ಡಾ.ಶಿವಕುಮಾರ ಸ್ವಾಮೀಜಿಯ ಆರೋಗ್ಯ ಗಂಭೀರ: ಡಾ.ಪರಮೇಶ್

Update: 2019-01-21 04:53 GMT

ತುಮಕೂರು, ಜ.21: ''ಸಿದ್ಧಗಂಗ ಮಠದ ಡಾ.ಶಿವಕುಮಾರ ಸ್ವಾಮೀಜಿಯ ಆರೋಗ್ಯದಲ್ಲಿ ರವಿವಾರ ರಾತ್ರಿಯಿಂದ ಏರುಪೇರುಗಳಾಗುತ್ತಿದ್ದು, ಸದ್ಯ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ'' ಎಂದು ಅವರನ್ನು ಆರೈಕೆ ಮಾಡುತ್ತಿರುವ ಡಾ. ಪರಮೇಶ್​ ತಿಳಿಸಿದ್ದಾರೆ.

ಶ್ರೀಗಳ ಆರೋಗ್ಯದ ಕುರಿತು ರವಿವಾರ ರಾತ್ರಿಯಿಂದ ಗೊಂದಲವೇರ್ಪಟ್ಟಿರುವ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಡಾ. ಪರಮೇಶ್​, ''ಶ್ರೀಗಳ ಆರೋಗ್ಯದಲ್ಲಿ ನಿನ್ನೆ ರಾತ್ರಿಯಿಂದ ಏರುಪೇರುಗಳಾಗುತ್ತಿವೆ. ಅವರ ಶ್ವಾಸಕೋಶ, ರಕ್ತದೊತ್ತಡ, ಉಸಿರಾಟದಲ್ಲಿ ತೊಂದರೆಗಳಾಗುತ್ತಿವೆ. ಪರಿಸ್ಥಿತಿ ಈಗಲೂ ಹಾಗೆಯೇ ಮುಂದುವರಿದಿದೆ. ಸಮಸ್ಯೆ ಸರಿಪಡಿಸಲು ನಾವೂ ಕೂಡ ಶತ ಪ್ರಯತ್ನ ನಡೆಸುತ್ತಿದ್ದೇವೆ. ಆದರೆ, ಇದರಲ್ಲಿ ಎಷ್ಟು ಯಶಸ್ವಿಯಾಗುತ್ತೇವೋ ಗೊತ್ತಿಲ್ಲ” ಎಂದು ಅವರು ಹೇಳಿದರು.

''ಶ್ರೀಗಳ ದೇಹದಲ್ಲಿ ಪ್ರೋಟೀನ್​ ಉತ್ಪತ್ತಿಯಾಗುತ್ತಿಲ್ಲ. ಇದರಿಂದ ಬಹಳ ಸಮಸ್ಯೆಯಾಗಿದೆ. ಪರಿಸ್ಥಿತಿ ಸುಧಾರಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ಅವರಿಗೆ ನೀಡಲಾಗಿರುವ ಕೃತಕ ಉಸಿರಾಟದ ವ್ಯವಸ್ಥೆ ಮುಂದುವರಿದಿದೆ. ಇನ್ನೊಂದೆರಡು ಗಂಟೆಯಲ್ಲಿ ಮತ್ತಷ್ಟು ಮಾಹಿತಿ ನೀಡಲಾಗುವುದು” ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News