ನನ್ನ ಪಾಲಿಗೆ ‘ನಡೆದಾಡುತ್ತಿದ್ದ ಬಸವಣ್ಣ’ ಡಾ.ಶ್ರೀ ಶಿವಕುಮಾರ ಸ್ವಾಮೀಜಿ: ಮಾಜಿ ಸಿಎಂ ಸಿದ್ದರಾಮಯ್ಯ

Update: 2019-01-21 12:42 GMT

ಬೆಂಗಳೂರು, ಜ.20: ನಾವು ಬಸವಣ್ಣನವರನ್ನು ಕಣ್ಣಾರೆ ನೋಡಿಲ್ಲ, ನಾನು ಡಾ.ಶಿವಕುಮಾರ ಸ್ವಾಮೀಜಿಗಳಲ್ಲಿ ಬಸವಣ್ಣನನ್ನು ಕಾಣುತ್ತಿದ್ದೆ. ಅವರನ್ನು ನಡೆದಾಡುವ ದೇವರು ಎನ್ನುತ್ತಾರೆ. ನನ್ನ ಪಾಲಿಗೆ ಅವರು ನಡೆದಾಡುತ್ತಿದ್ದ ಬಸವಣ್ಣ ಆಗಿದ್ದರು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಅಂತಹದ್ದೊಂದು ಆದರ್ಶ ಬದುಕನ್ನು ಅವರು ಬದುಕಿ ತೋರಿಸಿ ನಮಗೆ ಮಾದರಿಯಾಗಿ ಬಿಟ್ಟು ಹೋಗಿದ್ದಾರೆ. ಆ ದಾರಿಯಲ್ಲಿ ನಡೆಯುವುದೇ ಸ್ವಾಮೀಜಿ ಸಲ್ಲಿಸುವ ನಿಜವಾದ ಶ್ರದ್ಧಾಂಜಲಿಯಾಗಿದೆ ಎಂದು ಸಿದ್ದರಾಮಯ್ಯ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ. ವೈಯಕ್ತಿಕ ಮತ್ತು ರಾಜಕೀಯ ಜೀವನದಲ್ಲಿ ಬಸವಣ್ಣ ನನ್ನ ನಾಯಕ. ಇದಕ್ಕಾಗಿಯೇ ಬಸವ ಜಯಂತಿಯಂದೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದವನು ನಾನು. ಸ್ವಾಮೀಜಿಗಳು ಬಸವಣ್ಣನವರ ತತ್ವಕ್ಕೆ ನೂರಕ್ಕೆ ನೂರರಷ್ಟು ಬದ್ಧರಾಗಿ ಬದುಕಿದವರು ಎಂದು ಸಿದ್ದರಾಮಯ್ಯ ಸ್ಮರಿಸಿದ್ದಾರೆ.

ಶಿವಕುಮಾರ ಸ್ವಾಮಿಗಳ ಲಿಂಗೈಕ್ಯದಿಂದ ನಾನು ಆಘಾತಕ್ಕೀಡಾಗಿದ್ದೇನೆ. ಇತ್ತೀಚಿನ ಕೆಲವು ದಿನಗಳಲ್ಲಿ ಅವರ ಆರೋಗ್ಯದಲ್ಲಿ ನಡೆಯುತ್ತಿದ್ದ ಏರುಪೇರು ನಮ್ಮೆಲ್ಲರನ್ನೂ ಆತಂಕಕ್ಕೀಡು ಮಾಡಿತ್ತು. ಇಂತಹದ್ದೊಂದು ದಿನ ಎದುರಾಗಬಹುದೆಂಬ ನಮ್ಮ ಭಯ ನಿಜವಾಗಿದೆ. ಸಾಧನೆಯ ಮೂಲಕ ಲೋಕವನ್ನೇ ಗೆದ್ದಿರುವ ಸ್ವಾಮಿಗಳು ಕೊನೆಗೂ ಸಾವನ್ನು ಗೆಲ್ಲಲಾಗದೆ ಶರಣಾಗಿ ನಮ್ಮನ್ನು ಅನಾಥರಾಗಿಸಿದ್ದಾರೆ ಎಂದು ಅವರು ಶೋಕ ವ್ಯಕ್ತಪಡಿಸಿದ್ದಾರೆ.

ಹಸಿದವರಿಗೆ ಅನ್ನ, ಮಕ್ಕಳಿಗೆ ಶಿಕ್ಷಣ ಮತ್ತು ವಸತಿ ಕಲ್ಪಿಸಲು ತಮ್ಮ ಜೀವವನ್ನೇ ತೇದ ಸ್ವಾಮೀಜಿಯ ಬದುಕು ಮತ್ತು ಸಾಧನೆ ನಮಗೆಲ್ಲ ಮಾದರಿ. ಮುಖ್ಯಮಂತ್ರಿಯಾಗಿದ್ದಾಗ ನಾನು ಅನುಷ್ಠಾನಗೊಳಿಸಿದ್ದ ಅನ್ನಭಾಗ್ಯ, ಕ್ಷೀರಭಾಗ್ಯ, ವಿದ್ಯಾಸಿರಿ ಮೊದಲಾದ ಅನೇಕ ಕಾರ್ಯಕ್ರಮಗಳಿಗೆ ಸ್ವಾಮೀಜಿಯವರ ಸೇವಾ ಕಾರ್ಯಕ್ರಮಗಳೂ ಕೂಡಾ ಸ್ಫೂರ್ತಿಯಾಗಿತ್ತು ಎಂದು ಅವರು ಸ್ಮರಿಸಿದ್ದಾರೆ.

ಶಿಕ್ಷಣ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆ ಅನನ್ಯವಾದುದು. ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದವರೆಗೆ ಅನೇಕ ಸಂಸ್ಥೆಗಳನ್ನು ಕಟ್ಟಿ ಮುನ್ನಡೆಸಿದ್ದ ಸ್ವಾಮೀಜಿ, ಕೊನೆಯವರೆಗೂ ಶಿಕ್ಷಣವನ್ನು ಸೇವೆಯೆಂದೇ ತಿಳಿದಿದ್ದರೆ ಹೊರತು ಅದನ್ನು ವ್ಯಾಪಾರ-ಉದ್ಯಮ ಮಾಡಲು ಹೋಗಲಿಲ್ಲ. ಶಿಕ್ಷಣ ಕ್ಷೇತ್ರವೇ ಉದ್ಯಮವಾಗುತ್ತಿರುವ ಹಿನ್ನೆಲೆಯಲ್ಲಿ ಸ್ವಾಮೀಜಿಯವರ ಈ ಸಂದೇಶವನ್ನು ನಾವೆಲ್ಲರೂ ಅರಿತುಕೊಳ್ಳಬೇಕಾಗಿದೆ ಮತ್ತು ಶಿಕ್ಷಣೋದ್ಯಮಿಗಳು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಉದ್ಧಾಮ ಸ್ವಾಮೀಜಿಗಳಿಂದ ಪ್ರಾರಂಭವಾಗಿದ್ದ ಅನ್ನ-ಅರಿವುಗಳ ದಾಸೋಹವನ್ನು ಶಿವಕುಮಾರ ಸ್ವಾಮೀಜಿ ಸರ್ವರನ್ನೂ ಒಳಗೊಂಡ ದಾಸೋಹವನ್ನಾಗಿ ವಿಸ್ತರಿಸಿದರು. ತುಮಕೂರಿನ ಸಿದ್ದಗಂಗಾ ಮಠ ಶಿವಕುಮಾರ ಸ್ವಾಮೀಜಿಗಳ ನೇತೃತ್ವದಲ್ಲಿ ಒಂದು ವಿಶ್ವವಿದ್ಯಾಲಯವೇ ಯಾಕೆ, ಒಂದು ಸರಕಾರವೇ ಮಾಡಬೇಕಾಗಿರುವ ಕೆಲಸವನ್ನು ಮಾಡುತ್ತಾ ಬಂದಿದೆ. ಅಲ್ಲಿನ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣ ಪಡೆದು ವಿವಿಧ ಕ್ಷೇತ್ರಗಳಲ್ಲಿ ಉನ್ನತ ಹುದ್ದೆಗಳಲ್ಲಿರುವವರು ಇಂದು ವಿಶ್ವದಾದ್ಯಂತ ಇದ್ದಾರೆ ಎಂದು ಅವರು ಹೇಳಿದ್ದಾರೆ.

ಸ್ವಾಮೀಜಿ ಎಂದೂ ಹೆಚ್ಚು ಮಾತನಾಡಿದವರಲ್ಲ, ಮಾತಿಗಿಂತ ಮೌನದಲ್ಲಿಯೇ ಸಾಧನೆ ಮಾಡಿದವರು. ಅವರು ನುಡಿದಂತೆಯೇ ನಡೆದವರು. ಕಾಯಕಪ್ರಜ್ಞೆಯನ್ನು ಬಾಳಿ ಬದುಕಿದವರು. ಶಿವಕುಮಾರ ಸ್ವಾಮೀಜಿಗೆ ಅವರೇ ಸಾಟಿ ಹೊರತು ಆ ಸ್ಥಾನದಲ್ಲಿ ಭವಿಷ್ಯದಲ್ಲಿ ಇನ್ನೊಬ್ಬರನ್ನು ಊಹಿಸುವುದು ಕಷ್ಟ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಸ್ವಾಮೀಜಿಗಳ ಲಿಂಗೈಕದಿಂದ ರಾಜ್ಯ, ದೇಶಕ್ಕೆ ಮಾತ್ರವಲ್ಲ ಇಡೀ ಮನುಕುಲಕ್ಕೆ ಆಗಿರುವ ನಷ್ಟವನ್ನು ಶಬ್ದಗಳಿಂದ ಹೇಳಿಕೊಳ್ಳಲು ಸಾಧ್ಯ ಇಲ್ಲ. ನಮ್ಮಿಂದ ಮರೆಯಾದ ಸ್ವಾಮೀಜಿಗಳು ಒಂದು ದೊಡ್ಡ ನಿರ್ವಾತವನ್ನು ಬಿಟ್ಟು ಹೋಗಿದ್ದಾರೆ, ಅದನ್ನು ತುಂಬಲು ಬಹುಷಃ ಮುಂದೆಯೂ ಯಾರಿಗೂ ಸಾಧ್ಯವಾಗಲಾರದು ಎಂದು ಅವರು ತಿಳಿಸಿದ್ದಾರೆ.

ಶ್ರೀಗಳಿಗೆ ಭಾರತ ರತ್ನ ನೀಡಬೇಕು

ಶಿವಕುಮಾರ ಸ್ವಾಮೀಜಿಗೆ ದೇಶದ ಅತ್ಯುನ್ನತ ಗೌರವವಾದ ಭಾರತ ರತ್ನ ನೀಡಬೇಕೆಂದು ನಾನು ಮುಖ್ಯಮಂತ್ರಿಯಾಗಿದ್ದಾಗ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಿದ್ದೆ. ಸ್ವಾಮೀಜಿಗಳು ಇಂತಹ ಪ್ರಶಸ್ತಿ-ಪಾರಿತೋಷಕಗಳನ್ನು ಮೀರಿ ಬದುಕಿದವರು. ಆದರೆ ಆ ಗೌರವ ಸ್ವಾಮೀಜಿಗೆ ಸಂದಿದ್ದರೆ ಆ ಪ್ರಶಸ್ತಿಯ ಗೌರವ ಹೆಚ್ಚಾಗುತ್ತಿತ್ತು.

-ಸಿದ್ದರಾಮಯ್ಯ, ಮಾಜಿ ಸಿಎಂ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News