ಕುಂಭಮೇಳದ ನಂತರ ಸಂತರು ಅಯೋಧ್ಯೆಗೆ ತೆರಳಿ ರಾಮ ಮಂದಿರ ನಿರ್ಮಿಸುತ್ತಾರೆ: ಅಖಾಡ ಪರಿಷದ್ ಅಧ್ಯಕ್ಷ

Update: 2019-01-21 08:45 GMT

ಹೊಸದಿಲ್ಲಿ, ಜ.21: ಕುಂಭಮೇಳ ಮುಗಿದ ನಂತರ ಎಲ್ಲಾ ಸಾಧು ಸಂತರು ಅಯೋಧ್ಯೆಯಲ್ಲಿ ಸಭೆ ಸೇರಿ ರಾಮ ಮಂದಿರ ನಿರ್ಮಾಣ ಕಾರ್ಯ ಆರಂಭಿಸುತ್ತಾರೆ ಎಂದು ಅಖಿಲ ಭಾರತ ಅಖಾಡ ಪರಿಷದ್ ಅಧ್ಯಕ್ಷ ನರೇಂದ್ರ ಗಿರಿ ಹೇಳಿದ್ದಾರೆ. ಚುನಾವಣೆ ತನಕ ರಾಮ ಮಂದಿರ ವಿಚಾರ ಜೀವಂತವಿರಿಸುವ ಉದ್ದೇಶ ಹೊಂದಿರುವ ಬಿಜೆಪಿಗೆ ರಾಮ ಮಂದಿರ ನಿರ್ಮಿಸುವ ಆಸಕ್ತಿಯಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಈಗಾಗಲೇ ಕುಂಭಮೇಳದಲ್ಲಿ ಭಾಗವಹಿಸುತ್ತಿರುವ ದೇಶದ ವಿವಿಧ ಭಾಗಗಳ ಸಾಧು ಸಂತರು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದಲ್ಲಾಗುತ್ತಿರುವ ವಿಳಂಬದ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಲವಾರು ಸಂತರು ಈ ಬಗ್ಗೆ ಬಹಿರಂಗಾಗಿ ಹೇಳಿಕೊಂಡಿದ್ದು ಪ್ರಧಾನಿ ಮೋದಿ ನೇತೃತ್ವದ ಎನ್ ಡಿಎ ಸರಕಾರ ಹಸ್ತಕ್ಷೇಪ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

ರಾಮ ಮಂದಿರ ನಿರ್ಮಾಣ ಕಾರ್ಯ 2025ರೊಳಗಾಗಿ ಮುಗಿಯಬೇಕೆಂಬ ಗಡುವನ್ನೂ ಆರೆಸ್ಸೆಸ್ ಪ್ರಧಾನ ಕಾರ್ಯದರ್ಶಿ ಭಯ್ಯಾಜಿ ಜೋಷಿ ಇತ್ತೀಚೆಗೆ ವಿಧಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಐವತ್ತೈದು ದಿನಗಳ ಕಾಲ ನಡೆಯುವ ಕುಂಭ ಮೇಳ ಮಾರ್ಚ್ 4ರಂದು ಕೊನೆಗೊಳ್ಳಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News