ನಾಗೇಶ್ವರ ರಾವ್ ನೇಮಕಾತಿ ಪ್ರಶ್ನಿಸಿದ ಅಪೀಲಿನ ವಿಚಾರಣೆಯಿಂದ ಹಿಂದೆ ಸರಿದ ಸಿಜೆಐ ಗೊಗೊಯಿ

Update: 2019-01-21 07:23 GMT

ಹೊಸದಿಲ್ಲಿ, ಜ.21: ಎಂ ನಾಗೇಶ್ವರ ರಾವ್ ಅವರನ್ನು ಸಿಬಿಐ ಹಂಗಾಮಿ ನಿರ್ದೇಶಕರನ್ನಾಗಿ ನೇಮಕ ಮಾಡಿರುವ ಸರಕಾರದ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅಪೀಲಿನ ಮೇಲಿನ ವಿಚಾರಣೆಯಿಂದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಹಿಂದೆ ಸರಿದಿದ್ದಾರೆ.

ಇತ್ತೀಚೆಗೆ ಸಿಬಿಐ ನಿರ್ದೇಶಕ ಹುದ್ದೆಯಿಂದ ಪದಚ್ಯುತಗೊಂಡ ಅಲೋಕ್ ವರ್ಮಾ ಅವರ ಸ್ಥಾನಕ್ಕೆ ಉತ್ತರಾಧಿಕಾರಿಯನ್ನು ನೇಮಕ ಮಾಡುವ ಉನ್ನತಾಧಿಕಾರ ಆಯ್ಕೆ ಸಮಿತಿಯ ಸದಸ್ಯ ತಾವಾಗಿರುವುದರಿಂದ ಈ ವಿಚಾರಣೆಯಿಂದ ಹಿಂದೆ ಸರಿಯುತ್ತಿರುವುದಾಗಿ ಮುಖ್ಯ ನ್ಯಾಯಮೂರ್ತಿ ಗೊಗೊಯಿ ಸ್ಪಷ್ಟ ಪಡಿಸಿದ್ದಾರೆ.

ಸರಕಾರ ಅಲೋಕ್ ವರ್ಮಾ ಅವರನ್ನು ಬಲವಂತದ ರಜೆಯ ಮೇಲೆ ಕಳುಹಿಸಿದ ನಂತರ ನಾಗೇಶ್ವರ ರಾವ್ ಅವರನ್ನು ಸಿಬಿಐ ಹಂಗಾಮಿ ನಿರ್ದೇಶಕರನ್ನಾಗಿಸಿತ್ತು. ಆದರೆ ಇತ್ತೀಚೆಗೆ ಅಲೋಕ್ ವರ್ಮಾ ಅವರನ್ನು ಸುಪ್ರೀಂ ಕೋರ್ಟ್ ಸಿಬಿಐ ನಿರ್ದೇಶಕರನ್ನಾಗಿ ಮರುಸ್ಥಾಪಿಸಿದ ನಂತರ ಹುದ್ದೆ ತ್ಯಜಿಸಿದ್ದ ರಾವ್ ಅದಾದ ಎರಡೇ ದಿನಗಳಲ್ಲಿ ಉನ್ನತಾಧಿಕಾರ ಆಯ್ಕೆ ಸಮಿತಿ ವರ್ಮಾ ಅವರನ್ನು ಪದಚ್ಯುತಗೊಳಿಸಿದ ಬೆನ್ನಿಗೆ ಮತ್ತೆ ಸಿಬಿಐ ಹಂಗಾಮಿ ನಿರ್ದೇಶಕರಾಗಿ  ಅಧಿಕಾರ ವಹಿಸಿಕೊಂಡಿದ್ದರು.

ಆಯ್ಕೆ ಸಮಿತಿ ಜನವರಿ 24ರಂದು ಸಭೆ ಸೇರಿ ಹೊಸ ಸಿಬಿಐ ನಿರ್ದೇಶಕರನ್ನು ನೇಮಿಸಲಿದೆ.

ಕಳೆದ ಸೋಮವಾರ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಮೂಲಕ ಒಂದು ಎನ್ ಜಿಒ ನಾಗೇಶ್ವರ ರಾವ್ ಅವರ ನೇಮಕಾತಿಯನ್ನು ಪ್ರಶ್ನಿಸಿತ್ತಲ್ಲದೆ ಅದು ಅಕ್ರಮ, ಏಕಪಕ್ಷೀಯ ಹಾಗೂ ದಿಲ್ಲಿ ಪೊಲೀಸ್ ಸ್ಪೆಶಲ್ ಎಸ್ಟಾಬ್ಲಿಶ್ಮೆಂಟ್ ಕಾಯಿದೆಯ ಉಲ್ಲಂಘನೆಯಾಗಿದೆ ಎಂದು ಹೇಳಿತ್ತಲ್ಲದೆ, ನಿಯಮದ ಪ್ರಕಾರ ಸಿಬಿಐಗೆ ನಿರ್ದೇಶಕರನ್ನು ನೇಮಿಸುವಂತೆ ಸರಕಾರಕ್ಕೆ ಆದೇಶ ನೀಡಬೇಕೆಂದು ಕೋರಿತ್ತು.

ನಾಗೇಶ್ವರ ರಾವ್ ಅವರು 1986 ಬ್ಯಾಚಿನ ಐಪಿಎಸ್ ಅಧಿಕಾರಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News