ಕಾಡು ಜೇಡ ಹೆಣೆದ ಹಾಡು

Update: 2019-01-20 18:35 GMT

‘‘ಕವಿತೆ ಕನ್ನಡಿಯಾಗಿರುವಂತೆ ದೀಪವೂ ಆಗಿರುವುದು ಉತ್ತಮ ಕವಿತೆಯ ಲಕ್ಷಣ...’’ ಡಾ. ಕೆ. ವೈ. ನಾರಾಯಣ ಸ್ವಾಮಿಯವರ ಮಾತುಗಳನ್ನು ಎತ್ತಿ ಹಿಡಿಯುವಂತಿದೆ ಎಚ್. ಆರ್. ಸುಜಾತಾ ಅವರ ‘ಕಾಡು ಜೇಡ ಹಾಗೂ ಬಾತುಕೋಳಿ ಹೂ’ ಕವನ ಸಂಕಲನ. ಒಟ್ಟು 83 ಕವನಗಳಿರುವ ಈ ಕೃತಿ, ವತ್ತರಿಸಿ ದುಗುಡವನು ಒತ್ತುವೆದೆ ಬಡಿತಕ್ಕೆ ಕಿವಿಯಾನಿಸುವ ಪ್ರಯತ್ನವನ್ನು ಮಾಡುತ್ತದೆ. ‘ಗಾಳಿ ಮಾತು’ ಕವಿತೆಯಲ್ಲಿ ಕವಯಿತ್ರಿ ಕೇಳುತ್ತಾರೆ ‘‘ರಾಮನಾಗುವಿರಾ?/ಕೃಷ್ಣನಾಟವ ಎಲ್ಲಿ ಬಚ್ಚಿಡುವಿರಿ?/ಧರೆಯಾ ಮೇಲೆ ಕೃಷ್ಣನಾಗುವಿರಾ? ರಾಮನ ಒಂಟಿತನವನ್ನೆಲ್ಲಿ ಮುಚ್ಚಿಡುವಿರಿ?’ ಎಂದು ಕೇಳುತ್ತಾರೆ. ರಾಮನ ಒಂಟಿತನ, ಕೊರಗು, ಅತೃಪ್ತಿ, ಕೃಷ್ಣನ ಲೋಕಪ್ರಿಯತೆಯ ಸಮನ್ವಯವನ್ನು ಈ ಕವಿತೆಗಳಲ್ಲಿ ನಾವು ಗುರುತಿಸಬಹುದಾಗಿದೆ.
  ‘ಬಾತುಕೋಳಿಯಂಥ ಹೂ/ಅರಳುವುದು/ ಬಳ್ಳಿಯ ಕಣ್ಣ ಕೊಳದಲ್ಲಿ/ಕೀಟ ಹಿಡಿಯುವ ಕಲೆಯಿದೆಯಂತೆ/ಚಿತ್ತಾಕರ್ಷಕ ಹೂಮೈಯಿಗೆ ಬಿಟ್ಟುಕೊಂಡಿದೆಯೆ?/ ಜೇಡ ಅದಕಾಗಿ ಬಳ್ಳಿಯನು ಬಲೆಗೆ!’ ಇಲ್ಲಿ ಕವಿ ಕಟ್ಟಿಕೊಡುವ ದೃಶ್ಯ ಗಾಢವಾದುದು. ಹಾಗೆಯೇ ಕವಿಯ ನಿರೀಕ್ಷೆಯೂ ಕವಿತೆಯ ಸಾಧ್ಯತೆಗಳನ್ನು ಇಲ್ಲಿ ಹಿಗ್ಗಿಸುತ್ತದೆ. ನ್ಯೂಯಾರ್ಕ್‌ನಲ್ಲಿ ಬದುಕು ಕಟ್ಟಿಕೊಳ್ಳುವ ಅನಿವಾಸಿಯ ಆತಂಕಗಳನ್ನು, ‘ನ್ಯೂಯಾರ್ಕ್’ ಕವಿತೆ ಹಿಡಿದಿಡುತ್ತದೆ. ಅಸ್ಮಿತೆಯ ತಳಮಳಗಳನ್ನು ಈ ಕವಿತೆ ಹೇಳುತ್ತದೆ. ‘ಡಾಲರು ಟಿಪ್ಸು ಅಂಗೈಯಲಿಡಿದು/ ತನ್ನೂರ ಪಯಣಿಗನ ನೋಡುವ/ ಆ ಕಣ್ಣಲ್ಲಿ ಉಳಿದೇ ಹೋಯಿತು ದೈನೇಸಿ ನಗು...’ ಯಾರೋ ಕಟ್ಟಿದ ಬೃಹತ್ ನಗರಗಳ ಮೋಹದ ಹಿಂದೆ ಹೋದವರ ದುರಂತಗಳನ್ನು ಈ ಕವಿತೆ ಹೇಳುತ್ತದೆ. ‘ಹಂಗಿಲ್ಲದವರು’ ಕವಿತೆ ಹೊಸ ಶಾಕುಂತಲೆಯರ ಕತೆಗಳನ್ನು ಹೇಳುತ್ತದೆ. ‘ಕಂಡಷ್ಟೂ/ ರೆಪ್ಪೆ ಬಡಿದಷ್ಟೂ/ಗರಿಗೆದರುವುದು ಜಗತ್ತು/ಮುಚ್ಚಿದ ರೆಪ್ಪೆಯಡಿಯಲ್ಲಿ/ ಉಳಿಯುವುದು ಒಂದು ಕನಸು’ ದಾಹ ತೀರಿಸಲು ಅಸಾಧ್ಯವಾಗುವ ಕಡಲ ಕಡೆಗೆ ಸೆಲೆಯುವ ಮೋಹವನ್ನು ‘ಕಂಡಷ್ಟೂ’ ಕವಿತೆಯಲ್ಲಿ ಕವಿ ಕಟ್ಟಿಕೊಡುತ್ತಾರೆ. ಕೇವಲ ಒಂದೂವರೆ ವರ್ಷದಲ್ಲಿ, ಕನವರಿಕೆ, ನವಮಿ ಸೇರಿದಂತೆ ವರ್ತಮಾನದ ಹೆಣ್ಣಿನ ಒಳದನಿಯನ್ನು ಹೇಳುವ ಹಲವು ಮಹತ್ವದ ಕವಿತೆಗಳು ಇಲ್ಲಿವೆ. ಲೇಖಕಿ ಹೆಣ್ಣಿನ ವಿಮೋಚನೆಯ ಕುರಿತಂತೆ ಹೊಸ ವ್ಯಾಖ್ಯಾನವನ್ನು ತನ್ನ ಕವಿತೆಗಳಲ್ಲಿ ನೀಡುತ್ತಾರೆ ‘‘ಹೆಣ್ಣಿನ ವಿಮೋಚನೆಯೆ?/ ಅಲ್ಲಲ್ಲ, ಇದು ಗಂಡು ಕಟ್ಟಿಕೊಂಡ/ಹಮ್ಮು ಬಿಮ್ಮಿನ ಕೋಟೆಯ/ ಭಂಜನೆ/ಕಣ್ಣ ಪೊರೆ ಹರಿದರೆ /ದಾರಿ ನಿಚ್ಚಳ’ ಸಂಕಲನದ ಒಟ್ಟು ದನಿಯನ್ನು ಈ ನಾಲ್ಕು ಸಾಲುಗಳು ಹೇಳುತ್ತವೆ. ಪಲ್ಲವ ಪ್ರಕಾಶನ, ಬಳ್ಳಾರಿ ಹೊರತಂದಿರುವ ಈ ಕೃತಿಯ ಒಟ್ಟು ಪುಟಗಳು 212. ಮುಖಬೆಲೆ 200 ರೂ. ಆಸಕ್ತರು 94803 53507 ದೂರವಾಣಿಯನ್ನು ಸಂಪರ್ಕಿಸಬಹುದು.

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News