ಸಿದ್ಧಗಂಗಾ ಸ್ವಾಮೀಜಿ ಆರೋಗ್ಯದಲ್ಲಿ ಭಾರೀ ಏರುಪೇರು

Update: 2019-01-21 04:17 GMT

ತುಮಕೂರು, ಜ.21: ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿಯವರ ಆರೋಗ್ಯದಲ್ಲಿ ಇಂದು ಮುಂಜಾನೆಯಿಂದ ಭಾರೀ ಏರುಪೇರು ಕಂಡುಬಂದಿದೆ ಎಂದು ತಿಳಿದುಬಂದಿದೆ.

ಸಹಜವಾಗಿ ಉಸಿರಾಡುತ್ತಿದ್ದ ಸ್ವಾಮೀಜಿಗೆ ಇಂದು ಮುಂಜಾನೆಯಿಂದ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಸಿದ್ಧಗಂಗಾ ಆಸ್ಪತ್ರೆಯ ವೈದ್ಯ ಡಾ.ಪರಮೇಶ್ ನೇತೃತ್ವದಲ್ಲಿ ಚಿಕಿತ್ಸೆ ಮುಂದುವರಿದಿದೆ. ಇದೀಗ ಚೆನ್ನೈನ ರೇಲಾ ಆಸ್ಪತ್ರೆಯ ಸಿದ್ಧಗಂಗಾ ಆಸ್ಪತ್ರೆಗೆ ಆಗಮಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಇತ್ತೀಚೆಗೆ ರೇಲಾ ಆಸ್ಪತ್ರೆಯ ಡಾ.ಮುಹಮ್ಮದ್ ರೇಲಾ ನೇತೃತ್ವದಲ್ಲಿ ಸ್ವಾಮೀಜಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು.

ಈ ನಡುವೆ ಸ್ವಾಮೀಜಿಯ ಆರೋಗ್ಯದ ಏರುಪೇರಿನ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಮ್ಮ ಇಂದಿನ ಹಿರೇಕೆರೂರು ಪ್ರವಾಸವನ್ನು ರದ್ದುಗೊಳಿಸಿದ್ದಾರೆ. ಅವರು ಈಗಾಗಲೇ ಸಿದ್ಧಗಂಗಾ ಮಠದ ಕಿರಿಯ ಸ್ವಾಮೀಜಿಗೆ ದೂರವಾಣಿ ಕರೆ ಮಾಡಿ ಶಿವಕುಮಾರ ಸ್ವಾಮೀಜಿಯ ಯೋಗಕ್ಷೇಮ ವಿಚಾರಿಸಿದ್ದಾರೆ. ಈ ನಡುವೆ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಈಗಾಗಲೇ ಮಠಕ್ಕೆ ಆಗಮಿಸಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕೂಡಾ ತನ್ನ ಬರ ಅಧ್ಯಯನ ಪ್ರವಾಸವನ್ನು ರದ್ದುಗೊಳಿಸಿ ಸಿದ್ಧಗಂಗಾ ಮಠದತ್ತ ಆಗಮಿಸಿದ್ದಾರೆ.

ಸ್ವಾಮೀಜಿಯ ಆರೋಗ್ಯ ಏರುಪೇರು ಸುದ್ದಿ ತಿಳಿಯುತ್ತಿದ್ದಂತೆ ಸಿದ್ಧಗಂಗಾ ಮಠದತ್ತ ಧಾವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮಠದಲ್ಲೇ ಪೊಲೀಸ್ ಕಂಟ್ರೋಲ್ ರೂಂ ಅನ್ನು ಕೂಡಾ ತೆರೆಯಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News