ನದಿ ಮಧ್ಯೆ ತಿರುಗುವ ಹಿಮದ ತಟ್ಟೆ: ಅಮೆರಿಕದಲ್ಲಿ ಪ್ರಾಕೃತಿಕ ವಿಸ್ಮಯ

Update: 2019-01-20 17:46 GMT

ವಾಶಿಂಗ್ಟನ್,ಜ.20: ಅಮೆರಿಕದ ಮೈನೆ ರಾಜ್ಯದ ವೆಸ್ಟ್‌ಬ್ರೂಕ್ ನಗರದಲ್ಲಿ ಹರಿಯುವ ಪ್ರೆಸ್ಯುಮ್‌ಸ್ಕೊಟ್ ನದಿಯ ಮಧ್ಯೆ ಅಂದಾಜು 91 ಮೀಟರ್ ಅಗಲದಲ್ಲಿ ಹಿಮದ ತಟ್ಟೆಯೊಂದು ರೂಪುಗೊಂಡಿದ್ದು, ಅದು ನಿಧಾನವಾಗಿ ತಿರುಗುತ್ತಿರುವುದು ಜನರನ್ನು ಚಕಿತಗೊಳಿಸಿದೆ.

ನದಿ ನೀರಿನಲ್ಲಿನ ತಾಪಮಾನದ ಬದಲಾವಣೆಯಿಂದಾಗಿ ತಳಭಾಗದಲ್ಲಿ ಸುಳಿಗಳು ರೂಪುಗೊಳ್ಳುವುದರಿಂದ ಹಿಮದ ತಟ್ಟೆಗಳು ಈ ರೀತಿ ತಿರುಗುವ ಸಾಧ್ಯತೆಯಿರುವುದಾಗಿ ವಿಜ್ಞಾನಿಗಳು ಊಹಿಸಿದ್ದಾರೆ.

ನದಿ ನೀರಿನ ಚಲನೆಯಿಂದಾಗಿ ಹಿಮದ ಗಡ್ಡೆಯ ಅಂಚುಗಳನ್ನು ಕೊರೆಯುವುದರಿಂದ ಅದು ವೃತ್ತಾಕಾರವನ್ನು ಪಡೆದಿದೆಯೆಂದು ಅವರು ಹೇಳಿದ್ದಾರೆ.

ಹೊಳೆಯುವ ಚಂದ್ರನಂತೆ ಭಾಸವಾಗುವ ಈ ತಿರುಗುವ ಹಿಮದ ತಟ್ಟೆಯಲ್ಲಿ ಬಾತುಕೋಳಿಗಳು ಮತ್ತಿತರ ಪಕ್ಷಿಗಳು ಆಶ್ರಯ ಪಡೆಯುತ್ತಿವೆಯೆಂದು ವರದಿಗಳು ತಿಳಿಸಿವೆ.

ಸ್ಥಳೀಯ ಉದ್ಯಮಿಯೊಬ್ಬರು ಪ್ರೆಸ್ಯೂಮ್‌ಸ್ಕೊಟ್ ನದಿಯಲ್ಲಿ ಹಿಮವು ತಟ್ಟೆಯಾಕೃತಿಯಲ್ಲಿ ರೂಪುಗೊಂಡಿರುವುದನ್ನು ಗುರುತಿಸಿದ್ದರು. ಡ್ರೋನ್ ವಿಮಾನನ್ನು ಬಳಸಿ ಅವರು ಚಂದ್ರಾಕೃತಿಯ ಹಿಮದ ಗಡ್ಡೆಯ ಛಾಯಾಚಿತ್ರವನ್ನು ಅವರು ಮೊದಲಿಗೆ ಸೆರೆಹಿಡಿದಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News