್ಯಗಳೊಂದಿಗೆ ಜಿಲ್ಲಾ ನ್ಯಾಯಾಲಯ ಸಂಕೀರ್ಣವನ್ನು ಮಾದರಿ ನ್ಯಾಯಾಲಯ ವನ್ನಾಗಿ ರೂಪಿಸಿದೆ. ಇದು ಸಾರ್ವಜನಿಕರಿಗೆ ಉಪಯೋಗವಾಗಲಿ ಮತ್ತು ನ್ಯಾಯ ಕೇಳಿ ಬರುವವರಿಗೆ ತ್ವರಿತ ನ್ಯಾಯ ಸಿಗಲಿ ಎಂದು ಸುಪ್ರೀಂಕೋರ್ಟ್‌ನ ಹಿರಿಯ ನ್ಯಾಯಮೂರ್ತಿ ಮೋಹನ್ ಶಾಂತನಗೌಡರ್ ಹೇಳಿದರು.

ನಗರದ ಕಲಾಭವನದಲ್ಲಿ ಧಾರವಾಡ ಜಿಲ್ಲಾ ನ್ಯಾಯಾಲಯ ಸಂಕೀರ್ಣದ 1 ಮತ್ತು 2ನೇ ಮಹಡಿಯ ಉದ್ಘಾಟನೆ ನೇರವೇರಿಸಿ ಮಾತನಾಡಿದ ಅವರು, ನ್ಯಾಯವಾದಿಗಳು ಸುಳ್ಳು ಹೇಳದೆ, ಅಲಂಕಾರಿಕವಾಗಿ ವರ್ಣಿಸಿ, ಸಾಂದರ್ಭಿಕವಾಗಿ ಪರಿಸ್ಥಿತಿಗೆ ತಕ್ಕಂತೆ ವಾದ ಮಂಡಿಸಬೇಕು ಎಂದರು.

ಕೌಟುಂಬಿಕ ವ್ಯಾಜ್ಯಗಳಿಗೆ ಮದ್ಯಸ್ಥಗಾರಿಕೆ (ಮಿಡಿಯೇಶನ್) ಬಹುಮುಖ್ಯ. ಇದನ್ನು ಸಮರ್ಪಕವಾಗಿ ಬಳಸಿಕೊಂಡು ಜನರಿಗೆ ತ್ವರಿತ ನ್ಯಾಯ ಸಿಗುವಂತೆ ಮಾಡಬೇಕು. ಎಲ್ಲರಲ್ಲೂ ಮೊದಲು ನೈತಿಕತೆ, ನಂತರ ಕಾನೂನು ಆಗಬೇಕು. ಅಂದಾಗ ಮಾತ್ರ ನ್ಯಾಯ ತೀರ್ಪಿಗೆ ಸಾರ್ಥಕತೆ ಉಂಟಾಗುತ್ತದೆ ಎಂದು ಅವರು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹೈಕೋರ್ಟ್ ಪ್ರಭಾರ ಮುಖ್ಯ ನ್ಯಾಯಮೂರ್ತಿ ಎಲ್. ನಾರಾಯಣಸ್ವಾಮಿ ಮಾತನಾಡಿ, ಧಾರವಾಡ ಜಿಲ್ಲೆಗೆ ಎರಡು ಉತ್ತಮ ಕಟ್ಟಡಗಳನ್ನು ನಿರ್ಮಿಸಿ ನ್ಯಾಯಾಲಯಕ್ಕೆ ನೀಡಲಾಗಿದೆ. ಉತ್ತಮ ಮೂಲಸೌಕರ್ಯಗಳನ್ನು ಕಲ್ಪಿಸಿ ನಿಮಗೆ ಅರ್ಪಿಸಿದ್ದೇವೆ. ನ್ಯಾಯವಾದಿಗಳು, ಕಕ್ಷಿದಾರರು, ಸಾರ್ವಜನಿಕರು ಉತ್ತಮವಾಗಿ ಉಪಯೋಗಿಸಿಕೊಳ್ಳಬೇಕೆಂದರು.

ಕಾರ್ಯಕ್ರಮದಲ್ಲಿ ಸಂಸದ ಪ್ರಹ್ಲಾದ್ ಜೋಶಿ, ಕಂದಾಯ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ, ಪೌರಾಡಳಿತ ಸಚಿವ ಸಿ.ಎಸ್. ಶಿವಳ್ಳಿ, ಮಾಜಿ ಸಿಎಂ ಜಗದೀಶ್ ಶೆಟ್ಟರ್, ಹೈಕೋರ್ಟ್ ನ್ಯಾಯಮೂರ್ತಿ ಕೆ.ಎಸ್. ಮುದಗಲ್ ರವಿ ಮಳಿಮಠ ಸೇರಿದಂತೆ ಇನ್ನಿತರರು ಮಾತನಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News