ಧಾರವಾಡ ಸಾಹಿತ್ಯ ಸಂಭ್ರಮದಲ್ಲಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರಿಂದ ದಾಂಧಲೆ

Update: 2019-01-21 05:56 GMT

ಧಾರವಾಡ, ಜ.21: ಧಾರವಾಡ ಸಾಹಿತ್ಯ ಸಂಭ್ರಮದ ಸಮಾರೋಪದ ವೇದಿಕೆಗೆ ನುಗ್ಗಿದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಮೈಕ್, ಕುರ್ಚಿಗಳನ್ನು ಕಿತ್ತೆಸೆದು ದಾಂಧಲೆ ನಡೆಸಿದ ಘಟನೆ ರವಿವಾರ ಸಂಜೆ ನಡೆದಿದೆ.

ಹಿರಿಯ ಲೇಖಕ ಕೃಷ್ಣಮೂರ್ತಿ ಹನೂರು ಮಾತನಾಡುತ್ತಿರುವಾಗ ಏಕಾಏಕಿ ಸಭಾಂಗಣಕ್ಕೆ ನುಗ್ಗಿದ ಬಿಜೆಪಿ ಜಿಲ್ಲಾ ಯುವ ಮೋರ್ಚಾದ ಅಧ್ಯಕ್ಷ ಶರಣು ಅಂಗಡಿ ಸಹಿತ ನಾಲ್ವರು ವೇದಿಕೆಯೇರಿ ಮೈಕ್ ನ್ನು ಕಿತ್ತುಕೊಂಡರು. ಓರ್ವ ಕುರ್ಚಿಯನ್ನು ಎತ್ತಿ ವೇದಿಕೆಯ ಹಿಂದಿನ ಪರದೆಯತ್ತ ಎಸೆದರೆ, ಇನ್ನೋರ್ವ ಟಿಪಾಯಿಯನ್ನು ಎತ್ತಿ ಕೆಳಕ್ಕೆಸೆದನು. ಈ ವೇಳೆ ವೇದಿಕೆಯಲ್ಲಿ ಆಸೀನರಾಗಿದ್ದ ಗಣ್ಯರು ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಮತ್ತೂ ಮುಂದುವರಿದ ದುಷ್ಕರ್ಮಿಗಳ ಪೋಡಿಯಂ ಅನ್ನು ನೆಲಕ್ಕುರುಳಿಸಿ ಗೂಂಡಾವೃತ್ತಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ವೇದಿಕೆಯೇರಿದ ನಾಲ್ವರನ್ನು ವಶಕ್ಕೆ ಪಡೆದು ಕರೆದೊಯ್ದರು.

ಸೈನಿಕರ ಕುರಿತು ಚಿಂತಕ ಡಾ.ಶಿವ ವಿಶ್ವನಾಥನ್ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಈ ದಾಂಧಲೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.

ದಿಢೀರ್ ನಡೆದ ಈ ಘಟನೆಯಿಂದ ವೇದಿಕೆ ಮೇಲಿದ್ದ ಗಣ್ಯರು, ಸಂಘಟಕರು ಕಕ್ಕಾಬಿಕ್ಕಿಯಾದರೂ ಸಭಿಕರು ಮಾತ್ರ ದಾಂಧಲೆ ಕೃತ್ಯವನ್ನು ಖಂಡಿಸಿದರು. ಸಾಂಸ್ಕೃತಿಕ ಗೂಂಡಾಗಿರಿಗೆ’ ಧಿಕ್ಕಾರ. ಇಂತಹ ಹಿಂಸೆಯನ್ನು ಒಪ್ಪುವುದಿಲ್ಲ’ ಎಂದು ಕೂಗಿ ಹೇಳಿದರು.

ಶಿವ ವಿಶ್ವನಾಥನ್ ಹೇಳಿದ್ದೇನು?
ಶನಿವಾರ ನಡೆದ ‘ರಾಷ್ಟ್ರೀಯತೆ: ಸಮಕಾಲೀನ ಸಂದರ್ಭದಲ್ಲಿನ ವಾಗ್ವಾದಗಳು’ ಗೋಷ್ಠಿಯಲ್ಲಿ ಮಾತನಾಡಿದ ಡಾ.ಶಿವ ವಿಶ್ವನಾಥನ್, ‘‘ನಾನು ಅಸ್ಸಾಂಗೆ ಭೇಟಿ ನೀಡಿದ್ದಾಗ, ಮಹಿಳೆಯರು ನಮಗೆ ಶಾಂತಿ ಬೇಕು ಎಂದು ಹೇಳಿದರು. ನಾನು ಒಬ್ಬ ಶಿಕ್ಷಣ ತಜ್ಞನಾಗಿ ಸಶಸ್ತ್ರ ಸೇನೆಯ ವಿಶೇಷ ಅಧಿಕಾರದ ಬಗ್ಗೆ ಕೆಲಸ ಮಾಡಲು ಸೂಚಿಸಿದೆ. ಅವರು ಸೇನೆಯಿಂದ ನಡೆದ 1,500 ಅತ್ಯಾಚಾರ ಮತ್ತು ಕೊಲೆಯ ಪ್ರಕರಣಗಳನ್ನು ದಾಖಲೀಕರಣ ಮಾಡಲು ಆರಂಭಿಸಿದರು. ಅದು ಭಯಾನಕವಾಗಿತ್ತು. ಇದು ಸೇನೆಯನ್ನು ನಾಶ ಮಾಡುತ್ತದೆ...’’ ಎಂದು ಹೇಳಿದ್ದರು.

ಡಾ.ಶಿವ ವಿಶ್ವನಾಥನ್ ಅವರ ಈ ಮಾತಿಗೆ ಸಭೆಯಲ್ಲೇ ಆಕ್ಷೇಪ ವ್ಯಕ್ತಪಡಿಸಿದ್ದ ಮಾಜಿ ಸೇನಾಧಿಕಾರಿಯೂ ಆದ ಸಾರ್ವಜನಿಕ ಶಿಕ್ಷಣ ಇಲಾಖೆ ಹೆಚ್ಚುವರಿ ಆಯುಕ್ತ ಸಿದ್ಧಲಿಂಗಯ್ಯ ಹಿರೇಮಠ, ‘ನೀವು ಸೈನಿಕರನ್ನು ಅತ್ಯಾಚಾರಿಗಳು ಎಂದು ಹೇಗೆ ಹೇಳುತ್ತೀರಿ. ನಾನು 200 ಸೈನಿಕರ ತಂಡದ ನೇತೃತ್ವ ವಹಿಸಿದ್ದೆ. ಅಲ್ಲಿ ಅಂಥ ಯಾವುದೇ ಘಟನೆ ನಡೆದಿಲ್ಲ’ ಎಂದು ಆವೇಶಭರಿತರಾಗಿ ಮಾತನಾಡಿದ್ದರು.

ಡಾ.ಶಿವ ವಿಶ್ವನಾಥನ್ ಅವರ ಈ ಹೇಳಿಕೆಯನ್ನು ಆಕ್ಷೇಪಿಸಿ ಬಿಜೆಪಿ ಜಿಲ್ಲಾ ಯುವ ಮೋರ್ಚಾ ರವಿವಾರ ಸಂಜೆ ಸಾಹಿತ್ಯ ಸಂಭ್ರಮದ ವೇದಿಕೆಯೇರಿ ದಾಂಧಲೆ ಎಸಗಿದೆ ಎಂದು ದೂರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News