ಸಿಬಿಐ ಮುಖ್ಯಸ್ಥರ ಆಯ್ಕೆ: ಗುರುವಾರ ಉನ್ನತ ಮಟ್ಟದ ಸಮಿತಿ ಸಭೆ

Update: 2019-01-20 17:48 GMT

 ಹೊಸದಿಲ್ಲಿ, ಜ.20: ಸಿಬಿಐ ಮುಖ್ಯಸ್ಥರ ಆಯ್ಕೆ ಕುರಿತು ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಉನ್ನತ ಮಟ್ಟದ ತ್ರಿಸದಸ್ಯ ಸಮಿತಿ ಗುರುವಾರ ಸಭೆ ಸೇರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೋದಿಯವರಲ್ಲದೆ ಮುಖ್ಯ ನ್ಯಾಯಾಧೀಶ(ಸಿಜೆಐ) ರಂಜನ್ ಗೊಗೋಯಿ ಅಥವಾ ಅವರು ನಿಯೋಜಿಸಿದ ವ್ಯಕ್ತಿ(ನಾಮಿನಿ), ಲೋಕಸಭೆಯಲ್ಲಿ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಸಮಿತಿ ಸಭೆಯಲ್ಲಿ ಪಾಲ್ಗೊಳ್ಳಲಿದ್ದು, 1982ರ ಬ್ಯಾಚ್‌ನ ಹಿರಿಯ ಅಧಿಕಾರಿಗಳಾದ , ಆದರೆ ಸಿಬಿಐಯಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಇರದ ಜೆ.ಕೆ.ಶರ್ಮ ಮತ್ತು ಪರ್ಮಿಂದರ್ ರೈ ಸೇರಿದಂತೆ ಹಲವು ಅಧಿಕಾರಿಗಳ ಬಗ್ಗೆ ಚರ್ಚೆ ನಡೆಯುವ ನಿರೀಕ್ಷೆಯಿದೆ.

ಹರ್ಯಾಣ ಪದವೃಂದದ ಅಧಿಕಾರಿಯಾಗಿರುವ ರೈ 2019ರ ಜನವರಿ 31ರಂದು ನಿವೃತ್ತಿ ಹೊಂದಲಿದ್ದು ಈಗ ರಾಜ್ಯ ವಿಜಿಲೆನ್ಸ್ ಬ್ಯೂರೋದ ಮಹಾನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 1983ರ ಬ್ಯಾಚ್‌ನ ಅಧಿಕಾರಿಯಾಗಿರುವ , ಈಗ ಗೃಹ ಸಚಿವಾಲಯದಲ್ಲಿ ವಿಶೇಷ ಕಾರ್ಯದರ್ಶಿಯಾಗಿರುವ ರೀನಾ ಮಿತ್ರರ ಹೆಸರೂ ಚರ್ಚೆಗೆ ಬರುವ ನಿರೀಕ್ಷೆಯಿದೆ. ರೀನಾ ಐದು ವರ್ಷ ಸಿಬಿಐಯಲ್ಲಿ ಕಾರ್ಯನಿರ್ವಹಿಸಿದ್ದ ಅನುಭವ ಹೊಂದಿದ್ದಾರೆ. ಆಯ್ಕೆಯಾದರೆ ಸಿಬಿಐ ಮುಖ್ಯಸ್ಥರ ಹುದ್ದೆಗೆ ನೇಮಕಗೊಂಡ ಪ್ರಪ್ರಥಮ ಮಹಿಳೆಯಾಗಲಿದ್ದಾರೆ.

 1984ರ ಬ್ಯಾಚ್‌ನ ಅಧಿಕಾರಿ ಜಾವೀದ್ ಅಹ್ಮದ್ ಈ ಹಿಂದೆ ಸಿಬಿಐಯಲ್ಲಿ 13 ವರ್ಷ ಕಾರ್ಯನಿರ್ವಹಿಸಿದ ಅನುಭವಿ. ಈಗ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಕ್ರಿಮಿನಾಲಜಿ ಆ್ಯಂಡ್ ಫೊರೆನ್ಸಿಕ್ ಸೈಯನ್ಸ್’ನ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದು ಇವರ ಹೆಸರೂ ಚರ್ಚೆಗೆ ಬರುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News