ಪಿ.ಎನ್.ಬಿ. ವಂಚನೆ ಪ್ರಕರಣ: ಭಾರತದ ಪೌರತ್ವ ತೊರೆದ ವಜ್ರೋದ್ಯಮಿ ಮೆಹುಲ್ ಚೊಕ್ಸಿ

Update: 2019-01-21 07:47 GMT

ಹೊಸದಿಲ್ಲಿ, ಜ.21: ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ಸಾವಿರಾರು ಕೋಟಿ ರೂ. ವಂಚಿಸಿ ದೇಶ ಬಿಟ್ಟು ಪರಾರಿಯಾಗಿರುವ ವಜ್ರೋದ್ಯಮಿ ಮೆಹುಲ್ ಚೊಕ್ಸಿ ತನ್ನ ಭಾರತೀಯ ಪೌರತ್ವವನ್ನು ಕೈಬಿಟ್ಟು ತನ್ನ ಪಾಸ್‌ಪೋರ್ಟನ್ನು ಆ್ಯಂಟಿಗುವಾದ ಭಾರತೀಯ ಹೈಕಮಿಷನ್ ಗೆ ಹಸ್ತಾಂತರಿಸಿದ್ದಾರೆ. ವಂಚನೆಗಾಗಿ ಭಾರತೀಯ ತನಿಖಾ ಏಜನ್ಸಿಗಳಿಗೆ ಬೇಕಾಗಿರುವ ಚೊಕ್ಸಿ ಭಾರತಕ್ಕೆ ಗಡೀಪಾರುಗೊಳ್ಳುವುದನ್ನು ತಪ್ಪಿಸಲು ಈ ರೀತಿ ಮಾಡಿದ್ದಾರೆಂದು ತಿಳಿಯಲಾಗಿದೆ. 

ತನ್ನ ಪಾಸ್ ಪೋರ್ಟ್ ಜತೆ ಚೊಕ್ಸಿ (59) ತನ್ನಲ್ಲಿದ್ದ 177 ಡಾಲರ್ ಹಣ ನೀಡಿದ್ದಾರೆ. ಆತ ತನ್ನ ಹೊಸ ವಿಳಾಸವನ್ನು ಜೊಲ್ಲಿ ಹಾರ್ಬರ್ ಮಾರ್ಕ್ಸ್, ಆ್ಯಂಟಿಗುವಾ ಎಂದು ನೀಡಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ.

ಚೊಕ್ಸಿ ಎರಡು ದೇಶಗಳ ಪೌರತ್ವವನ್ನು ಹೊಂದಲು ಸಾಧ್ಯವಿಲ್ಲ ಎಂದು ವಿದೇಶಾಂಗ ಸಚಿವಾಲಯ ಹೇಳಿತ್ತು. ಚೊಕ್ಸಿ ಗಡೀಪಾರಿಗೆ ಸಂಬಂಧಿಸಿದ ಭಾರತದ ಪ್ರಕರಣವನ್ನು ಆ್ಯಂಟಿಗುವಾ ವಿಚಾರಣೆ ನಡೆಸುತ್ತಿದೆ.

ಭಾರತ ಮತ್ತು ಆ್ಯಂಟಿಗುವಾ ನಡುವೆ ದ್ವಿಪಕ್ಷೀಯ ಗಡೀಪಾರು ಒಪ್ಪಂದವಿಲ್ಲದೇ ಇದ್ದರೂ ಚೊಕ್ಸಿಯನ್ನು ಭಾರತಕ್ಕೆ ಮರಳಿ ಕರೆ ತರುವ ಸಲುವಾಗಿ ಆ್ಯಂಟಿಗುವಾದ ಕಾನೂನೊಂದರ ಮೊರೆ ಹೋಗಲು ಭಾರತ ನಿರ್ಧರಿಸಿತ್ತು. ನಿರ್ದಿಷ್ಟ ಕಾಮನ್ವೆಲ್ತ್ ದೇಶಕ್ಕೆ ವಂಚನೆ ಪ್ರಕರಣದಲ್ಲಿ ಬೇಕಾದವರನ್ನು ಕಳುಹಿಸಲು ಅನುವು ಮಾಡುವ ಕಾನೂನು ಆ್ಯಂಟಿಗುವಾದಲ್ಲಿದೆ.

ಮೆಹುಲ್ ಚೊಕ್ಸಿಗೆ ಆ್ಯಂಟಿಗುವಾ ಮತ್ತು ಬಾರ್ಬುಡಾ ಪೌರತ್ವ 2018ರಲ್ಲಿ ದೊರಕಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News