ಚಿಕ್ಕಮಗಳೂರು ತಾಪಂ ವಿಶೇಷ ಸಭೆ: ನೀರಿನ ಸಮಸ್ಯೆಗೆ ತುರ್ತು ಪರಿಹಾರ ಕೈಗೊಳ್ಳಲು ಸಿ.ಟಿ ರವಿ ಸೂಚನೆ

Update: 2019-01-21 13:16 GMT

ಚಿಕ್ಕಮಗಳೂರು, ಜ.21: ತಾಲೂಕು ವ್ಯಾಪ್ತಿಯಲ್ಲಿನ ನೂರಾರು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ವ್ಯಾಪಕವಾಗಿದೆ. ಇಂತಹ ಸಂದರ್ಭದಲ್ಲಿ ಜನರ ನೆರವಿಗೆ ತಾಲೂಕು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಧಾವಿಸಬೇಕು. ಜನರಿಗೆ ಕುಡಿಯುವ ನೀರಿನ ಸೌಲಭ್ಯ ಒದಗಿಸುವುದು ಅಧಿಕಾರಿಗಳು, ಜನಪ್ರತಿನಿಧಿಗಳ ಆದ್ಯ ಕರ್ತವ್ಯವಾಗಿದ್ದು, ಈ ನಿಟ್ಟಿನಲ್ಲಿ ಕೂಡಲೇ ಕಾರ್ಯಪ್ರವೃತ್ತರಾಗಬೇಕೆಂದು ಶಾಸಕ ಸಿ.ಟಿ.ರವಿ ಅಧಿಕಾರಿಗಳಿಗೆ ಸೂಚಿಸಿದರು.

ಸೋಮವಾರ ತಾಲೂಕು ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಕರೆಯಲಾಗಿದ್ದ ಕುಡಿಯುವ ನೀರಿನ ಸಮಸ್ಯೆಗಳ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಧಿಕಾರಿಗಳು, ಜನಪ್ರತಿನಿಧಿಗಳು ದೇವಾಲಯಗಳ ಪ್ರದಕ್ಷಿಣೆ ಹಾಕದಿದ್ದರೂ ಪರವಾಗಿಲ್ಲ. ಪ್ರತಿನಿತ್ಯ ಗ್ರಾಮಗಳ ಪ್ರದಕ್ಷಿಣೆ ಹಾಕಿ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಅಗತ್ಯ ಕ್ರಮ ಕೈಗೊಳ್ಳಲೇ ಬೇಕೆಂದು ವಿವಿಧ ಗ್ರಾಪಂಗಳ ಪಿಡಿಒಗಳಿಗೆ ಸೂಚನೆ ನೀಡಿದ ಅವರು, ಕ್ಷೇತ್ರದ ಹಲವು ಗ್ರಾಮಗಳಲ್ಲಿ ಈಗಾಗಲೆ ಕುಡಿಯುವ ನೀರಿಗೆ ಹಾಹಾಕಾರ ಎದ್ದಿದೆ. ನೀರಿನ ಸಮಸ್ಯೆ ತೀವ್ರವಾಗಿರುವ ಗ್ರಾಮಗಳಿಗೆ ಆದ್ಯತೆ ಮೇರೆಗೆ ಲಭ್ಯ ಇರುವ ನೀರಿನ ಮೂಲಗಳಿಂದ ನೀರಿನ ಸಂಪರ್ಕ ಕಲ್ಪಿಸಬೇಕು. ಇದಕ್ಕೆ ಪ್ರತಿಯೊಬ್ಬರೂ ಹೆಚ್ಚಿನ ಒತ್ತು ನೀಡಬೇಕು ಎಂದರು.

ತಾಲೂಕಿನ ವಿವಿಧ ಗ್ರಾಪಂಗಳ ಪಿಡಿಒಗಳು ಪ್ರತಿನಿತ್ಯ ಗ್ರಾಮಗಳಿಗೆ ಭೇಟಿ ನೀಡಿ ಗ್ರಾಮಸ್ಥರ ನೀರಿನ ಸಮಸ್ಯೆ ಆಲಿಸಬೇಕು. ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ತೊಂದರೆ ಕಂಡು ಬಂದರೂ ಅದನ್ನು ಪರಿಹರಿಸಲು ಮೊದಲು ಆಧ್ಯತೆ ನೀಡಬೇಕು. ಗ್ರಾಪಂ ಅಧಿಕಾರಿಗಳಿಂದಲೇ ಸಮಸ್ಯೆ ಪರಿಹರಿಸಲು ಸಾಧ್ಯವಿದ್ದರೆ ಆ ಕೆಲಸವನ್ನು ತಡ ಮಾಡದೇ ಕೈಗೊಳ್ಳಿ, ತಪ್ಪಿದಲ್ಲಿ ಸಮಸ್ಯೆಯನ್ನು ತಾಪಂ ಇಒ, ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ ಎಇಇ ಹಾಗೂ ನನ್ನ ಗಮನಕ್ಕೆ ತಂದು ಸಮಸ್ಯೆ ಪರಿಹರಿಸಲು ಮುಂದಾಗಬೇಕು. ಟ್ಯಾಂಕರ್ ಮೂಲಕ ನೀರು ಒದಗಿಸುವ ಆವಶ್ಯಕತೆ ಕಂಡುಬಂದಲ್ಲಿ ಸರಕಾರದ ನಿಯಮಾವಳಿಯಂತೆಯೇ ಟ್ಯಾಂಕರ್ ನೀರು ಪೂರೈಕೆಗೆ ಕ್ರಮ ಕೈಗೊಳ್ಳಿ ಎಂದು ಸೂಚಿಸಿದರು.

ನೀರು ಪೂರೈಕೆ ಸಂಬಂಧ ಲಭ್ಯವಿರುವ ಸರಕಾರಿ ಬೋರ್‍ವೆಲ್‍ಗಳಿಂದ ನೀರು ಸರಬರಾಜು ಮಾಡಲು ಕ್ರಮವಹಿಸಿ, ಸರಕಾರಿ ಬೋರ್‍ವೆಲ್ ಇಲ್ಲದ ವೇಳೆ ಖಾಸಗಿ ಬಾವಿಗಳಿಂದ ನೀರು ಪೂರೈಕೆ ಮಾಡುವುದು ಸೂಕ್ತ. ಇವೆರೆಡೂ ಸಾಧ್ಯವಾಗದಿದ್ದಲ್ಲಿ ಅಂತಿಮವಾಗಿ ಟ್ಯಾಂಕರ್ ನೀರು ಪೂರೈಕೆಗೆ ಕ್ರಮವಹಿಸಿ ಎಂದ ಅವರು, ಟ್ಯಾಂಕರ್ ನೀರು ಪೂರೈಕೆ ವೇಳೆ ಸರಕಾರದ ನಿಯಮಾವಳಿಯಂತೆಯೇ ಟೆಂಡರ್ ಕರೆಯಬೇಕು. ಟ್ಯಾಂಕರ್ ಗಳಿಗೆ ಜಿಪಿಎಸ್ ಅಳವಡಿಸಿ ನೀರು ಪೂರೈಸಿದಲ್ಲಿ ಟ್ಯಾಂಕರ್ ಮಾಲಕರಿಗೆ ಬಿಲ್ ಪಾವತಿ ಸಮಸ್ಯೆ ಎದುರಾಗುವುದಿಲ್ಲ ಎಂದು ಅವರು ಸಲಹೆ ನೀಡಿದರು.

ತಾಲೂಕಿನ ವಿವಿಧ ಗ್ರಾಮಗಳಲಿ ಜಾನುವಾರುಗಳಿಗೂ ಕುಡಿಯುವ ನೀರು ಸಿಗುತ್ತಿಲ್ಲ. ಜಾನುವಾರುಗಳಿಗೆ ನೀರು ಒದಗಿಸುವುದೂ ನಮ್ಮ ಕರ್ತವ್ಯ. ಪ್ರತೀ ಗ್ರಾಮದಲ್ಲಿಯೂ ಜಾನುವಾರು ಕಟ್ಟೆಗಳನ್ನು ಕಟ್ಟಬೇಕು. ಅದರಲ್ಲಿ ಪ್ರತಿನಿತ್ಯ ನೀರು ಇರುವಂತೆ ನೋಡಿಕೊಳ್ಳಬೇಕು ಎಂದ ಅವರು, ಈ ಕೆಲಸವನ್ನು ಕಾಟಾಚಾರಕ್ಕೆ ಮಾಡಿದಲ್ಲಿ ಅಂತಹವರ ವಿರುದ್ಧ ಶಿಸ್ತುಕ್ರಮ ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು. 

2017-18ನೇ ಸಾಲಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಿದ ಬಾಬ್ತು ಇನ್ನೂ ಪಾವತಿಸಿಲ್ಲ. ಇದರಿಂದಾಗಿ ಪ್ರತಿನಿತ್ಯ ನೀರು ಸರಬರಾಜು ಮಾಡಿದವರು ಗಲಾಟೆ ಮಾಡುತ್ತಿದ್ದಾರೆ. ಹಳೆಯ ಬಿಲ್ ಪಾವತಿಸದೆ ಈ ಬಾರಿ ನೀರು ಸರಬರಾಜು ಮಾಡುವುದಿಲ್ಲವೆಂದು ಹೇಳುತ್ತಿದ್ದಾರೆ ಎಂದು ಪಿ.ಡಿ.ಒ.ಗಳು ಸಭೆಯಲ್ಲಿ ದೂರಿದರು. ಇದಕ್ಕೆ ಉತ್ತರಿಸಿದ ಶಾಸಕ ಸಿ.ಟಿ.ರವಿ, ಈ ಹಿಂದೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಿದ ಬಾಬ್ತು ಚಿಕ್ಕಮಗಳೂರು ತಾಲೂಕಿನಲ್ಲಿ 46.19 ಲಕ್ಷ ರೂ. ಹಾಗೂ ಕಡೂರು ತಾಲೂಕಿನಲ್ಲಿ 3 ಕೋಟಿ ರೂ. ಬಿಲ್ ಪಾವತಿಸಲು ಬಾಕಿ ಇದೆ. ಹಳೆಯ ಬಿಲ್ ಪಾವತಿಸಲು ಸರಕಾರವನ್ನು ಒತ್ತಾಯಿಸಲು ಸಭೆಯಲ್ಲಿ ನಿರ್ಣಯ ಕೈಗೊಂಡು ಪ್ರಸ್ತಾವ ಸಲ್ಲಿಸಲಾಗುವುದು ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಸೋಮಶೇಖರ್, ಬೆಳವಾಡಿ ರವೀಂದ್ರ, ಜಸಿಂತಾ ಅನಿಲ್ ಕುಮಾರ್, ವಿಜಯಕುಮಾರ್, ಪ್ರೇಮ ಮಂಜುನಾಥ್, ತಾಲೂಕು ಪಂಚಾಯತ್ ಅಧ್ಯಕ್ಷ ನೆಟ್ಟೇಕೆರೆ ಜಯಣ್ಣ, ಉಪಾಧ್ಯಕ್ಷ ರಮೇಶ್, ಸ್ಥಾಯಿ ಸಮಿತಿ ಅಧ್ಯಕ್ಷೆ ಭವ್ಯನಟೇಶ್ ಉಪಸ್ಥಿತರಿದ್ದರು.

ಕೆಲವು ಗ್ರಾಮಗಳಲ್ಲಿ ವೋಲ್ಟೇಜ್ ಕಡಿಮೆ ಇರುವುದರಿಂದ ಕುಡಿಯುವ ನೀರು ಸರಬರಾಜು ಮಾಡಲು ಕಷ್ಟವಾಗುತ್ತಿದೆ ಎಂಬ ಮಾಹಿತಿ ಪಡೆದ ಶಾಸಕರು, ಅನಧಿಕೃತವಾಗಿ ಪಂಪ್‍ಸೆಟ್ ಹಾಕಿಕೊಂಡಿರುವುದನ್ನು ಪರಿಶೀಲಿಸಿ ಅದರ ಸಂಪರ್ಕ ತೆಗೆದು ಹಾಕಿ ಎಂದು ಮೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದಾಗ, ಮೆಸ್ಕಾಂ ಅಧಿಕಾರಿಗಳು ಕಾನೂನು ಸುವ್ಯವಸ್ಥೆಗೆ ತೊಂದರೆಯಾಗಬಹುದು ಎಂದು ಆ ಕೆಲಸ ಮಾಡಿಲ್ಲ ಎಂಬ ಉತ್ತರ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿ.ಟಿ.ರವಿ, ಅನಧಿಕೃತ ಸಂಪರ್ಕ ಕಡಿತಗೊಳಿಸಲು ಏನು ಕ್ರಮ ಕೈಗೊಂಡಿದ್ದೀರಿ. ಅನಧಿಕೃತ ಸಂಪರ್ಕಗಳನ್ನು ಅಧಿಕೃತಪಡಿಸಿಕೊಳ್ಳಬೇಕು. ಇಲ್ಲವಾದರೆ ಪೊಲೀಸ್ ನೆರವನ್ನು ಪಡೆದು ಅನಧಿಕೃತ ಸಂಪರ್ಕ ಕಡಿತಗೊಳಿಸಿ. ಆಗ ಸಮರ್ಪಕ ವೋಲ್ಟೇಜ್ ನೀಡಲು ಸಾಧ್ಯವಾಗುತ್ತದೆ. ಹಲವೆಡೆಗಳಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರು ಒದಗಿಸುವ ಸ್ಥಳಗಳಿಂದ ತೋಟಗಳಿಗೆ, ಜಮೀನುಗಳಿಗೆ ಸ್ಪ್ರಿಂಕ್ಲರ್ ಗಳನ್ನು ಹಾಕಲಾಗಿದೆ ಎಂಬ ದೂರು ಕೇಳಿ ಬರುತ್ತಿದೆ. ಯಾವುದೇ ಕಾರಣಕ್ಕೂ ಇದಕ್ಕೆ ಆಸ್ಪದ ಕೊಡಬಾರದು. ಕೂಡಲೆ ಅಂತಹವುಗಳನ್ನು ಪತ್ತೆ ಹಚ್ಚಿ. ಯಾರೇ ಆದರೂ ಸಾರ್ವಜನಿಕರಿಗೆ ಕುಡಿಯುವ ನೀರು ಒದಗಿಸಲು ಅಡ್ಡಿಪಡಿಸಬಾರದು. ಅಂತಹವರ ವಿರುದ್ಧ ಕಾನೂನು ರೀತಿಯ ಕ್ರಮ ತೆಗೆದುಕೊಳ್ಳಿ ಎಂದು ಸೂಚಿಸಿದರು.

ಕಾಲ್ ಸೆಂಟರ್, ವಾಟ್ಸ್ ಆಪ್ ಗ್ರೂಪ್:

ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಲು ಅನುಕೂಲವಾಗುವ ನಿಟ್ಟಿನಲ್ಲಿ ಕಾಲ್ ಸೆಂಟರ್ ತೆರೆಯಲು ಸೂಚಿಸಿದ ಶಾಸಕರು, ದಿನದ 24 ಗಂಟೆಯೂ ಕಾಲ್ ಸೆಂಟರ್ ಕಾರ್ಯನಿರ್ವಹಿಸಬೇಕು. ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾದರೂ ಟಾಲ್ ಫ್ರೀ ಸಂಖ್ಯೆ 18004252281ಗೆ ಕರೆ ಮಾಡಿ ತಿಳಿಸಬಹುದು. ಪಿಡಿಓಗಳು, ತಾ.ಪಂ. ಇ.ಓ., ಕಿರಿಯ ಇಂಜಿನಿಯರ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ತಹಶೀಲ್ದಾರ್ ಹಾಗೂ ತಮ್ಮ ಆಪ್ತ ಸಹಾಯಕರು ಇರುವ ವಾಟ್ಸ್ ಆಪ್ ಗ್ರೂಪ್ ತೆರೆಯಲು ತಾಲೂಕು ಪಂಚಾಯತ್ ಇ.ಒ.ಗೆ ರವಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News