ಮೀಸಲಾತಿ ಬೇಡಿಕೆ ಈಡೇರಿಸದ ಬಿಜೆಪಿಯನ್ನು ಸೋಲಿಸಲು ಶ್ರಮಿಸುತ್ತೇವೆ: ಪಣ ತೊಟ್ಟ ಜಾಟ್ ನಾಯಕರು

Update: 2019-01-21 09:16 GMT

ಹೊಸದಿಲ್ಲಿ, ಜ.21: ತಮ್ಮ ಮೀಸಲಾತಿ ಬೇಡಿಕೆಗಳನ್ನು ಈಡೇರಿಸದೇ ಇದ್ದರೆ ಈ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸುವುದಿಲ್ಲ ಎಂದುವಿವಿಧ ರಾಜ್ಯಗಳ ಜಾಟ್ ನಾಯಕರು ಹೇಳಿದ್ದಾರೆ.

ತಮ್ಮ ಮೀಸಲಾತಿ ಬೇಡಿಕೆಯನ್ನು ಈಡೇರಿಸದೆ ಮೇಲ್ವರ್ಗಕ್ಕೆ ಸೇರಿದ ಆರ್ಥಿಕ ದುರ್ಬಲರಿಗೆ ಶೇ.10 ಮೀಸಲಾತಿಯೊದಗಿಸಿ ನರೇಂದ್ರ ಮೋದಿ ಸರಕಾರ ತಮ್ಮನ್ನು ವಂಚಿಸಿದೆ ಎಂದು ಅಖಿಲ ಭಾರತ ಜಾಟ್ ಆರಕ್ಷಣ್ ಬಚಾವೋ ಮಹಾ ಆಂದೋಲನ್ ಎಂಬ ಸಂಘಟನೆಯ ಅಡಿಯಲ್ಲಿ ಒಟ್ಟು ಸೇರಿದ ಉತ್ತರ ಪ್ರದೇಶ, ರಾಜಸ್ಥಾನ, ಹರ್ಯಾಣ, ದಿಲ್ಲಿ ಮತ್ತು ಮಧ್ಯ ಪ್ರದೇಶದ ಜಾಟರು ಆರೋಪಿಸಿದ್ದಾರೆ.

ತಮ್ಮ ಬೇಡಿಕೆಯನ್ನು ಬೆಂಬಲಿಸಿದ ಹಾಗೂ ಹರ್ಯಾಣದಲ್ಲಿ 2016ರಲ್ಲಿ ನಡೆದ ಜಾಟ್ ಚಳವಳಿ ಸಂದರ್ಭ ಸರಕಾರದ ಕ್ರಮವನ್ನು ಖಂಡಿಸಿರುವ ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿಯನ್ನು ತಾವು ಬೆಂಬಲಿಸುವುದಾಗಿ ಉತ್ತರ ಪ್ರದೇಶದ ಜಾಟರು ಹೇಳಿದ್ದಾರೆ.

‘‘ಹಿಂದಿನ ಯುಪಿಎ ಸರಕಾರ ನಮಗೆ ಕೇಂದ್ರ ಸರಕಾರಿ ಉದ್ಯೋಗಗಳಲ್ಲಿ ಮೀಸಲಾತಿಯೊದಗಿಸಿತ್ತು. ಆದರೆ ಅದನ್ನು ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಿದಾಗ ಈಗಿನ ಎನ್‌ಡಿಎ ಸರಕಾರ ತನ್ನ ವಾದವನ್ನು ಸರಿಯಾಗಿ ಮಂಡಿಸದ ಕಾರಣ ಸರಕಾರದ ಆದೇಶ ರದ್ದುಗೊಂಡಿದೆ. ಅಂದಿನಿಂದ ಸರಕಾರ ಕೇವಲ ಆಶ್ವಾಸನೆ ನೀಡುತ್ತಿದೆ. ಇನ್ನು ಮುಂದೆ ನಮ್ಮನ್ನು ವಂಚಿಸಲು ಸಾದ್ಯವಿಲ್ಲ, ಜಾಟರು ದೊಡ್ಡ ಸಂಖ್ಯೆಯಲ್ಲಿರುವ 131 ಕ್ಷೇತ್ರಗಳಲ್ಲಿ ನಾವು ಪ್ರಚಾರ ಕೈಗೊಂಡು ಬಿಜೆಪಿಯನ್ನು ಸೋಲಿಸುತ್ತೇವೆ ಎಂದು ಅಖಿಲ ಭಾರತ ಜಾಟ್ ಆರಕ್ಷಣ್ ಬಚಾವೋ ಮಹಾ ಆಂದೋಲನ್ ಮುಖ್ಯ ಸಂಘಟಕ ಧರಮವೀರ್ ಚೌಧುರಿ ಹೇಳಿದ್ದಾರೆ.

ಜಾಟ್ ಸಮುದಾಯದವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರನ್ನು ಹಲವು ಬಾರಿ ಭೇಟಿಯಾಗಿದ್ದರೂ ಪ್ರಯೋಜನವಾಗಿಲ್ಲ ಎಂದೂ ಜಾಟ್ ನಾಯಕರು ದೂರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News