ಶಿವಕುಮಾರ ಸ್ವಾಮೀಜಿಗೆ ಮರಣೋತ್ತರ ‘ಭಾರತ ರತ್ನ' ನೀಡಲು ಕೇಂದ್ರ ಸರಕಾರಕ್ಕೆ ಮನವಿ: ಸಿಎಂ ಕುಮಾರಸ್ವಾಮಿ

Update: 2019-01-21 12:16 GMT

ಬೆಂಗಳೂರು, ಜ. 21: ನಡೆದಾಡುವ ದೇವರು ಎಂದೇ ಹೆಸರಾಗಿದ್ದ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ಕಂಬನಿ ಮಿಡಿದಿರುವ ಮುಖ್ಯಮಂತ್ರಿ ಕುಮಾರಸ್ವಾಮಿ, ತ್ರಿವಿಧ ದಾಸೋಹದಿಂದ ಲಕ್ಷಾಂತರ ಮಕ್ಕಳ ಬಾಳು ಬೆಳಗಿದವರು ಎಂದು ಸ್ಮರಿಸಿದ್ದಾರೆ.

ಶಿಕ್ಷಣ, ಅನ್ನದಾಸೋಹದ ಅವರ ಕೈಂಕರ್ಯ ದೇಶ, ಭಾಷೆ, ಜಾತಿ, ಧರ್ಮಗಳ ಎಲ್ಲೆ ಮೀರಿ ಎಲ್ಲರಿಗೂ ಮಾದರಿಯಾಗುವಂತಹದ್ದು. ನಾನು ಹಿಂದೆ ಸಿಎಂ ಆಗಿದ್ದಾಗ ಶ್ರೀಗಳು 'ಕರ್ನಾಟಕ ರತ್ನ' ಪ್ರಶಸ್ತಿ ಸ್ವೀಕರಿಸಿದ ಸೌಭಾಗ್ಯ ನನ್ನದಾಗಿದ್ದು, ಇದೊಂದು ಅವಿಸ್ಮರಣೀಯ ಅನುಭವ ಎಂದು ಅವರು ನೆನಪು ಮಾಡಿಕೊಂಡಿದ್ದಾರೆ.

ಆ ವೇಳೆಯೇ ಸರಕಾರವು ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿ ನೀಡುವಂತೆ ಶಿಫಾರಸು ಮಾಡಿತ್ತು. ಯಾವುದೇ ಭೇದ-ಭಾವವಿಲ್ಲದೆ, ವಿದ್ಯಾದಾನ, ಜನರ ಶ್ರೇಯೋಭಿವೃದ್ಧಿಗಾಗಿ ಅವರು ಕೈಗೆತ್ತಿಕೊಂಡ ಸೇವಾಕಾರ್ಯಗಳು ಅನುಸರಣೀಯ. ಈ ಹಿನ್ನೆಲೆಯಲ್ಲಿ ಈಗ ಮರಣೋತ್ತರವಾಗಿಯಾದರೂ ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿ ನೀಡುವಂತೆ ಮತ್ತೊಮ್ಮೆ ಕೇಂದ್ರ ಸರಕಾರಕ್ಕೆ ಮನವಿ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ಶ್ರೀಗಳು ಭೌತಿಕವಾಗಿ ನಮ್ಮನ್ನು ಅಗಲಿದರೂ, ಮಠದ ಸೇವಾ ಚಟುವಟಿಕೆಗಳು, ಶೈಕ್ಷಣಿಕ ಕಾರ್ಯಕ್ರಮಗಳ ಮೂಲಕ ಈ ಕಾಯಕ ಯೋಗಿ ನಮ್ಮೊಳಗೆ ಅಜರಾಮರರಾಗಿರುತ್ತಾರೆ. ಕೊನೆಯ ಉಸಿರಿನವರೆಗೂ ತಾವು ನಂಬಿಕೊಂಡ ಕಾಯಕವೇ ಕೈಲಾಸ ಎಂಬ ತತ್ವವನ್ನು ಪರಿಪಾಲಿಸಿದ ತ್ರಿವಿಧ ದಾಸೋಹಿಗೆ ನನ್ನ ಭಕ್ತಿಪೂರ್ವಕ ನಮನಗಳು. ಶ್ರೀಗಳ ಅಗಲಿಕೆಯಿಂದ ದುಃಖತಪ್ತರಾದ ಅಸಂಖ್ಯ ಭಕ್ತರು, ವಿದ್ಯಾರ್ಥಿಗಳು, ಹಿತೈಷಿಗಳು, ಮಠದ ಪರಿವಾರ ಮತ್ತು ಸಿಬ್ಬಂದಿಗೆ ಈ ನೋವನ್ನು ಸಹಿಸುವ ಶಕ್ತಿ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಕುಮಾರಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಜಾತಿ-ಮತಗಳ ಭೇದವಿಲ್ಲದೆ ಸಮಾಜದ ಎಲ್ಲ ಜನಾಂಗಗಳ ಶೈಕ್ಷಣಿಕ ಹಾಗೂ ಸಾಮಾಜಿಕ ಸ್ಥಾನಮಾನಗಳಿಗೆ ಮನ್ನಣೆ ನೀಡುವ ಮೂಲಕ ಮಾನವೀಯತೆ ಮೆರೆದಿದ್ದ ತುಮಕೂರಿನ ಸಿದ್ದಗಂಗಾ ಮಠದ ಡಾ.ಶಿವಕುಮಾರ್ ಸ್ವಾಮಿ ನಿಧನ ರಾಜ್ಯಕ್ಕೆ ಅಪಾರ ನಷ್ಟವನ್ನುಂಟು ಮಾಡಿದೆ’

-ಪ್ರಿಯಾಂಕ್ ಖರ್ಗೆ, ಸಮಾಜ ಕಲ್ಯಾಣ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News