ಹನೂರು: ವಿಷ ಪ್ರಸಾದ ದುರಂತ ಸಂತ್ರಸ್ತರಿಗೆ ಆಹಾರ ಸಾಮಾಗ್ರಿ ವಿತರಣೆ

Update: 2019-01-21 18:38 GMT

ಹನೂರು,ಜ.21: ತಾಲೂಕಿನ ಸುಳ್ವಾಡಿ ಕಿಚ್‍ಗುತ್ ಮಾರಮ್ಮ ದೇವಸ್ಥಾನದಲ್ಲಿ ವಿಷ ಪ್ರಸಾದಿಂದ ಮೃತಪಟ್ಟ ಕುಟುಂಬಗಳು ಹಾಗೂ ಈ ಘಟನೆಯಿಂದ ಸಂತ್ರಸ್ಥರಾದವರಿಗೆ ಪಿನ್‍ಕೇರ್ ಬ್ಯಾಂಕ್  ಹಾಗೂ ಪಿನ್‍ಕೇರ್ ಕಮ್ಯೂನಿಟಿ ಡೆವಲಪ್‍ಮೆಂಟ್ ಪೌಂಡೇಷನ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಆಹಾರ ಸಾಮಾಗ್ರಿಗಳನ್ನು ವಿತರಿಸಿ ಸಾಂತ್ವಾನ ಹೇಳಿದರು.

ಸೋಮವಾರ ಬಿದರಳ್ಳಿ ಎಂ.ಜಿ.ದೊಡ್ಡಿ ಗ್ರಾಮಗಳಲ್ಲಿ ಮೃತಪಟ್ಟ ಕುಟುಂಬಗಳು ಹಾಗೂ ಸಂತ್ರಸ್ತರಿಗೆ ಆಹಾರ ಪದಾರ್ಥಗಳನ್ನು ವಿತರಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಈ ವೇಳೆ ಬ್ಯಾಂಕ್ ಹಾಗೂ ಪೌಂಡೇಷನ್ ಮೈಸೂರು ವಲಯ ಅಧಿಕಾರಿ ನಾಗರಾಜು ಮಾತನಾಡಿ, ತಮ್ಮದಲ್ಲದ ತಪ್ಪಿಗೆ ಹತ್ತಾರು ಜೀವಗಳು ಪ್ರಾಣ ಕಳೆದುಕೊಂಡರು ಹಾಗೂ ನೂರಾರು ಜನ ಸಂತ್ರಸ್ತರಾದರು. ಇಂತಹದೊಂದು ಘಟನೆ ನಡೆಯಬಾರದಿತ್ತು. ಸಂತ್ರಸ್ತರು ಮುಂದಿನ ದಿನಗಳಲ್ಲಿ ಧೈರ್ಯವನ್ನು ತೆಗೆದುಕೊಂಡು ಜೀವನ ಸಾಗಿಸಿ. ಸಂತ್ರಸ್ತರಲ್ಲಿ ನಮ್ಮ ಬ್ಯಾಂಕ್‍ನಿಂದ ಸಾಲ ಪಡೆದವರು ಇದ್ದಾರೆ. ಆದರೂ ಬ್ಯಾಂಕ್‍ನ ಮುಖ್ಯ ಕಛೇರಿಯ ಮಾರ್ಗದರ್ಶನದಲ್ಲಿ ಮಾನವೀಯ ದೃಷ್ಟಿಯಿಂದ ನಮ್ಮ ಬ್ಯಾಂಕ್ ವತಿಯಿಂದ ಕೈಲಾದ ಸಹಾಯವನ್ನು ಮಾಡಲಾಗುತ್ತಿದೆ ಎಂದು ತಿಳಿಸಿದರು.

ನಂತರ ಕೊಳ್ಳೇಗಾಲ ಶಾಖೆಯ ಯೂನಿಯನ್ ಮ್ಯಾನೇಜರ್ ರಾಜೇಂದ್ರ ಪ್ರಸಾದ್ ಮಾತನಾಡಿ, ಸಂಕಷ್ಟದಲ್ಲಿ ಇರುವ ಸುಳ್ವಾಡಿ ಸಂತ್ರಸ್ಥರಿಗೆ ಮಾನವೀಯ ನೆಲೆಗಟ್ಟಿನಲ್ಲಿ ಆರ್ಥಿಕವಾಗಿ ಸಬಲರಾದವರು ನೆರವು ನೀಡುವ ಮೂಲಕ ಮಾನವೀಯತೆಯನ್ನು ತೋರಬೇಕಾಗಿದೆ. ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸುವ ಅಗತ್ಯವಿದೆ. ಸಂತ್ರಸ್ತರು ಯಾವುದೇ ಕಾರಣಕ್ಕೂ ಎದೆಗುಂದಬಾರದು. ನಿಮ್ಮ ಜೊತೆ ಅನೇಕ ಸಂಘ ಸಂಸ್ಥೆಗಳು ಹಾಗೂ ಸರ್ಕಾರ ಜನಪ್ರತಿನಿಧಿಗಳು ಇದ್ದಾರೆ ಎಂದು ಸಾಂತ್ವನ ಹೇಳಿದರು.

ಈ ಸಂದರ್ಭದಲ್ಲಿ ಕೊಳ್ಳೇಗಾಲ ಶಾಖಾ ವ್ಯವಸ್ಥಾಪಕ ಕೆಂಡಗಣ್ಣ ಸ್ವಾಮಿ, ಪೌಂಡೇಶನ್ ಸಮನ್ವಯಾಧಿಕಾರಿ ಬಸವರಾಜು ಹಾಗೂ ಸಂತ್ರಸ್ತರು ಇದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News