ಮಂಡ್ಯ ಜಿಪಂ ಕೆಡಿಪಿ, ಸಾಮಾನ್ಯ ಸಭೆ: ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಕಾವೇರಿದ ಚರ್ಚೆ

Update: 2019-01-21 18:34 GMT

ಮಂಡ್ಯ,ಜ.21: ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಿದ್ದು, ಅಧಿಕಾರಿಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಜಿಪಂ ಸದಸ್ಯರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ಜರುಗಿತು.

ಸೋಮವಾರ ನಗರದ ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ಜಿಪಂ ಅಧ್ಯಕ್ಷೆ ನಾಗರತ್ನಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಹಾಗೂ ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ಸಭೆ ಆರಂಭವಾಗುತ್ತಿದ್ದಂತೆ ನಾಗಮಂಗಲ ತಾಲೂಕಿನ ಚೀಣ್ಯ ಕ್ಷೇತ್ರದ ಸದಸ್ಯೆ ಸುಶೀಲಮ್ಮ, ನನ್ನ ಕ್ಷೇತ್ರದಲ್ಲಿ ಕುಡಿಯುವ ನೀರಿಗೆ ತೊಂದರೆ ಇದೆ. ಸುಮಾರು 47 ಲಕ್ಷ ರೂ. ಅನುದಾನ ಬಂದಿದ್ದರೂ ಕುಡಿಯುವ ನೀರು ಸರಬರಾಜು ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಬೋರೇಗೌಡ ಅವರು ಯೋಜನೆ ಹಾಗೂ ಅನುದಾನ ಬಿಡುಗಡೆಯಲ್ಲಿ ವಿಳಂಬ ಮಾಡುತ್ತಿದ್ದಾರೆ. ಇದಕ್ಕೆ ನನಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಪಟ್ಟು ಹಿಡಿದರು.
ಸಚಿವ ಸಿ.ಎಸ್.ಪುಟ್ಟರಾಜು ಅವರು ಕೂಡಲೇ ಶೀಘ್ರ ಕ್ರಮ ವಹಿಸುವಂತೆ ಸೂಚಿಸಿದ್ದರೂ, ಅಧಿಕಾರಿ ಮಾತ್ರ ಯಾವುದೇ ಕ್ರಮ ಕೈಗೊಂಡಿಲ್ಲ. ಸಚಿವರ ಮಾತಿಗೇ ಬೆಲೆ ಇಲ್ಲದಂತಾಗಿದೆ ಎಂದು ದೂರಿದರು. ಇದಕ್ಕೆ ಕಾಂಗ್ರೆಸ್‍ನ ಇತರೆ ಸದಸ್ಯರು ಬೆಂಬಲ ಸೂಚಿಸಿದರು.

ಅದಕ್ಕೆ ಪ್ರತಿಕ್ರಿಯಿಸಿದ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಕಾರ್ಯಪಾಲಕ ಅಭಿಯಂತರ ಬಸವರಾಜು, ತಾಂತ್ರಿಕವಾಗಿ ಎಲ್ಲ ಕ್ರಮ ಆಗಿದೆ. ಏಜೆನ್ಸಿಗೆ ವಹಿಸುವ ಕ್ರಮದಲ್ಲಿ ಸ್ವಲ್ಪ ತಡವಾಗಿದೆ. ತಕ್ಷಣ ಇದರ ಬಗ್ಗೆ ಪರಿಶೀಲಿಸಿ ಕ್ರಮ ವಹಿಸಲಾಗುವುದು ಎಂದು ಉತ್ತರಿಸಿದರು.

ಉತ್ತರಕ್ಕೆ ತೃಪ್ತರಾಗದ ಸದಸ್ಯೆ ಈ ಕೂಡಲೇ ಸಮಸ್ಯೆಗೆ ಪರಿಹಾರ ನೀಡಬೇಕು. ಅಲ್ಲಿಯವರೆಗೂ ಸಭೆ ನಡೆಯಬಾರದು ಎಂದು ಆಗ್ರಹಿಸಿ ಸಭಾಂಗಣದ ಬಾವಿಗಿಳಿದು ಧರಣಿ ನಡೆಸಿದರು. ಇದರಿಂದ ಸಭೆಯನ್ನು 10 ನಿಮಿಷಗಳ ಕಾಲ ಮುಂದೂಡಲಾಯಿತು. ಆಗ ಇತರೆ ಸದಸ್ಯರು ಸಮಾಧಾನಪಡಿಸಿ ಧರಣಿ ವಾಪಸ್ ಪಡೆಯುವಂತೆ ಮಾಡಿದರು.

ಸದಸ್ಯ ಹನುಮಂತು ಮಾತನಾಡಿ, ಸುಶೀಲಮ್ಮ ಅವರ ಕ್ಷೇತ್ರಕ್ಕೆ ಬಂದಿರುವ ಅನುದಾನವನ್ನು ಯಾಕೆ ಬಿಡುಗಡೆ ಮಾಡಿಲ್ಲ. ಸಮಸ್ಯೆಗಳಿಗೆ ಸ್ಪಂದಿಸದಿದ್ದರೆ ಜನರ ಪ್ರಶ್ನೆಗೆ ಉತ್ತರಿಸುವವರು ನಾವು, ಇಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ ಎಂದು ಕಿಡಿಕಾರಿದರು.

ಸದಸ್ಯ ಚಂದಗಾಲು ಶಿವಣ್ಣ ಮಾತನಾಡಿ, ಜಿಲ್ಲೆಯಾದ್ಯಂತ ಕುಡಿಯುವ ನೀರಿನ ಸಮಸ್ಯೆ ಇದೆ. ಅಧಿಕಾರಿಗಳಿಗೆ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ. ಮಾರ್ಚ್ ಒಳಗೆ ಅನುದಾನ ಬಳಸದಿದ್ದರೆ ಸರ್ಕಾರಕ್ಕೆ ವಾಪಸ್ ಹೋಗಲಿದೆ. ಕೂಡಲೇ ಇದಕ್ಕೆ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.

ಸದಸ್ಯೆ ಸುಶೀಲಮ್ಮ ಮಾತನಾಡಿ, ಬಂದಿರುವ ಅನುದಾನದಲ್ಲಿ ಒಂದೂ ರೂಪಾಯಿಯೂ ಸಹ ಬಿಡುಗಡೆ ಮಾಡಿಲ್ಲ. ಕೂಡಲೇ ಎಇಇ ಅವರನ್ನು ಕರೆಸಿ ತಕ್ಷಣದಲ್ಲೇ ಕೆಲಸ ಆಗುವಂತೆ ಆದೇಶ ನೀಡಬೇಕು ಎಂದು ಪಟ್ಟುಹಿಡಿದರು. ತಕ್ಷಣ ಎಇಇಗೆ ಮೊಬೈಲ್ ಕರೆ ಮಾಡಿದ ಇಇ ಬಸವರಾಜು ಸಭೆ ಹಾಜರಾಗುವಂತೆ ಸೂಚಿಸಿದರು. ಇದಕ್ಕೆ ಸ್ಪಂದಿಸಿದ ಎಇಇ ಬೋರೇಗೌಡ ಒಂದು ಗಂಟೆಯೊಳಗೆ ಬರುವುದಾಗಿ ತಿಳಿಸಿದರು.

ಸದಸ್ಯೆ ಸುಷ್ಮ ಮಾತನಾಡಿ, ಪ್ರತಿ ಸಭೆಗಳಲ್ಲೂ ಅಧಿಕಾರಿಗಳಿಗೆ ಜಿಪಂ ಸದಸ್ಯರು ಯಾರೆಂದು ಪರಿಚಯ ಮಾಡಿಕೊಡುವುದೇ ಆಗಿದೆ. 3 ವರ್ಷಗಳಿಂದ ಅಧಿಕಾರಿಗಳಿಗೆ ಜಿಪಂ ಸದಸ್ಯರ ಪರಿಚಯವಿಲ್ಲ ಎಂದು ಪ್ರಶ್ನಿಸಿದರು. ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಸ್ಥಾಯಿ ಸಮಿತಿ ಅಧ್ಯಕ್ಷ ಶಿವಪ್ರಕಾಶ್ ಮಾತನಾಡಿ, ಎಇಇ ಬೋರೇಗೌಡ ಅವರು, ತಾಲೂಕಿನಲ್ಲಿ ಕೆಲಸ ಮಾಡಲು ಬಂದಿಲ್ಲ. ಕೇವಲ ರಾಜಕೀಯ ಮಾಡಲು ಬಂದಿದ್ದಾರೆ. ಅವರ ವಿರುದ್ಧ ಕ್ರಮ ಆಗಲೇ ಬೇಕು ಎಂದು ಪಟ್ಟು ಹಿಡಿದರು.

ಸದಸ್ಯ ರಾಜೀವ್ ಮಾತನಾಡಿ, ನಿರ್ಲಕ್ಷ್ಯ ವಹಿಸುವ ಹಾಗೂ ಸಭೆಗೆ ಗೈರಾಗುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಎಇಇ ವಿರುದ್ಧ ನೋಟಿಸ್ ಜಾರಿ ಎಚ್ಚರಿಕೆ ನೀಡುವಂತೆ ಜಿಪಂ ಸಿಇಒಗೆ ಆಗ್ರಹಿಸಿದರು. ಇದಕ್ಕೆ ಸ್ಪಂದಿಸಿದ ಸಿಇಓ ಕೆ.ಯಾಲಕ್ಕಿಗೌಡ ಎಇಇಗೆ ನೋಟಿಸ್ ನೀಡುವಂತೆ ಉಪಕಾರ್ಯದರ್ಶಿಗೆ ಸೂಚಿಸಿದರು.

ನಂತರ ಸದಸ್ಯ ಬಿ.ಎಲ್.ದೇವರಾಜು ಮಾತನಾಡಿ, ಕಳೆದ ಹಾಗೂ ಪ್ರಸ್ತುತ ಸರ್ಕಾರಗಳಿಂದ ಜಿಪಂ ಸದಸ್ಯರಿಗೆ ಯಾವುದೇ ಅನುದಾನಗಳು ಬಿಡುಗಡೆಯಾಗಿಲ್ಲ. ಪ್ರತಿ ಸದಸ್ಯರೂ ಸಹ 1 ಲಕ್ಷ ರೂ. ಅನುದಾನಕ್ಕಾಗಿ ಕಿತ್ತಾಡುವ ಪರಿಸ್ಥಿತಿ ಬಂದಿದೆ. ಆದ್ದರಿಂದ ಸರ್ಕಾರಕ್ಕೆ ವಾಪಸ್ ಅನುದಾನ ಹೋಗುವುದನ್ನು ತಡೆಗಟ್ಟಲು ಆದಷ್ಟು ಶೀಘ್ರದಲ್ಲಿಯೇ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದು ಹೇಳಿದರು.

ಸಭೆಯಲ್ಲಿ ಉಪಾಧ್ಯಕ್ಷೆ ಗಾಯಿತ್ರಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಮಂಜು, ರವಿ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News