ಪ್ರವಾದಿ ನಿಂದನೆ ಖಂಡಿಸಿ ಆಲ್ದೂರಿನಲ್ಲಿ ಪ್ರತಿಭಟನೆ: ರಾಜ್ಯ ಸರಕಾರದ ವಿರುದ್ಧ ಜನಾಂದೋಲನದ ಎಚ್ಚರಿಕೆ

Update: 2019-01-20 18:45 GMT

ಚಿಕ್ಕಮಗಳೂರು, ಜ.20: ಪ್ರವಾದಿಯವರನ್ನು ನಿಂದಿಸಿದ ಸುದ್ದಿವಾಹಿನಿಯೊಂದರ ನಿರೂಪಕ ಅಜಿತ್ ಹನುಮಕ್ಕನವರ್ ವಿರುದ್ಧ ರಾಜ್ಯ ಸರಕಾರ ಮೃದು ಧೋರಣೆ ಅನುಸರಿಸುವುದನ್ನು ಮುಂದುವರಿಸಿದರೆ ಸರಕಾರದ ವಿರುದ್ಧ ಆಂದೋಲ ರೂಪಿಸುವುದು ಅನಿವಾರ್ಯವಾಗಲಿದೆ ಎಂದು ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಮುಸ್ಲಿಂ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಝಾಕಿರ್ ಹುಸೈನ್ ಎಚ್ಚರಿಸಿದ್ದಾರೆ.

ಇಲ್ಲಿಗೆ ಸಮೀಪದ ಆಲ್ದೂರು ಪಟ್ಟಣದಲ್ಲಿ ಇತ್ತೀಚೆಗೆ ಮುಸ್ಲಿಂ ಸಂಘಟನೆಗಳು ಹಮ್ಮಿಕೊಂಡಿದ್ದ ಪ್ರವಾದಿಯನ್ನಯ ನಿಂದಿಸಿದ ಖಾಸಗಿ ಸುದ್ದಿವಾಹಿನಿ ನಿರೂಪಕ ಅಜಿತ್ ಹನುಮಕ್ಕನವರ್ ಬಂಧನಕ್ಕೆ ಆಗ್ರಹಿಸಿ ನಡೆದ ಧರಣಿ ಉದ್ದೇಶಿಸಿ ಮಾತನಾಡಿದ ಅವರು, ಪ್ರವಾದಿ ನಿಂದನೆಯನ್ನು ಸಹಿಸಲು ಸಾಧ್ಯವಿಲ್ಲ. ಸುದ್ದಿವಾಹಿನಿ ನಿರೂಪಕ ಅಜಿತ್ ಅವರು, ಉದ್ದೇಶಪೂರ್ವಕವಾಗಿ ಪ್ರವಾದಿಯನ್ನು ನಿಂದಿಸಿ ಮುಸ್ಲಿಮರನ್ನು ಕೆಣಕಿದ್ದಾನೆಂದು ಆಕ್ರೋಶ ವ್ಯಕ್ತಪಡಿಸಿದರು. 

ಈ ನಿರೂಪಕನ ವರ್ತನೆ ಹಿಂದಿನಿಂದಲೂ ಸರಿಯಿಲ್ಲ. ಕೋಮುವಾದಿ ಮನಸ್ಥಿತಿಯ ಅಜಿತ್ ಕೋಮವಾದಿ ಚಾನೆಲ್ ಮೂಲಕ ನಾಡಿನ ಸೌಹಾರ್ದ, ಸಾಮರಸ್ಯವನ್ನು ಹದಗೆಡಿಸುತ್ತಿದ್ದಾನೆ. ಮುಸ್ಲಿಮರ ಭಾವನೆ ಕೆರಳಿಸುವ ರೀತಿಯಲ್ಲಿ ಮಾತನಾಡುತ್ತಾ ಹಾಗೂ ಆದರ್ಶ ಪುರುಷನ ಮೇಲೆ ಸವಾರಿ ಮಾಡುತ್ತಿದ್ದಾನೆ. ಪ್ರವಾದಿ ಅವರನ್ನು ನಿಂದಿಸಿರುವ ಅಜಿತ್ ಪತ್ರಕರ್ತನಾಗಿರಲು ಅರ್ಹತೆ ಉಳಿಸಿಕೊಂಡಿಲ್ಲ. ಸುದ್ದಿವಾಹಿನಿ ಮೂಲಕ ನಾಡಿನ ಸೌಹಾರ್ದ ಹಾಳು ಮಾಡುತ್ತಿರುವ ಅಜಿತ್ ವಿರುದ್ಧ ರಾಜ್ಯ ಸರಕಾರ ಕಠಿಣ ಕಾನೂನು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ ಅವರು, ಅಜಿತ್ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆಗಳು ನಡೆದು ಎಲ್ಲ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ. ಈ ದೂರಿನನ್ವಯ ಪೊಲೀಸ್ ಇಲಾಖೆ ಗೂಂಡಾ ಕಾಯ್ದೆಯಡಿಯಲ್ಲಿ ನಿರೂಪಕನ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಈ ಪ್ರಕರಣ ಸಂಬಂಧ ರಾಜ್ಯದೆಲ್ಲೆಡೆ ದೂರು ದಾಖಲಾಗಿದ್ದರೂ ರಾಜ್ಯದ ಸಮ್ಮಿಶ್ರ ಸರಕಾರ ಅಜಿತ್ ವಿರುದ್ಧ ಕ್ರಮಕೈಗೊಳ್ಳಲು ಹಿಂದೇಟು ಹಾಕುತ್ತಿದ್ದು, ಇಂತಹ ಸರಕಾರದಿಂದ ಮುಸ್ಲಿಂ ಸಮುದಾಯದವರು ನ್ಯಾಯ ನಿರೀಕ್ಷಿಸಲು ಸಾಧ್ಯವಿಲ್ಲ ಎಂಬುದು ಸಾಬೀತಾಗಿದೆ. ಆದ್ದರಿಂದ ರಾಜ್ಯದ ಎಲ್ಲ ಮುಸ್ಲಿಮರು ಸಮುದಾಯಕ್ಕಾಗಿರುವ ಅನ್ಯಾಯದ ವಿರುದ್ಧ ರಾಜ್ಯಾದ್ಯಂತ ಜನಾಂದೋಲನ ರೂಪಿಸುವ ಅಗತ್ಯವಿದೆ ಎಂದು ಅವರು ಇದೇ ವೇಳೆ ಕರೆ ನೀಡಿದರು.

ಧರಣಿಯಲ್ಲಿ ಆಲ್ದೂರು ಹೋಬಳಿ ವ್ಯಾಪ್ತಿಯ ವಿವಿಧ ಮಸೀದಿಗಳ ಗುರುಗಳು, ಪದಾಧಿಕಾರಿಗಳು, ಕತೀಬರು ಹಾಗೂ ನೂರಾರು ಮುಸ್ಲಿಂ ಸಮುದಾಯದವರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News